ಲೈಂಗಿಕ ದೌರ್ಜನ್ಯ ಪ್ರಕರಣ : ವಿದೇಶಕ್ಕೆ ಹಾರಿದ್ರಾ ಎಚ್‌ಡಿ ರೇವಣ್ಣ?!

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ  ಮುಂದೆ ವಿಚಾರಣೆಗೆ ಹಾಜರಾಗಬೇಕಿದ್ದ  ಮಾಜಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ ರೇವಣ್ಣ ಮಾಯವಾಗಿದ್ದಾರೆ (ವಿದೇಶಕ್ಕೆ ಹಾರಿದ್ದಾರೆ) ಎಂಬ ಮಾಹಿತಿ ಲಭ್ಯವಾಗಿದೆ.

ರೇವಣ್ಣ ವಿಶೇಷ ತನಿಖಾ ತಂಡ ಹಾಗು ಪೊಲೀಸರ ಯಾವ ನೋಟಕ್ಕೂ ಸಿಗದೇ ಗುಪ್ತ ಸ್ಥಳಕ್ಕೆ ತೆರಳಿದ್ದು, ಎರಡು ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಬಂಧನ ಭೀತಿಯಿಂದ ವಿದೇಶಕ್ಕೆ ಹೋಗಿದ್ದಾರೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

 

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್  ಪ್ರಕರಣದಲ್ಲಿ ರೇವಣ್ಣಗೆ ಎಸ್ಐಟಿ ಮೂರನೇ ನೋಟೀಸ್ ಹಾಗೂ ಕೊನೆಗೆ ಲುಕೌಟ್ ನೋಟೀಸ್ (Lookout notice) ಜಾರಿಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ರೇವಣ್ಣ ಅವರು ವಿದೇಶಕ್ಕೆ ಹಾರಬಹುದು ಎಂಬ ಮುಂದಾಲೋಚನೆಯಿಂದ ಲುಕೌಟ್‌ ನೋಟೀಸ್‌ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ  ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ  ವಿರುದ್ಧ ರೆಡ್ ಕಾರ್ನರ್ ನೊಟೀಸ್  ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇನ್ನೊಂದೆಡೆ ಭವಾನಿ ರೇವಣ್ಣ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಹೇಳಿದೆ.

ಸದ್ಯ ರೇವಣ್ಣ ವಿರುದ್ಧ ತನಿಖೆಗೆ ಒಳಗಾಗಬೇಕಾದ ಗಂಭೀರ ಆರೋಪವಿದೆ. ಮೈಸೂರಿನಲ್ಲಿ ಸಂತ್ರಸ್ತೆಯ ಪುತ್ರ ರೇವಣ್ಣ ವಿರುದ್ಧ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದಾರೆ. ಹೀಗಾಗಿ ರೇವಣ್ಣಗೆ ಎಸ್ಐಟಿ ಮುಂದೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಆದರೆ ಕಳೆದ ಎರಡು ದಿನಗಳಿಂದ ರೇವಣ್ಣ ನಾಪತ್ತೆಯಾಗಿದ್ದಾರೆ. ಅವರು ಅತ್ತ ಎಚ್.ಡಿ ದೇವೇಗೌಡರ ನಿವಾಸದಲ್ಲಿಯಾಗಲೀ, ಈತ್ತ ಬಸವನಗುಡಿಯ ತಮ್ಮ ನಿವಾಸದಲ್ಲಿಯಾಗಲೀ, ಹಾಸನದ ಎರಡು ನಿವಾಸಗಳಲ್ಲಾಗಲೀ ಇಲ್ಲ.

ಹೀಗಾಗಿ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ಎಸ್ಕೇಪ್ ಆಗಿರಬಹುದು ಎಂದು ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಸದ್ಯ ರೇವಣ್ಣ ಅವರಿಗೆ ಬಂಧನದ ಭಯ ಕಾಡುತ್ತಿದೆ. ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ತೀರ್ಪು ನೋಡಿಕೊಂಡು ನಿರ್ಧಾರ ಮಾಡಲಿದ್ದಾರೆ. ಜಾಮೀನು ಸಿಕ್ಕರೆ ಎಸ್ಐಟಿ ಮುಂದೆ ಬರುವುದು, ಇಲ್ಲವೇ ಮೇಲಿನ ಕೋರ್ಟ್ ಮೊರೆ ಹೋಗುವುದಾಗಿ ರೇವಣ್ಣ ಪರ ವಕೀಲರು ಮಾಧ್ಯಮಗಳಿಗೆ ಹೇಳಿದ್ದಾರೆ.

ಇಂದು ಜಾಮೀನು ಅರ್ಜಿ ವಿಚಾರಣೆ

ಮಹಿಳೆಯೊಬ್ಬರನ್ನು ಅಪಹರಣ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪದ ಮೇಲೆ ಮೈಸೂರಿನ ಕೆ.ಆರ್.‌ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು (ಶನಿವಾರ) ನಡೆಸಲಿದೆ. ಇದೇ ವೇಳೆ ರೇವಣ್ಣ ಶನಿವಾರ ಎಸ್‌ಐಟಿ ಮುಂದೆ ಹಾಜರಾಗಲು ಸಿದ್ಧರಿದ್ದಾರೆ ಎಂದು ಅವರ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. ಎರಡನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ನೋಟಿಸ್‌ ನೀಡಿದೆ. ಬಳಿಕ ವಿಚಾರಣೆಯನ್ನು ಶನಿವಾರಕ್ಕೆ (ಮೇ 4) ಮುಂದೂಡಿದೆ.

ಈ ವೇಳೆ ಎಚ್.ಡಿ. ರೇವಣ್ಣ ಪರ ವಕೀಲರಾದ ಮೂರ್ತಿ ಡಿ ನಾಯ್ಕ್ ವಾದ ಮಂಡಿಸಿದ್ದು, ಕೆ.ಆರ್. ನಗರ ಠಾಣೆಯ ಎಫ್ಐಆರ್‌ನಲ್ಲಿ ಜಾಮೀನು ರಹಿತ ಸೆಕ್ಷನ್‌ಗಳಿವೆ. 364 A, ಅಪಹರಣ, 364 ಅಕ್ರಮ ಬಂಧನದಡಿ ಕೇಸ್‌ ದಾಖಲು ಮಾಡಲಾಗಿದೆ. ಇವುಗಳು ಜಾಮೀನು ರಹಿತವಾಗಿವೆ ಎಂದು ದೂರಿನ ಸಾರಾಂಶವನ್ನು ಓದಿ ತಿಳಿಸಿದರು. ಅಲ್ಲದೆ, ಈ ದೂರಿನಲ್ಲಿ ಮಹಿಳೆಯ ಹೆಸರನ್ನೇ ಉಲ್ಲೇಖಿಸಿಲ್ಲ. ಇನ್ನು ನಾಳೆ ಎಸ್ಐಟಿ ಮುಂದೆ ಎಚ್.ಡಿ. ರೇವಣ್ಣ ಹಾಜರಾಗಲು ಸಿದ್ಧರಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್, ಶನಿವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಯನ್ನು ಮುಂದೂಡಿದ್ದು, ಎಸ್ಐಟಿ ಪರ ಎಸ್‌ಪಿಪಿಗೆ ಕೋರ್ಟ್ ನೋಟಿಸ್ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *