ಜೂನ್ 28ರಿಂದ ಜುಲೈ 3 ರವರೆಗೆ ರಾಜ್ಯದ ಕಟ್ಟಡ ಕಾರ್ಮಿಕರು ರಾಜ್ಯಾದ್ಯಂತ ಜಿಲ್ಲಾ / ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ
– ಲಿಂಗರಾಜು ಮಳವಳ್ಳಿ
ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2006 ರಲ್ಲಿ ಸ್ಥಾಪನೆ ಆಯ್ತು. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಈ ಕಲ್ಯಾಣ ಮಂಡಳಿಗೆ ಅನುದಾನ ಕೊಡುವುದಿಲ್ಲ. 1996ರ ಕಾಯ್ದೆ ಪ್ರಕಾರ ನಾವು ನೀವು ಕಟ್ಟುವ ಬಿಲ್ಡಿಂಗ್ ಮೇಲೆ 1% ಸೆಸ್ ಹಣವನ್ನು ಈ ಮಂಡಳಿಗೆ ಕೊಡುತ್ತೇವೆ. ವಾರ್ಷಿಕ ಆಸ್ತಿ ತೆರಿಗೆ ಪಾವತಿ ಮಾಡುವಾಗಲೇ ಇದನ್ನೂ ಸೇರಿಸಿ ತೆರಿಗೆ ಕಟ್ಟುತ್ತೇವೆ.
ಹೀಗೆ ಶೇಖರಣೆ ಆದ ನಿಧಿಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿಯೇ ಖರ್ಚು ಮಾಡಬೇಕೆಂದು ಕಾನೂನು ಹೇಳುತ್ತದೆ. ಈ ಹಣ ಶೇಖರಣೆ ಆಗುತ್ತಾ ಆಗುತ್ತಾ ಬೊಮ್ಮಾಯಿ ಸರ್ಕಾರದ ಅವಧಿಯ ವೇಳೆಗೆ ಬರೋಬ್ಬರಿ 12 ಸಾವಿರ ಕೋಟಿ ರೂಪಾಯಿ!
ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ 19 ಸೌಲಭ್ಯಗಳನ್ನು ಘೋಷಿಸಿದೆ. ಇದರಲ್ಲಿ 11 ಮಾತ್ರವೇ ಜಾರಿಯಲ್ಲಿವೆ! ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ, ಮದುವೆ ಆದಲ್ಲಿ, ಆರೋಗ್ಯ ತಪ್ಪಿ ಆಸ್ಪತ್ರೆ ಸೇರಿದ್ದಲ್ಲಿ, ಅಪಘಾತ ಆದಲ್ಲಿ, ಸಹಜ ಮರಣ, ಅಪಘಾತದಿಂದ ಮರಣ ಹೊಂದಿದಲ್ಲಿ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಆದಲ್ಲಿ, ಇತ್ಯಾದಿಗಳಾಗಿ ಕಲ್ಯಾಣ ಮಂಡಳಿ ನಿಧಿಯಿಂದ ಡಿಬಿಟಿ ಮೂಲಕ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿ ಆಗುತ್ತದೆ. ಕಾರ್ಮಿಕ ಯಾವುದೇ ಸೌಲಭ್ಯ ಪಡೆಯಬೇಕಾದಲ್ಲಿ ಅರ್ಜಿ ಸಲ್ಲಿಸಬೇಕು. 1996 ಕಾಯ್ದೆಯಲ್ಲಿ ಇವೆಲ್ಲವನ್ನೂ ಬಿಗಿಯಾಗಿ ಷರಾ ಬರೆಯಲಾಗಿದೆ.
ಆದರೆ ಆಗುತ್ತಿರುವುದೇನು?
ಬೊಮ್ಮಾಯಿ ಸರ್ಕಾರದ ವೇಳೆ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ತಮ್ಮ ಅವಧಿಯಲ್ಲಿ #6000 ಕೋಟಿ ಖಾಲಿ ಮಾಡಿ ಹೋದರು. ಟಿವಿಗಳು, ಕಂಪ್ಯೂಟರ್ ಗಳು, ಇನ್ನೋವಾ ಕಾರುಗಳು, ಕಚೇರಿಯ ಐಷಾರಾಮಿ ಒಳ ವಿನ್ಯಾಸ, ಜಾಹಿರಾತು, ಪ್ರಕಟಣೆ, ಸೋಫಾ, ಖುರ್ಚಿಗಳು ಇತ್ಯಾದಿಗಳ ಹೆಸರಿನಲ್ಲಿ ಮನಸೋಇಚ್ಛೆ ಖರ್ಚು ಮಾಡಿದರು.
ಮುಂದುವರಿದು ಕಾರ್ಮಿಕರ ಹೆಸರಿನಲ್ಲಿ ಟೂಲ್ ಕಿಟ್, ರೇಷನ್ ಕಿಟ್, ಬೂಸ್ಟರ್ ಕಿಟ್ (ಆಯುರ್ವೇದ ಪೌಡರ್) ಸ್ಕೂಲ್ ಕಿಟ್, ಲ್ಯಾಪ್ಟಾಪ್, ಟ್ಯಾಬ್, ವೈದ್ಯಕೀಯ ತಪಾಸಣೆ, ಆಂಬ್ಯೂಲೆನ್ಸ್, ಕ್ರೀಚ್, ಇತ್ಯಾದಿಗಳಿಗೆ ಖರ್ಚು ಮಾಡಿ ನಿಧಿಯನ್ನು ಅರ್ಧಕ್ಕೆ ಇಳಿಸಿದರು. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯಿತು, ಕಾರ್ಮಿಕ ಸಂಘಟನೆಗಳಿಂದ ಬೃಹತ್ ಹೋರಾಟಗಳು ನಡೆದವು. ಆದರೆ ಇವರು ತಿನ್ನುವುದನ್ನು ನಿಲ್ಲಿಸಲಾಗಲಿಲ್ಲ! ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆಯವರು ಕಾರ್ಮಿಕರ ಕಿಟ್ ಗಳನ್ನು ಪ್ರದರ್ಶಿಸಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದು ಕೆಪಿಸಿಸಿ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ ಗಮನ ಸೆಳೆದರು.
ಪರಿಣಾಮ, ಬಿಜೆಪಿ ತೊಲಗಿತು. ಕಾಂಗ್ರೆಸ್ ಬಂತು. ಸಂತೋಷ್ ಲಾಡ್ ಕಾರ್ಮಿಕ ಖಾತೆ ಸಚಿವರಾದರು.
ಕಲ್ಯಾಣ ಮಂಡಳಿಯ ಎಲ್ಲ ಖರೀದಿ ವ್ಯವಹಾರ ಮಾಹಿತಿ ನನ್ನ ಟೇಬಲ್ ಮೇಲೆ ಇಡಬೇಕೆಂದು ಗುಟುರು ಹಾಕಿದರು. ಇನ್ನು ಮುಂದೆ ಯಾವುದೇ ಖರೀದಿ ವ್ಯವಹಾರ ಮಾಡಬಾರದು, ಕಾಯ್ದೆ ಪ್ರಕಾರ ಕಾರ್ಮಿಕರಿಗೆ DBT ಮೂಲಕ ಸೌಲಭ್ಯ ವಿತರಿಸಿ ಎಂದು ಆದೇಶಿಸಿದರು. ಕಾರ್ಮಿಕರಿಗೆ ಖುಷಿಯೋ ಖುಷಿ….!
ಆದರೆ ಆಗಿದ್ದೇನು?
ಮಕ್ಕಳ ಸ್ಕಾಲರ್ಶಿಪ್ ನಿಲ್ಲಿಸಿದರು, 19 ಸೌಲಭ್ಯಗಳನ್ನು ನಿಲ್ಲಿಸಿದರು, ಕಾರ್ಮಿಕರ ನೋಂದಣಿಗೂ ಅಡ್ಡಿ! ಮುಂದುವರಿದು ಮಾಡುತ್ತಿರುವುದೇನು ಅಂತೀರಾ?
ಕಾರ್ಮಿಕರ ಹೆಸರಲ್ಲಿ ಮತ್ತೆ ಲ್ಯಾಪ್ಟಾಪ್ ಖರೀದಿ, ಖಾಸಗಿ ಆಸ್ಪತ್ರೆಗಳಿಂದ ವೈದ್ಯಕೀಯ ತಪಾಸಣೆ, ಪೌಷ್ಟಿಕಾಂಶ ಕಿಟ್ ಖರೀದಿ (ಆಯುರ್ವೇದ ಪೌಡರ್) ಇತ್ಯಾದಿಗಳ ಮೂಲಕ ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚಾಗಿ ಹೋಗಿದೆ. ಇದರಲ್ಲಿ ಕಾರ್ಮಿಕರಿಗೆ ದಕ್ಕಿದ್ದು ತಿಂದುಳಿದ ಎಲುಬು ಮಾತ್ರ. ಮತ್ತೆ ಸ್ಕೂಲ್ ಕಿಟ್, 200 ಆಂಬ್ಯುಲೆನ್ಸ್ ಖರೀದಿಗೆ ತಯಾರಿಯೂ ನಡೆದಿದೆಯಂತೆ!
ಭ್ರಷ್ಟಾಚಾರದಲ್ಲಿ ಬಿಜೆಪಿಯನ್ನು ಮೀರಿಸಲು ಸಚಿವ ಸಂತೋಷ್ ಲಾಡ್ ಮುಂದಾಗಿದ್ದಾರೆ. ಕಾರ್ಮಿಕ ಸಂಘಟನೆಗಳ ಮನವಿ, ಹೋರಾಟಕ್ಕೂ ಕೇರ್ ಮಾಡದೇ ಶಿವರಾಂ ಹೆಬ್ಬಾರ್ ಹಾದಿಯಲ್ಲೇ ಸಾಗುತ್ತಿದ್ದಾರೆ.
ಇದೀಗ ಹೆಬ್ಬಾರರೂ ಕಾಂಗ್ರೆಸ್ ಗೆ ಘರ್ ವಾಪ್ಸಿ ಆಗಿದ್ದಾರೆ!ಇದ್ದ ನಿಧಿ ತಿಂದು ಮಂಡಳಿಯ ಬಾಗಿಲು ಮುಚ್ಚಬಹುದು. ಅಧಿಕಾರಸ್ತರಿಗೆ ಇದು ಸುಲಭದ ಕೆಲಸ. ಆದರೆ ಬಡ ಕಾರ್ಮಿಕರಿಗೆ?
ಸಾಮಾಜಿಕ ಭದ್ರತೆ, ಸುರಕ್ಷತೆಗಾಗಿ ಧೀರ್ಘಕಾಲದ ಹೋರಾಟಗಳ ಮೂಲಕ ಪಡೆದುಕೊಂಡ ಕಾನೂನು; ಈ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಕಲ್ಯಾಣ ಮಂಡಳಿಯನ್ನು
ಕಾರ್ಮಿಕರಿಗೆ ಮಂಡಳಿಯನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಇದಕ್ಕೆ ಹೋರಾಟದ ದಾರಿಯಲ್ಲದೇ, ಬೇರೆ ಏನಿದೆ? ಅದಕ್ಕಾಗಿಯೇ ಹೋರಾಟಕ್ಕೆ ಇಳಿದಿದ್ದಾರೆ.