ಬೆಂಗಳೂರು : ಪ್ರೊ.ರಾಜೀವ್ ಗೌಡ ಅವರು ಉತ್ತಮ ತಿಳಿವಳಿಕೆ, ಕಾಳಜಿ, ಜನಪರ ಸಿದ್ಧಾಂತ ಹೊಂದಿರುವ ಅರ್ಹ ಅಭ್ಯರ್ಥಿ. ಇವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದೇ ಗೆಲ್ಲುವ ಅವಕಾಶಗಳಿವೆ ಎಂದು ಸಿ.ಎಂ.ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ರಾಜೀವ್ ಗೌಡ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮಹಿಳಾ ಸಮಾವೇಶ ಮತ್ತು ಬೂತ್ ಮುಖಂಡರುಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಂದಲೇ ಗೋ-ಬ್ಯಾಕ್ ಅನ್ನಿಸಿಕೊಂಡ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲಿ ಟಿಕೆಟ್ ಕೊಟ್ಟಿದ್ದಾರೆ. ಉತ್ತರ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಶೋಭಾ ಅವರಿಗೆ ಇಲ್ಲಿಂದಲೂ ನೀವು ವಾಪಾಸ್ ಕಳಿಸಿ ಎಂದು ಕರೆ ನೀಡಿದರು. ರಾಜೀವ್ ಗೌಡ
ಶೋಭಾ ಕರಂದ್ಲಾಜೆ ಅವರು ಐದು ವರ್ಷಗಳ ಕಾಲ ರಾಜ್ಯಕ್ಕೆ ಆದ ಅನ್ಯಾಯಗಳ ಬಗ್ಗೆ ಒಂದೇ ಒಂದು ದಿನವೂ ದ್ವನಿ ಎತ್ತಲಿಲ್ಲ. ಇಂಥವರಿಂದ ನಿಮ್ಮ ಮತಕ್ಕೆ ಬೆಲೆ ಬರುತ್ತದಾ? ನೀತಿ ಆಯೋಗದ ಉಪಾಧ್ಯಕ್ಷರಾಗಿ, ಉನ್ನತ ಶೈಕ್ಷಣಿಕ ಅರ್ಹತೆ ಮತ್ತು ತಿಳಿವಳಿಕೆ ಹೊಂದಿ ರಾಜ್ಯಕ್ಕೆ ಆದ ಅನ್ಯಾಯಗಳ ಬಗ್ಗೆ ನಿರಂತರವಾಗಿ ಧ್ವನಿ ಎತ್ತುವ ರಾಜೀವ್ ಗೌಡರಿಂದ ನಿಮ್ಮ ಮತಕ್ಕೆ ಉತ್ತಮ ಘನತೆ ಬರುತ್ತದೆ. ಆದ್ದರಿಂದ ಪ್ರಜ್ಞಾವಂತರಾಗಿ ಇವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ರಾಜೀವ್ ಗೌಡ
ಮೋದಿ ಅವರು ಕಳೆದ ಹತ್ತು ವರ್ಷಗಳಲ್ಲಿ ಹೇಳಿದ ಯಾವುದನ್ನೂ ಜಾರಿ ಮಾಡಲೇ ಇಲ್ಲ. ಕಪ್ಪು ಹಣ ತರಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಅಡುಗೆ ಎಣ್ಣೆ, ಬೇಳೆ ಕಾಳು ಯಾವುದರ ಬೆಲೆಯನ್ನೂ ಇಳಿಸಲಿಲ್ಲ. ಬರೀ ಬಾಯಲ್ಲಿ ಅಚ್ಛೇ ದಿನ್ ಆಯೆಗಾ ಎಂದು ಭಾಷಣ ಭಾರಿಸಿದ್ದು ಬಿಟ್ಟರೆ ಭಾರತೀಯರ ಬದುಕಿಗೆ ಅಚ್ಛೆ ದಿನ್ ಬರಲೇ ಇಲ್ಲ ಎಂದರು.
ಇದನ್ನು ಓದಿ : ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಪತ್ನಿ `ವಾಣಿ’ ಕಾಂಗ್ರೆಸ್ ಸೇರ್ಪಡೆ
ಕೇಂದ್ರ ಸರ್ಕಾರದ ಬೆಲೆ ಏರಿಕೆಗಳಿಂದ ಹೈರಾಣಾಗಿದ್ದ ನಮ್ಮ ನಾಡಿನ ಜನತೆಯ ಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದಲೇ ಐದು ಗ್ಯಾರಂಟಿಗಳ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5-6 ಸಾವಿರ ಉಳಿತಾಯ ಆಗುವ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಭದ್ರ ಆಗಿರುವವರೆಗೂ ಈ ಅನುಕೂಲ ಪ್ರತಿ ತಿಂಗಳೂ ಜನರ ಮನೆ ಬಾಗಿಲಿಗೆ ಬರುತ್ತಲೇ ಇರುತ್ತದೆ ಎಂದರು.
ಮೋದಿಯವರು ಮತ್ತೆ ಪ್ರಧಾನಿಯಾದರೆ ಭಾರತ ತೊರೆಯುವುದಾಗಿ ಹೇಳಿದ್ದ ದೇವೇಗೌಡರು ಈಗ ಮೋದಿಯವರ ಜತೆಗೇ ಸೇರಿದ್ದಾರೆ. ಇದ್ದದ್ದು ಇದ್ದಂಗೆ ಹೇಳಿದರೆ ದೇವೇಗೌಡರಿಗೆ ಸಿಟ್ಟು ಎಂದು ವ್ಯಂಗ್ಯವಾಡಿದರು.
ನಾಡಿನ ಜನತೆಯ ತೆರಿಗೆ ಹಣದ ಪಾಲಿನಲ್ಲಿ ರಾಜ್ಯಕ್ಕೆ ವಿಪರೀತ ಅನ್ಯಾಯ ಮಾಡಿದರು. ರಾಜ್ಯದ ಜನತೆ ಪ್ರವಾಹದಿಂದ, ಬರಗಾಲದಲ್ಲಿ ನರಳುವಾಗ ಮೋದಿ, ಅಮಿತ್ ಶಾ ನೆಪಕ್ಕೂ ರಾಜ್ಯಕ್ಕೆ ಕಾಲಿಡಲಿಲ್ಲ. ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಇವತ್ತಿನವರೆಗೂ ಒಂದೇ ಒಂದು ರೂಪಾಯಿ ನೀಡಲಿಲ್ಲ. ಹೀಗೆ ನಿರಂತರವಾಗಿ ರಾಜ್ಯದ ಜನತೆಗೆ ಮಹಾದ್ರೋಹ ಎಸಗಿದ ಬಿಜೆಪಿ ಯನ್ನು ಸೋಲಿಸಿ 7 ಕೋಟಿ ಕನ್ನಡಿಗರು ಸ್ವಾಭಿಮಾನ ಮೆರೆಯಬೇಕು ಎಂದು ಕರೆ ನೀಡಿದರು.
ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಮತ್ತು 400 ಕ್ಕೂ ಅಧಿಕ ಮಂದಿ ಬೂತ್ ಮಟ್ಟದ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ