ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ; ಉಪವಾಸ ಹೋರಾಟ ಅಂತ್ಯ

ಕೋಲಾರ: ಕೇಂದ್ರ ಸರ್ಕಾರ ಒಡೆತನದ ಬೆಮೆಲ್(BEML)​ 1964 ರಲ್ಲಿ ಕೆಜಿಎಫ್​ನಲ್ಲಿ ಕಂಪನಿಯನ್ನು ಸ್ಥಾಪನೆ ಮಾಡಲಾಗಿದೆ. ಈ ಬೃಹತ್​ ಕಾರ್ಖಾನೆಯಲ್ಲಿ ರಕ್ಷಣಾ ಇಲಾಖೆಗೆ ಬೇಕಾದ ವಾಹನಗಳು ಹಾಗೂ ಗಣಿಯಲ್ಲಿ ಕೆಲಸ ಮಾಡಲು ಬೇಕಾದ ಯಂತ್ರಗಳು ಮತ್ತು ರೈಲ್ವೇ ಕೋಚ್​ಗಳನ್ನು ತಯಾರಿಸುತ್ತಾರೆ. ಬೆಮೆಲ್​ ಕಂಪನಿ ಕರ್ನಾಟಕದಲ್ಲಿ ಕೆಜಿಎಫ್​, ಬೆಂಗಳೂರು, ಮತ್ತು ಮೈಸೂರಿನಲ್ಲಿ ಘಟಕಗಳನ್ನು ಹೊಂದಿದೆ.

ಅಲ್ಲದೆ ಕೇರಳದ ಪಾಲಕ್ಕಾಡ್​ನಲ್ಲೂ ಕೂಡ ಬೆಮೆಲ್​ ಬೃಹತ್​ ಘಟಕ ಹೊಂದಿದೆ. ಹೀಗಿರುವಾಗ ಇತ್ತೀಚೆಗೆ ಕೆಜಿಎಫ್​ನಲ್ಲಿರುವ ಬೆಮೆಲ್​ ಕಂಪನಿಯ ಘಟಕದಲ್ಲಿನ ಸಾವಿರಾರು ಜನ ಗುತ್ತಿಗೆ ಕಾರ್ಮಿಕರು ತಮ್ಮ ವೇತನ ಪರಿಷ್ಕರಣೆ, ಗುತ್ತಿಗೆ ಕಾರ್ಮಿಕರನ್ನು ಅವರ ಸೇವಾ ಅವಧಿ ಆಧಾರದಲ್ಲಿ ಉದ್ಯೋಗ ಖಾಯಂ ಮಾಡಬೇಕು.

ಗುತ್ತಿಗೆ ಕಾರ್ಮಿಕರಿಗೂ ಖಾಯಂ ಕಾರ್ಮಿಕರಿಗೆ ನೀಡುವ ಸೌಲತ್ತುಗಳನ್ನು ನೀಡಬೇಕು ಎಂದು ಹಲವು ಬೇಡಿಕೆಗಳನ್ನಿಟ್ಟು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಹೋರಾಟ ಮಾಡುತ್ತಿದ್ದರು. ಈ ನಡುವೆ ಇತ್ತೀಚೆಗೆ ಬೆಮೆಲ್​ ಕಂಪನಿ ಉತ್ತರ ಭಾರತದ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಸದಾಗಿ ನೇಮಕ ಮಾಡಿಕೊಂಡು ಕೆಲಸಕ್ಕೆ ನಿಯೋಜನೆ ಮಾಡಿತ್ತು.

ಇದನ್ನೂ ಓದಿ: ಭಾಷಾ ಅಭಿವೃದ್ಧಿಗಾಗಿ ಉಪಯುಕ್ತ ಯೋಜನೆ ರೂಪಿಸುವ ತುರ್ತು ಅಗತ್ಯವಿದೆ: ಎಂ. ವೀರಪ್ಪ ಮೊಯಿಲಿ

ಇದರಿಂದ ಗುತ್ತಿಗೆ ಕಾರ್ಮಿಕರು ಬೆಮೆಲ್​ ಕಂಪನಿಯ ಆಡಳಿತ ಮಂಡಳಿ ಕ್ರಮವನ್ನು ಖಂಡಿಸಿ ಜುಲೈ 27 ರಿಂದ ಕಂಪನಿ ಒಳಗೆ ಉಪವಾಸ ಹೋರಾಟ ಆರಂಭಿಸಿದ್ದರು. ರಾತ್ರಿ ಇಡೀ ಪ್ರತಿಭಟನೆ ಮಾಡಿದ್ರು ಯಾವುದೇ ಪ್ರಯೋಜನವಾಗಿರಲಿಲ್ಲ.

ಬೆಮೆಲ್​ ಕಂಪನಿ ಪ್ರತಿಭಟನಾ ನಿರತರ ಜೊತೆಗೆ ನಿಂತ ಶಾಸಕರು

ಈ ವೇಳೆ ಬೆಮೆಲ್​ ಕಂಪನಿ ಪ್ರತಿಭಟನಾ ನಿರತರಿಗೆ ಊಟ ನೀಡಿರಲಿಲ್ಲ. ಅಲ್ಲದೆ ಹೊರಗಿನ ಊಟ ನೀಡಲು ನಿರ್ಬಂಧ ಹೇರಿತ್ತು. ಈ ವೇಳೆ ಬೆಮೆಲ್​ ಕಂಪನಿ ಒಳಗೆ ಹಾಗೂ ಹೊರಗೆ 2500ಕ್ಕೂ ಹೆಚ್ಚು ಕಾರ್ಮಿಕರು ಜಮಾಯಿಸಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್​ ಮಾಡಲಾಗಿತ್ತು.

ಬೆಳಿಗ್ಗೆಯೇ ಕಂಪನಿಗೆ ಕೆಜಿಎಫ್​ ಶಾಸಕಿ ರೂಪಕಲಾ ಹಾಗೂ ಬಂಗಾರಪೇಟೆ ಶಾಸಕ ಎಸ್​. ಎನ್. ನಾರಾಯಣಸ್ವಾಮಿ ಭೇಟಿ ನೀಡಿ ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಿದರು. ನಂತರ ಕೇಂದ್ರ ಸರ್ಕಾರದ ದೋರಣೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕುಗಿದರು. ಜೊತೆಗೆ ಬೆಮೆಲ್ ಕಂಪನಿ​ ಕಾರ್ಮಿಕರ ಬೇಡಿಕೆಗೆ ಸ್ಪಂಧಿಸದಿದ್ದರೆ ಅವರ ಜೊತೆ ಯಾವ ಹಂತದ ಹೋರಾಟಕ್ಕೂ ತಾವು ನಿಲ್ಲುವುದಾಗಿ ಹೇಳಿದರು.

ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ

ಇದೇ ವೇಳೆ ಬೆಮೆಲ್​ ಕಂಪನಿಗೆ ಕಾರ್ಮಿಕರ ಪರವಾಗಿ ಕೋಲಾರ ಸಂಸದ ಮಲ್ಲೇಶ್ ಬಾಬು ಕೂಡ ಬೇಟಿ ನೀಡಿ ಕಾರ್ಮಿಕರ ಮನವೊಲಿಸಿ  ಕಾರ್ಮಿಕರ ಬೇಡಿಕೆ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸುವುದಾಗಿ ಹೇಳಿದರು. ಅಲ್ಲದೆ ಕಳೆದ 24 ಗಂಟೆಯಿಂದ ಉಪವಾಸವಿದ್ದ ಕಾರ್ಮಿಕರಿಗೆ ಊಟ ಮಾಡುವಂತೆ ಮನವೊಲಿಸಿದರು.

ನಂತರ ಜುಲೈ 30ರ ಒಳಗೆ ಕಾರ್ಮಿಕರ ಸಂಘಟನೆಗಳ ಮುಖಂಡರನ್ನು ದೆಹಲಿಗೆ ಕರೆದುಕೊಂಡು ಹೋಗಿ ಬೆಮೆಲ್​ ಕಂಪನಿಯ ಆಡಳಿತ ಮಂಡಳಿ ಜೊತೆಗೆ ಮಾತನಾಡಿಸಿ ಸಾಧ್ಯವಾದಷ್ಟು ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಈವೇಳೆ ಪ್ರತಿಭಟನಾನಿರತ ಕಾರ್ಮಿಕರು ತಮ್ಮ ಪ್ರತಿಭಟನೆ ಹಿಂಪಡೆಯುವುದಾಗಿ ತಿಳಿಸಿದರು.

ಒಟ್ಟಾರೆ ಹಲವು ವರ್ಷಗಳಿಂದ ಬೆಮೆಲ್​ ಕಂಪನಿ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಿದೆ. ಇಷ್ಟು ದಿನ ಬೆಮೆಲ್ ಕಂಪನಿಯನ್ನು​ ಖಾಸಗೀಕರಣ ಮಾಡದಂತೆ ಪ್ರತಿಭಟನೆ ನಡೆಸಿದ್ದ ಕಾರ್ಮಿಕರು, ಈಗ ಗುತ್ತಿಗೆ ಕಾರ್ಮಿಕರು ಉದ್ಯೋಗ ಖಾಯಂ, ವೇತನ ಪರಿಷ್ಕರಣೆ ಸೇರಿ ಹಲವು ಬೇಡಿಕೆಗಳ ಮೂಲಕ ಮತ್ತೆ ಹೋರಾಟದ ಹಾದಿ ಹಿಡಿದಿದ್ದು, ಬೆಮೆಲ್​ ಆಡಳಿತ ಮಂಡಳಿ ಇವರ ಬೇಡಿಕೆಗೆ ಮಣಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ನೋಡಿ: ಚಾರ್ಮಾಡಿ ಗುಡ್ಡ ಕುಸಿತ : ರೈಲು, ರಸ್ತೆ ಬಂದ್‌Janashakthi Media

Donate Janashakthi Media

Leave a Reply

Your email address will not be published. Required fields are marked *