ಧಾಕಾ: ರಾಜೀನಾಮೆ ಹಾಗೂ ದೇಶ ಬಿಟ್ಟು ಶೇಖ್ ಹಸೀನಾ ಪಲಾಯನಕ್ಕೆ ಕಾರಣವಾದ ಹೋರಾಟಗಾರರು ಇದೀಗ ದೇಶದ ಸುಪ್ರೀಂ ಕೋರ್ಟ್ ಅನ್ನು ತಮ್ಮ ಮುಂದಿನ ಗುರಿಯಾಗಿಸಿ ಮುಖ್ಯ ನ್ಯಾಯಮೂರ್ತಿ ಹಾಗೂ ಇತರ ನ್ಯಾಯಾಧೀಶರುಗಳಿಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಒಂದು ಗಂಟೆ ಗಡುವು ನೀಡಿರುವ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಮತ್ತು ಅಪೀಲು ವಿಭಾಗದ ನ್ಯಾಯಾಧೀಶರು ಇಂದೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್ ಹೊರಗೆ ಪ್ರತಿಭಟನಾಕಾರರು ನಿಂತು ಪ್ರತಿಭಟಿಸುತ್ತಿದ್ದಾರೆ ಹಾಗೂ ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ನ್ಯಾಯಾಧೀಶರ ನಿವಾಸಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ಈ ಘೋಷಣೆಯನ್ನು ತಾರತಮ್ಯ ವಿರೋಧಿ ವಿದ್ಯಾರ್ಥಿ ಆಂದೋಲನದ ಸಂಘಟಕರಲ್ಲೊಬ್ಬರಾದ ಹಸ್ನತ್ ಅಬ್ದುಲ್ಲಾ ನ್ಯಾಯಾಲಯದ ಆವರಣದಲ್ಲಿ ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಭೇಷರತ್ತಾಗಿ ರಾಜೀನಾಮೆ ನೀಡಬೇಕೆಂದು ಕೋರಿ ಇಂದು ಮುಂಜಾನೆ ದೇಶದ ಯುವಜನ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಫೇಸ್ಬುಕ್ ಪೋಸ್ಟ್ ಒಂದರ ಮುಖಾಂತರ ಆಗ್ರಹಿಸಿದ್ದರು.
ಇದನ್ನೂ ಓದಿ: ರಷ್ಯಾದೊಳಗೆ 30 ಕಿ.ಮೀ.ವರೆಗೂ ಪ್ರವೇಶಿಸಿದ ಉಕ್ರೇನ್ ನ 1000 ಸೇನಾ ತುಕಡಿ!
ಇಂದು ಸುಪ್ರೀಂ ಕೋರ್ಟ್ ಹೊರಗೆ ಸೇರಿದ್ದ ಪ್ರತಿಭಟನಾಕಾರರು ಮುಖ್ಯ ನ್ಯಾಯಮೂರ್ತಿ ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ನಂತರದ ಸುದ್ದಿಗಳು ಸಿಜೆಐ ಅಲ್ಲಿಂದ ತಪ್ಪಿಸಿಕೊಂಡಿರಬೇಕೆಂದು ಹೇಳಿದ್ದವು.
ಇಂದಿನ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಹೊಸದಾಗಿ ರಚನೆಯಾದ ಮಧ್ಯಂತರ ಸರ್ಕಾರದ ಜೊತೆ ಸಮಾಲೋಚಿಸದೆಯೇ ಇಂದು ಕಲಾಪ ನಡೆಸಲಾಗುತ್ತಿತ್ತೆಂದು ವಿದ್ಯಾರ್ಥಿ ಹೋರಾಟಗಾರರು ಆರೋಪಿಸಿ ಪ್ರತಿಭಟನೆಗೆ ಮುಂದಾಗಿದ್ದರು.
ಇದನ್ನೂ ನೋಡಿ: ಸೂರಿ ದಾರಿಯಲ್ಲಿ ಕಾರ್ಮಿಕರು ಸಂಘಟಿತರಾಗಬೇಕು – ಪುರುಷೋತ್ತಮ ಬಿಳಿಮಲೆ, Janashakthi Media