ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣಾ ಸಮಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ದೊಡ್ಡ ಸದ್ದು ಮಾಡುತ್ತಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಶನಿವಾರ ಬೆಳಗ್ಗೆ 3:15ಕ್ಕೆ ಬೆಂಗಳೂರಿನಿಂದ ಜರ್ಮನಿಯ (Germany) ಫ್ರಂಕ್‌ಫರ್ಟ್‌ಗೆ ತೆರಳಿದ ಮಾಹಿತಿ ಲಭ್ಯವಾಗಿದೆ. ಇದನ್ನೂ ಖಚಿತಪಡಿಸಿಕೊಳ್ಳಲು ಅವರಿಗೆ ದೂರವಾಣಿ ಕರೆ ಮಾಡಲಾಗಿತ್ತು. ಅವರ ನಂಬರ್ ಸ್ವಿಷ್ ಆಫ್ ಎಂದು ಬರುತ್ತಿದೆ. ಈ ಕುರಿತು ಅವರೊಟ್ಟಿಗೆ ಚುನಾವಣೆಯಲ್ಲಿ ತೊಡಗಿದ ಕಾರ್ಯಕರ್ತರನ್ನು ವಿಚಾರಿಸಿದಾಗ, ಮತದಾನದ ನಂತರ ನಮಗೆ ಸಿಕ್ಕಿಲ್ಲ ಎಂಬ ಉತ್ತರ ಸಿಕ್ಕಿದೆ.
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಈ ಬೆನ್ನಲ್ಲೆ ಅವರು ವಿದೇಶಕ್ಕೆ ಪ್ರಯಾಣಿಸಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ಮಹಿಳಾ ಆಯೋಗದವರು ದೂರು ದಾಖಲಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ. ಇದು ಅಕ್ಷಮ್ಯ ಅಪರಾಧ. ಸರ್ಕಾರ ನೋಡಿಕೊಳ್ಳುತ್ತದೆ’ ಎಂದು ಹೇಳಿದರು. ‘ಮಾದ್ಯಮದಲ್ಲಿ ನೋಡಿದೆ. ಅವರು ಎಸ್ಕೇಪ್ ಆಗಿದ್ದಾರೆ ಅಂತ. ಸಂತ್ರಸ್ತರು ದೂರು ಕೊಟ್ಟಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಳಾಗುತ್ತದೆ’ ಎಂದು ಹೇಳಿದರು.