ಹಾಸನ: ಲೈಂಗಿಕ ದೌರ್ಜನ್ಯ, ಪ್ರಕರಣದ ಪೆನ್ಡ್ರೈವ್ ಆರೋಪವನ್ನು ಎದುರಿಸುತ್ತಿರುವ ಜೆಡಿಎಸ್‌ನ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪೆನ್‌ಡ್ರೈವ್ ಹಂಚಿದವರನ್ನು ಕೂಡಲೇ ಬಂಧಿಸಿ ಹಾಗೂ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡುವಂತೆ ಸಿಪಿಐಎಂ ಸೇರಿದಂತೆ ದಲಿತ ಪರ ಮುಖಂಡರು ಹಾಗೂ ವಿವಿಧ ಸಂಘಟನೆಯ ನಾಯಕರು ಆಗ್ರಹಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಹಾಸನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಪ್ರಜ್ವಲ್ ರೇವಣ್ಣನಿಂದ ಆತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ಥ ಮಹಿಳೆಯನ್ನು ಅಪಹರಿಸಿರುವ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಚ್..ಡಿ. ರೇವಣ್ಣರನ್ನು ರಾಜ್ಯ ಸರ್ಕಾರ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸದೆ ಕಾಲಾವಕಾಶ ನೀಡಿರುವುದನ್ನು ಅವಲೋಕಿಸದರೆ, ಸಿಎಂ ಸಿದ್ದರಾಮಯ್ಯ, ಹೆಚ್..ಡಿ. ರೇವಣ್ಣ ಪರ ಮೃದು ಧೋರಣೆ ಹೊಂದಿದ್ದಾರೆ ಎನ್ನುವ ಮಾತಿಗೆ ಪುಷ್ಠಿ ನೀಡುತ್ತಿದೆ. ರಾಜ್ಯ ಸರ್ಕಾರದ ಈ ನಡೆ ಖಂಡನೀಯ ಎಂದರು.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ : ವಿದೇಶಕ್ಕೆ ಹಾರಿದ್ರಾ ಎಚ್‌ಡಿ ರೇವಣ್ಣ?!
ಇನ್ನು ಹೆಚ್.ಡಿ.ರೇವಣ್ಣರ ಬಂಧನವಾಗದೇ ಇರುವುದನ್ನು ನೋಡಿದರೆ, ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ನಾಶ ಹಾಗೂ ಸಂತ್ರಸ್ಥೆಯರ ಮೇಲೆ ಒತ್ತಡ ಮತ್ತು ಪ್ರಭಾವ ಬೀರಲು ಸರ್ಕಾರವೇ ಅವಕಾಶ ನೀಡಿದಂತಾಗಿದೆ. ಆದ್ದರಿಂದ ತಕ್ಷಣವೇ ಶಾಸಕ. ರೇವಣ್ಣ ಅವರನ್ನು ಬಂಧಿಸುವ ಜೊತೆಗೆ ಯಾವುದೇ ಸಂದರ್ಭದಲ್ಲಿಯೂ ಸಂತ್ರಸ್ಥೆಯರ ಗುರುತುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಅವರ ಗುರುತುಗಳ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸರ್ಕಾರ ಮತ್ತು ಎಸ್‌ಐಟಿ ತೀವ್ರ ನಿಗಾವಹಿಸಬೇಕೆಂದು ಆಗ್ರಹಿಸಿದರು.
ಹಿರಿಯ ದಲಿತ ಮುಖಂಡ ಎಚ್. ಕೆ. ಸಂದೇಶ್ ಮಾತನಾಡಿ, ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿ ಪ್ರಕರಣದ ತೀವ್ರತೆಯನ್ನು ದಿಕ್ಕುತಪ್ಪಿಸುವ ಬದಲು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ಥ ಮಹಿಳೆಯರ ಪರವಾಗಿ ನಿಲ್ಲಬೇಕು. ಪೆನ್‌ಡ್ರೈವ್‌ನ ಮೂಲಗಳು ಜಗಜ್ಜಾಹಿರಾಗಿದ್ದರೂ, ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಕಾರ್ತಿಕ್ ಇವರುಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಎದ್ದೇಳು ಕರ್ನಾಟಕದ ಇರ್ಷಾದ್ ಅಹಮದ್ ದೇಸಾಯಿ ಮಾತನಾಡಿ, ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ಎಸ್ಐಟಿ ಯನ್ನು ನೇಮಕ ಮಾಡಿದೆಯಾದರೂ ಮತ್ತೆಮತ್ತೆ ಹೆಣ್ಣು ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡೀಯೋ ಹೊರಬರುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯವಾಗಿದೆ. ವಿಡೀಯೋ ಹಂಚಿಕೆಯ ಜಾಲವನ್ನು ಬೇಧಿಸುತ್ತಿಲ್ಲ. ಅಲ್ಲದೇ ಮುಟ್ಟುಗೋಲನ್ನೂ ಹಾಕಿಕೊಳ್ಳುತ್ತಿಲ್ಲ. ಇದೆಲ್ಲವನ್ನು ನೋಡಿದರೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯತನವಾಗಿದೆ.ಹಾಗೆಯೇ ಎಸ್ಐಟಿ ಮುಂದೆ ಹಾಜರಾದ ಸಂತ್ರಸ್ತೆಯರ ಜೊತೆ ಪ್ರೀತಿ ಮತ್ತು ತಾಳ್ಮೆಯಿಂದ ವರ್ತಿಸುವುದರ ಜೊತೆಗೆ ಅವರ ಹೇಳಿಗಳನ್ನು ಗೌಪ್ಯವಾಗಿ ಇರಿಸಬೇಕು. ಮುಖ್ಯವಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳು ವರದಿಯಾಗದೇ ನೋಡಿಕೊಂಡು ಸೂಕ್ಷ್ಮತೆ ಕಾಪಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್, ಡಿವೈಎಫ಼್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್‌ಮೂರ್ತಿ, ಆಜಾ಼ದ್ ಟಿಪ್ಪು ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಮುಬಶೀರ್ ಅಹಮದ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್ ಕುಮಾರ್, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಪೆನ್‌ಡ್ರೈವ್ ಪ್ರಕರಣ| ಪ್ರಜ್ವಲ್ ರೇವಣ್ಣ, ಎಚ್.ಡಿ.ರೇವಣ್ಣ ಬಂಧನಕ್ಕೆ ಆಗ್ರಹ – ವ್ಯಾಪಕಗೊಂಡ ಪ್ರತಿಭಟನೆ