ಕನಿಷ್ಠ ವೇತನ ವ್ಯಾಪ್ತಿಗೆ ಗ್ರಂಥಾಲಯ ಮೇಲ್ಚಿಚಾರಕರ: ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ರಾಜ್ಯದ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಮತ್ತು ಮೇಲ್ವಿಚಾರಕರ ರಾಜ್ಯ ಸಮ್ಮೇಳನ ಉದ್ಘಾಟನೆ ಮತ್ತು ರಾಜ್ಯದಲ್ಲಿ 6599 ಹೊಸ ಗ್ರಾಮ ಗ್ರಂಥಾಲಯ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪುಸ್ತಕಗಳು ಒಳ್ಳೆಯ ಸ್ನೇಹಿತನಿದ್ದಂತೆ. ಗ್ರಂಥಾಲಯಗಳಿಗೆ ಹೋಗುವುದು ಅತ್ಯಂತ ಉತ್ತಮ ಹವ್ಯಾಸ. ಗ್ರಾಮಗಳಲ್ಲಿ 6599 ಗ್ರಾಮ‌ಮಟ್ಟದ ಗ್ರಂಥಾಲಯಗಳನ್ಮು ತೆರೆಯುವ ನಿರ್ಧಾರ ಮಾಡಿ ಘೋಷಣೆ ಮಾಡಿದ್ದೇವೆ ಎಂದರು.

ಜ್ಞಾನ ವಿಕಾಸ ಕೇವಲ ಶಾಲಾ ಶಿಕ್ಷಣದಿಂದ ಮಾತ್ರ ಸಾಧ್ಯವಿಲ್ಲ. ಶಾಲೆಗಳ ಹೊರಗೂ ಕಲಿಕೆ ಅಗತ್ಯ. ಸಾವಿರಾರು ವರ್ಷಗಳ ಕಾಲ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಸಮುದಾಯಗಳಿಗೆ ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿದೆ.

ನಾವು 78 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಇಷ್ಡು ವರ್ಷಗಳಾದರೂ ನೂರಕ್ಕೆ ನೂರು ಸಾಕ್ಷರತೆ ಸಾಧ್ಯವಾಗಿಲ್ಲ. ಇದನ್ನು ಸಾಧಿಸುವ ದಿಕ್ಕಿನಲ್ಲಿ ನಾವು ಶ್ರಮಿಸಬೇಕಿದೆ ಎಂದರು.

ಮೌಡ್ಯ, ಕಂದಾಚಾರಗಳು ತೊಲಗಬೇಕಾದರೆ ಓದು ಮುಖ್ಯ. ಮೌಢ್ಯದ ಕಾರಣದಿಂದ ಗ್ರಾಮೀಣ ಜನರ ಬದುಕು ಬಹಳ ಹಿಂದುಳಿಯುವಂತಾಗಿದೆ. ಪ್ರತಿಯೊಬ್ಬ ಯುವಕ, ಯುವತಿಯರು ಹಾಗೂ ಮಕ್ಕಳು ಗ್ರಂಥಾಲಯಗಳ ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಮಾಡಬೇಕು. ಇದೇ ಅಂಬೇಡ್ಕರ್ ಅವರ ಕನಸಾಗಿತ್ತು ಎಂದು ಅವರು ಹೇಳಿದರು.

ಜ್ಞಾನ ಪಡೆಯುವುದು ಎಂದರೆ ಮನುಷ್ಯರಾಗಿ ಬಾಳುವುದು. ಎಲ್ಲಾ ಮಕ್ಕಳೂ ವಿಶ್ವ ಮಾನವರಾಗಿ ಹುಟ್ಟುತ್ತಾರೆ. ಸಾಮಾಜಿಕ ಪ್ರಭಾವದಿಂದ ಬೆಳೆಯುತ್ತಾ ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದ್ದಾರೆ. ಆದ್ದರಿಂದ ಬೆಳೆಯುತ್ತಲೂ ನಾವು ವಿಶ್ವ ಮಾನವರಾಗಿ ಉಳಿಯುವಂತಹ ಪ್ರಯತ್ನ ಮಾಡಬೇಕು. ಆಗ ಮಾತ್ರ ಮಾನವನ ಹುಟ್ಟು ಸಾರ್ಥಕ ಆಗುತ್ತದೆ ಎಂದರು.

ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದಲೇ ಗ್ರಾಮ ಮಟ್ಟದಲ್ಲೂ ಉತ್ತಮ ಗ್ರಂಥಾಲಯಗಳನ್ನು ಆರಂಭಿಸುತ್ತಿದೆ. ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ‌ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *