ಹಾಸನ: ಅಶ್ಲೀಲ ಪೆನ್ಡ್ರೈವ್ ಪ್ರಕರಣ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸಬೇಕಾದ ಪ್ರಕರಣವಾಗಿದ್ದು,ತಪ್ಪಿತಸ್ಥರು ಕಾನೂನಿಗೆ ಒಳಪಟ್ಟು ಶಿಕ್ಷೆಗೆ ಗುರಿಯಾಗಲೇಬೇಕು. ಪ್ರಜ್ವಲ್ ರೇವಣ್ಣ ಗೆದ್ದರೂ ಆತನನ್ನು ಬಿಡದೇ ಆತ ರಾಜಿನಾಮೆ ಕೊಡಿಸುವ ಹೋರಾಟ ನಡೆಸಬೇಕು ಎಂದು ಕೆಆರ್ಆರ್ಎಸ್ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದ್ದಾರೆ. ಪ್ರಜ್ವಲ್
ವಿವಿಧ ಜನಪರ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟಾಗಿ ಹಾಸನದಲ್ಲಿಂದು ವಿಕೃತ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಬಂಧನ್ಕಕೆ ಆಗ್ರಹ, ಲೈಂಗಿಕ ದೌರ್ಜ್ಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ, ಹೆಣ್ಣು ಸಂಕುಲದ ಘನತೆ ಎತ್ತಿ ಹಿಡಿಯಲು “ ಹೋರಾಟದ ನಡಿಗೆ ಹಾಸನದ ಕಡೆಗೆ” ಅಡಿಬರಹದಡಿ ಆಯೋಜಿಸಿದ್ದ “ ಹಾಸನ ಚಲೋ” ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಜ್ವಲ್
ಇದನ್ನು ನೋಡಿಕೊಳ್ಳಲು ಕಾನೂನು ವ್ಯವಸ್ಥೆಯಿದೆ. ಆದರೆ, ವ್ಯವಸ್ಥೆಯೇ ದಾರಿ ತಪ್ಪಿದರೆ, ಅದನ್ನು ಸರಿ ದಾರಿಗೆ ತರಲು ನಾಡಿಗೆ ಹೋರಾಟದ ಸಂದೇಶ ಸಾರಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಕೃತ ಲೈಂಗಿಕ ಹಗರಣ ಪೆನ್ಡ್ರೈವ್ ಹಂಚಿಕೆ ಇದೆಲ್ಲವೂ ಅಧಿಕಾರ, ಸಂಪತ್ತಿನ ಅಹಂಕಾರದಿಂದ ಮದದಿಂದ ನಡೆದಿದೆ. ಆದರೆ ಅದು ನಡೆಯುವುದಿಲ್ಲ ಎಂಬ ಸಂದೇಶ ಕೊಡಲು ನಾವಿಂದು ಸೇರಿದ್ದೇವೆ.
ಇದು ಹಾಸನಕ್ಕೆ ಮಾತ್ರ ಸೀಮಿತವಲ್ಲ. ಬಸವಣ್ಣ, ಕುವೆಂಪು ಹುಟ್ಟಿರುವ ನಾಡಿನಲ್ಲಿ, ಘನತೆ ಗೌರವಕ್ಕೆ ಚ್ಯುತಿ ತಂದಿರುವ ಈ ರೀತಿಯ ಪ್ರಕರಣಗಳು ಇನ್ನು ಮುಂದೆ ಎಲ್ಲಿಯೇ ನಡೆದರೂ ನಾವು ಬಿಡುವುದಿಲ್ಲ. ಮುಖ್ಯವಾಗಿ ಜೂನ್ 4ರಂದು ಪ್ರಜ್ವಲ್ ಗೆದ್ದರೂ ಆತನನ್ನು ರಾಜಿನಾಮೆ ಕೊಡಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟ ರೂಪುಗೊಳ್ಳಬೇಕು ಎಂದು ಬಡಗಲಪುರ ನಾಗೇಂದ್ರ ಸ್ಪಷ್ಟಪಡಿಸಿದರು.
ಲೇಖಕಿ ರೂಪಾ ಹಾಸನ್ ಮಾತನಾಡಿ, ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ… ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನಪ್ರಾಣ ಕುಟುಂಬವನ್ನು ಪಣಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಅದನ್ನು ವೀಡಿಯೋ ಮಾಡಿ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ್ದು, ಹಾಗೂ ಚುನಾವಣಾ ದಾಳವಾಗಿ ಬಳಸಿಕೊಂಡು ಹಂಚಿದವರು, ಆ ವಿಡಿಯೋಗಳನ್ನು ಇಟ್ಟುಕೊಂಡು ಬೇಖಾದಂತೆ ಬಳಸಿಕೊಂಡವರು.
ಹೀಗೆ ಎಲ್ಲ ಹಂತಗಳನ್ನು ಖಂಡಿಸಬೇಕಿದೆ. ಅತ್ಯಂತ ತಳಸಮುದಾಯದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ, ಸಂತ್ರಸ್ತೆಯರೊಂದಿಗೆ ನಾವಿದ್ದೇವೆ ಎಂದು ಧೈರ್ಯ ನೀಡಿದರು. ಅಲ್ಲದೇ ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ನಿಮ್ಮ ದೂರು ದಾಖಲಿಸಬೇಕು. ಸರ್ಕಾರಗಳು ಇನ್ನಾದರೂ ಜವಾಬ್ದಾರಿಯಿಂದ ವರ್ತಿಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಮತ್ತೊಂದು ರೀತಿಯ ಗಟ್ಟಿತನದ ಹೋರಾಟವನ್ನು ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನು ನೋಡಿ : ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆಕ್ರೋಶ