ಬಿಜೆಪಿಯಿಂದ ಸುಳ್ಳು ಹೇಳುವ ಇನ್ಸ್ಟಿಟ್ಯೂಟ್ ಓಪನ್

ಕರೂರು/ಸಿರೀಗೇರಿ : ಬಿಜೆಪಿಯಿಂದ ಸುಳ್ಳು ಹೇಳುವ ಇನ್ಸ್ಟಿಟ್ಯೂಟ್ ಓಪನ್‌ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಬಿಜೆಪಿಯವರಿಗೆ ಕನಿಷ್ಠ ಜ್ಞಾ‌ನ ಇಲ್ಲ. ಮುಸ್ಲಿಂರ ಮೀಸಲಾತಿ ವಿಚಾರದಲ್ಲಿ ಬಿಜೆಪಿಗರು ಹಸಿಸುಳ್ಳು ಹೇಳುತ್ತಿದ್ದು, ಆ ಪಕ್ಷ ಸುಳ್ಳು ಹೇಳುವ ಇನ್ಸ್ಟಿಟ್ಯೂಟ್ ತೆಗೆದಿದೆ ಎಂದು ಕೊಪ್ಪಳ‌ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್‌ ಎಸ್. ತಂಗಡಗಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕರೂರು ಮತ್ತು ಸಿರಿಗೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಪರ ಮತ ಪ್ರಚಾರ ನಡೆಸಿ ಸಚಿವರು ಮಾತನಾಡಿದರು.

ಚಿನ್ನಪ್ಪರೆಡ್ಡಿ ಅವರ ಆಯೋಗದ ಶಿಫಾರಸ್ಸಿನಂತೆ ಮುಸ್ಲಿಂರಿಗೆ 20 ವರ್ಷಗಳ ಹಿಂದೆ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿಯನ್ನು ತೆಗೆಯಲು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಹಿಂದಿನ‌ಸರ್ಕಾರ ಪ್ರಯತ್ನಿಸಿತ್ತು. ಬಳಿಕ ಬಸವರಾಜ ಬೊಮ್ಮಾಯಿ ಅವರ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮೀಸಲಾತಿ ಮುಂದುವರೆಸುವುದಾಗಿ ಅಫಿಡವಿಟ್ ಸಲ್ಲಿಸಿದೆ. ಈಗಲೂ ಹಿಂದಿನಂತೆ ಮೀಸಲಾತಿ ಮುಂದುವರೆದಿದೆ. ಈ ವಿಚಾರದಲ್ಲಿ ಬಿಜೆಪಿಗರು ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಸುಳ್ಳು ಹೇಳುವುದರಲ್ಲಿ ಬಿಜೆಪಿಯಲ್ಲಿ ಸ್ಪರ್ಧೆ ಪ್ರಾರಂಭಗೊಂಡಿದೆ. ಜನತೆ ಮುಂದೆ ವಾಸ್ತವ ಸತ್ಯವನ್ನು ಹೇಳಿ ಮತ ಕೇಳಲಿ. ಅದನ್ನು ಬಿಟ್ಟು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದ ಮೀಸಲಾತಿಯನ್ನು ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಕೊಟ್ಟಿದೆ ಎಂದು ಸುಳ್ಳು ಹೇಳುತ್ತಾರೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾಗಲಿ ಅಥವಾ ಇಲಾಖಾ ಮಂತ್ರಿಯಾಗಿ ನಾನು ಮೀಸಲಾತಿ ಬಗ್ಗೆ ಹೇಳಿದ್ದೀನಾ? ಪ್ರಧಾನ ಮಂತ್ರಿಗಳಿಗೂ ಈ ಬಗ್ಗೆ ತಿಳುವಳಿಕೆ ಇಲ್ಲವೇ ? ಈ ಬಗ್ಗೆ ಪತ್ರಿಕೆಗಳಲ್ಲಿ ಸುಳ್ಳಿನ‌ ಜಾಹೀರಾತು ನೀಡುತ್ತಿದ್ದಾರೆ. ಈ ದೇಶ ಕಂಡಂತಹ ಮಹಾನ್ ಸುಳ್ಳಿನ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಕಿಡಿಕಾರಿದರು.

ಇದನ್ನು ಓದಿ : ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂನ್.3 ರಂದು ಮತದಾನ, ಜೂನ್.6 ರಂದು ಫಲಿತಾಂಶ ಪ್ರಕಟ

ಅತೀ ಹೆಚ್ಚು ಸುಳ್ಳು ಹೇಳುವವರು ಬಳ್ಳಾರಿಯಲ್ಲಿದ್ದು, ಅದರಲ್ಲಿ ಓರ್ವ ಮಹಾಶಯ ನಮ್ಮ ಜಿಲ್ಲೆಗೆ ಬಂದು ಶಾಸಕರಾಗಿದ್ದಾರೆ. ನಿತ್ಯ ಜನಕ್ಕೆ ಸುಳ್ಳು ಹೇಳುವುದನ್ನೇ ಪರಿಪಾಠ ಮಾಡಿಕೊಂಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪೆಟ್ರೋಲ್ ನ್ನು 50 ರೂ.ಗೆ ಕೊಡುತ್ತೇವೆ ಎಂದಿದ್ದರು. ಹತ್ತು ವರ್ಷಗಳ ಹಿಂದೆ 45 ರೂ.ಇದ್ದ ಪೆಟ್ರೋಲ್ ದರ 100 ರೂ.ಗೆ, 450 ರೂ.ಇದ್ದ ಅಡುಗೆ ಅನಿಲ 1100 ರೂ.ಗೆ ತಂದು ನಿಲ್ಲಿಸಿದ್ದಾರೆ. ಬಿಜೆಪಿಯವರು ಅಂಬಾನಿ, ಅದಾನಿ ಅವರನ್ನು ಮಾತ್ರ ಇನ್ನಷ್ಟು ಶ್ರೀಮಂತರನ್ನಾಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಇಡೀ ದೇಶದ ಜನರನ್ನು ಶ್ರೀಮಂತರನ್ನಾಗಿಸಲು ಮುಂದಾಗಿದೆ. ಗಡ್ಡ ಬಿಟ್ಟರೆ ವಿಶ್ವ‌ ಗುರು ಆಗಲ್ಲ. ದೇಶದ ರೈತರ, ಬಡವರು, ಮಧ್ಯಮ ವರ್ಗ ಹಾಗೂ ಕಾರ್ಮಿಕರಿಗೆ ಕೊಡುಗೆ ನೀಡಬೇಕು. ನಿಜಕ್ಕೂ ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿಗಳು ಮೋದಿ ನೋಡಿ ವೋಟ್ ಹಾಕಿ ಅಂತೀರಾಲ್ಲಪ್ಪ, ನಿಮ್ಮ ಹೆಸರಲ್ಲಿ ವೋಟ್ ಕೇಳಲು ಧಮ್ಮು ಇಲ್ವಾ ಎಂದು ಸವಾಲು ಹಾಕಿದರು.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕರೂರು ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 12,000 ಕ್ಕೂ ಹೆಚ್ಚು ಮುನ್ನಡೆ ಬಂದಿದೆ. ಈ‌‌ ಭಾರಿ ಆ ಮುನ್ನಡೆ ದುಪ್ಪಟ್ಟು ಆಗುವಂತೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಿ.ಎಂ.ನಾಗರಾಜ್, ಗಣೇಶ್ ಪ್ರಸಾದ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಇದನ್ನು ನೋಡಿ : ಪೆನ್‌ಡ್ರೈವ್‌ ಪ್ರಕರಣ : ವಿಡಿಯೋ ಲೀಕ್ ಹಿಂದಿನ ಉದ್ದೇಶ ಬಿಚ್ಚಿಟ್ಟ ಪ್ರಜ್ವಲ್ ಮಾಜಿ ಡ್ರೈವರ್ Janashakthi Media

Donate Janashakthi Media

Leave a Reply

Your email address will not be published. Required fields are marked *