ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ: ಕುಮಾರಸ್ವಾಮಿ ವಿವಾದಿತ ಹೇಳಿಕೆಗೆ ಭಾರೀ ಆಕ್ರೋಶ

ಬೆಂಗಳೂರು: ಕಾಂಗ್ರೆಸ್​ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಹೆಚ್‌ ಡಿ ಕುಮಾರಸ್ವಾಮಿ ಅವರು ವಿವಾದಿತ ಹೇಳಿಕೆ ನೀಡಿದ್ದಾರೆ. ಇನ್ನೂ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕರ್ನಾಟಕದ ಗೌರವಾನ್ವಿತ ಮಹಿಳೆಯರ ಕ್ಷಮೆಯಾಚಿಸಿ ಎಂದು ಮಹಿಳಾ ಕಾಂಗ್ರೆಸ್‌ ಒತ್ತಾಯಿಸಿದೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಪಂಚ ಗ್ಯಾರಂಟಿಗಳನ್ನ ಜಾರಿಗೊಳಿಸಿದ್ದು,ಹಂತ ಹಂತವಾಗಿ ಐದು ಗ್ಯಾರಂಟಿಗಳನ್ನ ಕಾಂಗ್ರೆಸ್‌ ಜಾರಿಗೊಳಿಸಿದೆ. ಇದೀಗ ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್​ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ವಿವಾದಿತ ಹೇಳಿಕೆಯನ್ನ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

ಮಹಿಳೆಯರ ಪರವಾಗಿರುವ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ವಿರುದ್ಧ ನಿಮ್ಮ ಹೇಳಿಕೆ ಮತ್ತು ಮಹಿಳೆಯರ ಬಗೆಗಿನ ನಿಮ್ಮ ಅವಹೇಳನಕಾರಿ ವರ್ತನೆ ಅತ್ಯಂತ ಖಂಡನೀಯ. ಕೂಡಲೇ ಕರ್ನಾಟಕದ ಗೌರವಾನ್ವಿತ ಮಹಿಳೆಯರ ಕ್ಷಮೆಯಾಚಿಸಿ ಎಂದು ಮಹಿಳಾ ಕಾಂಗ್ರೆಸ್‌ ಆಗ್ರಹಿಸಿದರು.

ಇದನ್ನೂ ಓದಿಬರೀ ಸುಳ್ಳುಗಳ ಸವಾರಿ ಮಾಡಿಕೊಂಡು 10 ವರ್ಷ ಮುಗಿಸಿದ ಮೋದಿ ಯಾವ ಮುಖ ಹೊತ್ತುಕೊಂಡು ಮತ ಕೇಳ್ತಾರೆ?: ಸಿಎಂ ಸಿದ್ದರಾಮಯ್ಯ

ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟಪಡಿಸಬೇಕು: ಹೆಬ್ಬಾಳ್ಕರ್​

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ನಾನು ಕೇಳುತ್ತಿದ್ದೇನೆ, ಯಾವ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೆಚ್​ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು. ಹಳ್ಳಿ ಹೆಣ್ಣುಮಗಳ ಬಗ್ಗೆ ಏಕೆ ಇಷ್ಟು ಹಗುರವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಾಗಿದೆ. ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ವಾಗ್ದಾಳಿ ಮಾಡಿದರು.

ಕುಮಾರಸ್ವಾಮಿ ಹೇಳಿಕೆಯಿಂದ ಬಹಳ ನೋವಾಗಿದೆ: ಡಿಕೆ ಶಿವಕುಮಾರ್

ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಯಿಂದ ಬಹಳ ನೋವಾಗಿದೆ. ಅವರ ಹೇಳಿಕೆ ಹಿಂದಿನ ಅರ್ಥವೇನು? ಯಾವ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ? ಹೆಣ್ಣು‌ಮಕ್ಕಳು ದೇವಸ್ಥಾನಗಳಿಗೆ ಹೋಗುವುದು ದಾರಿತಪ್ಪಿದಂತಾಗುತ್ತದೆಯೇ? ಹಬ್ಬ ಆಚರಣೆ ಮಾಡುವುದು, ಫ್ರಿಡ್ಜ್, ಟಿವಿ ತೆಗೆದುಕೊಳ್ಳುವುದು, ಬಟ್ಟೆ ತೆಗೆದುಕೊಳ್ಳುವುದು ದಾರಿ ತಪ್ಪಿದ ಹಾಗೆಯಾ? ಇಡೀ ದೇಶ ಇಂದು ನಮ್ಮ ಗ್ಯಾರೆಂಟಿ ಯೋಜನೆಯನ್ನ ಹೊಗಳುತ್ತಿದೆ. ನಮ್ಮ ಗ್ಯಾರೆಂಟಿ ನೋಡಿ‌, ಮೋದಿ ಗ್ಯಾರೆಂಟಿ ತಂದಿದ್ದಾರೆ. ಇಂಥ ಯೋಜನೆಗೆ ಈ ರೀತಿ ಹೇಳಿಕೆ ಕೊಡುವುದು ಖಂಡನೀಯ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಜನ ಹೆಣ್ಣುಮಕ್ಕಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ನನಗೆ ಗೊತ್ತಿಲ್ಲ. ಇದು ನಮ್ಮ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಇಡೀ ನಾಡಿಗೆ ಮಾಡಿದ ಅವಮಾನ. ಹೆಚ್​ಡಿ ಕುಮಾರಸ್ವಾಮಿ ಕ್ಷಮೆ ಕೇಳುವ ಅಗತ್ಯವಿಲ್ಲ. ಈ ಹಿಂದೆ ನನ್ನ ತಾಯಿ ಬಗ್ಗೆಯೂ ಮಾತನಾಡಿದ್ದರು. , ಅಪ್ಪ-ಅಮ್ಮಗೆ ಹುಟ್ಟವ್ರೊ ಇಲ್ವೋ ಅಂತ ‌ನನಗೆ ಮಾತನಾಡಿದ್ದರು. ಆಮೇಲೆ ಕ್ಷಮೆ ಕೇಳಿದರು. ಕ್ಷಮಾಪಣೆಯಿಂದ‌ ಏನೂ ಉತ್ತರ ಸಿಗುವುದಿಲ್ಲ. ಅವರ ಮನಸ್ಸಿನಲ್ಲಿರುವ‌ ಭಾವನೆಯನ್ನೇ ಅವರು ಹೊರ ಹಾಕಿದ್ದಾರೆ. ಇದಕ್ಕೆ ತಕ್ಕ ಪಾಠವನ್ನ ಜನತೆ ಬಿಜೆಪಿಗೆ ಕಲಿಸಲಿದ್ದಾರೆ. ಇದು ದೇಶ, ನಾಡಿನ ಜನತೆಗೆ ಮಾಡಿದ ಅವಮಾನ ಎಂದು ವಾಗ್ದಾಳಿ ಮಾಡಿದರು.

ಆವೇಶದಲ್ಲಿ ನಾಡಿನ ಮಹಿಳಯರನ್ನು ಅಪಮಾನ ಮಾಡಿದ್ದಾರೆ: ಉಗ್ರಪ್ಪ

ಹೆಚ್​ಡಿ ಕುಮಾರಸ್ವಾಮಿ ಆವೇಶದಲ್ಲಿ ನಾಡಿನ ಸಮಸ್ತ ಮಹಿಳಯರನ್ನು ಅಪಮಾನ ಮಾಡಿದ್ದಾರೆ. ದಾರಿ ತಪ್ಪಿದ್ದಾರೆ ಅಂದ್ರೆ ಏನು ಅರ್ಥ? ಮಿಸ್ಟರ್ ಹೆಚ್​ ಕುಮಾರಸ್ವಾಮಿ ನಿಮಗೂ ದೊಡ್ಡ ಕುಟುಂಬ ಇದೆ. ಬಿಜೆಪಿ ಸಖ್ಯ ಮಾಡಿದ ಮೇಲೆ ಬಿಜೆಪಿ ಮನುವಾದ ನಿಮಗೂ ಬಂದಿದೆ. ಪರಸ್ತ್ರೀಯರನ್ನು ಮಾತೃ ಸ್ವರೂಪದಲ್ಲಿ ಕಾಣುವವರು ನಾವು. ರಾಜ್ಯದ ಮಹಿಳೆಯರ ಬಳಿ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್​ ಹಿರಿಯ ಮುಖಂಡ ವಿಎಸ್​ ಉಗ್ರಪ್ಪ ಆಗ್ರಹಿಸಿದರು.

 

Donate Janashakthi Media

Leave a Reply

Your email address will not be published. Required fields are marked *