ಬೆಂಗಳೂರು: ಡೆಂಗ್ಯೂ ನಮ್ಮ ರಾಜ್ಯಾದ್ಯಂತ ಹರಡುತ್ತಿದೆ. ಕೋವಿಡ್ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಇದನ್ನು ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಅವರು ಡೆಂಗ್ಯೂ ಜ್ವರದ ನಿಯಂತ್ರಣ ಅಂದ್ರೆ ಸೊಳ್ಳೆಯ ನಿಯಂತ್ರಣ. ಸೊಳ್ಳೆ ನಿಯಂತ್ರಣವಾದ್ರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲದ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಇದು. ಡೆಂಗ್ಯೂ ತಡೆಗಟ್ಟದಿದ್ರೆ ಚಿಕನ್ ಗುನ್ಯಾ, ಝಿಕಾ ವೈರಸ್ ಬರಬಹುದು ಎಂದು ಎಚ್ಚರಿಸಿದ್ದಾರೆ.
ಡೆಂಗ್ಯೂ ರಾಜ್ಯಾದ್ಯಂತ ಹರಡಿರುವುದರಿಂದ ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯವಿದೆ. ಇದಕ್ಕಾಗಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ನಿಯಂತ್ರಿಸಲು ಪ್ರತ್ಯೇಕ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಲಾಗಿದೆ. ಲ್ಯಾಬ್ ಗಳು ಹೆಚ್ಚು ಹಣ ವಸೂಲಿ ಮಾಡಿದ್ರೆ ಅವುಗಳ ಬಾಗಿಲು ಮುಚ್ಚಿಸಬೇಕು ಎಂದಿದ್ದಾರೆ.
ಸರಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂಥ ಆಸ್ಪತ್ರೆ, ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಂಥ ಲ್ಯಾಬೊರೇಟರಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು. ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದವು ಸಕಾಲದಲ್ಲಿ ಮುಗಿಯುತ್ತಿಲ್ಲ. ಎಲ್ಲವೂ ಅರ್ಧರ್ಧವಾಗಿ ನಿಲ್ಲುತ್ತವೆ. ಮಳೆ ಬಂದಾಗ ಅಲ್ಲೆಲ್ಲ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ವಿಶ್ಲೇಷಿಸಿದರು.
ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಗ್ಯೂ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕಿದೆ ಎಂದು ತಿಳಿಸಿದರು. ಈ ಟಾಸ್ಕ್ ಫೋರ್ಸ್, ಪರಿಣತರ ಸಲಹೆ ಪಡೆಯಬೇಕು ಎಂದರು.
ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲ ಶಾಲೆ- ಕಾಲೇಜುಗಳಿಗೆ ಸುತ್ತೋಲೆ ಕಳಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಗ್ಯೂ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಎಚ್ಚರಿಸಿದರು.