ಖಜುರಾಹೊ : ಮಧ್ಯಪ್ರದೇಶದ ಖಜುರಾಹೊ ಲೋಕಸಭಾ ಕ್ಷೇತ್ರದ ಇಂಡಿಯಾ ಕೂಟದ ಸಮಾಜವಾದಿ ಪಕ್ಷದ ಅಭ್ಯರ್ಥಿ ಮೀರಾ ದೀಪಕ್ ಯಾದವ್ ಅವರ ನಾಮಪತ್ರವು ‘ಕ್ಷುಲ್ಲಕ ’ ತಾಂತ್ರಿಕ ಕಾರಣಗಳ ನೆಪವೊಡ್ಡಿ ತಿರಸ್ಕೃತಗೊಳಿಸಲಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಕಾಂಗ್ರೆಸ್ ಮತ್ತು ಸಮಾಜವಾದಿ ಪಕವು ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗಿದೆ. ಇದು ರಾಜ್ಯದ ಆಡಳಿತ ಯಂತ್ರ ಮತ್ತು ಬಿಜೆಪಿ ಸರಕಾರದ ಕುತಂತ್ರವಾಗಿದೆ ಎಂದು ಆರೋಪಿಸಿವೆ. ಹಾಗೂ ನಾಮಪತ್ರ ತಿರಸ್ಕಾರಕ್ಕೆ ಉಲ್ಲೇಖಿಸಲಾಗಿರುವ ಎರಡು ತಾಂತ್ರಿಕ ಲೋಪಗಳನ್ನು ಪರಿಶೀಲನೆ ಸಂದರ್ಭದಲ್ಲಿ ಸುಲಭವಾಗಿ ಸರಿಪಡಿಸಬಹುದಿತ್ತು ಎಂದು ಪ್ರತಿಪಾದಿಸಿದೆ.
ತಿರಸ್ಕೃತ ಗೊಂಡಿದ್ದು ಹೇಗೆ? ಸಮಾಜವಾದಿ ಪಕ್ಷದ ಅಭ್ಯರ್ಥಿ ಮೀರಾ ಯಾದವ್ ಎ.4ರಂದು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರದೊಂದಿಗೆ ಸಲ್ಲಿಸಿದ್ದ ಪ್ರಮಾಣೀಕೃತ ಮತದಾರರ ಪಟ್ಟಿಯು ಹಳೆಯದಾಗಿತ್ತು ಮತ್ತು ಅವರು ನಾಮಪತ್ರ ದಾಖಲೆಗಳಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಸಹಿಮಾಡಿರಲಿಲ್ಲ ಎಂಬ ಕಾರಣಗಳಿಂದ ತಿರಸ್ಕೃತ ಮಾಡಲಾಗಿದೆ.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಈ ತಾಂತ್ರಿಕ ಸಮಸ್ಯೆಗಳನ್ನು ನೋಡುವುದು ಹಾಗೂ ನಿಯಮಗಳಂತೆ ಅದನ್ನು ಸರಿಪಡಿಸುವುದು ಚುನಾವಣಾಧಿಕಾರಿ, ಇತರ ಅಧಿಕಾರಿಗಳ ಹೊಣೆಗಾರಿಕೆಯಾಗಿತ್ತು. ಚುನಾವಣಾಧಿಕಾರಿಗಳು ಹೊಸ ಮತದಾರರ ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿದ್ದರೆ ಎ.5ರಂದು ನಾಮಪತ್ರಗಳ ಪರಿಶೀಲನೆ ಅಂತ್ಯಗೊಳ್ಳುವ ಮುನ್ನ ಸಲ್ಲಿಸಬಹಿದಿತ್ತು. ಉದ್ದೇಶಪೂರ್ವಕವಾಗಿಯೇ ಚುನಾವಣಾಧಿಕಾರಿಗಳು ಹೀಗೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಎಸ್ ಪಿ ಆರೋಪಿಸಿವೆ.
ಮೀರಾ ಯಾದವ್ ನಾಮಪತ್ರವನ್ನು ತಿರಸ್ಕರಿಸಿರುವುದನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿರುವ ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಅವರು, ಈ ಬಗ್ಗೆ ನ್ಯಾಯಾಂಗ ವಿಚಾರಣೆಗೆ ಆಗ್ರಹಿಸಿದಾರೆ.
ಅಭ್ಯರ್ಥಿಗಳ ಮೇಲೆ ಬಿಜೆಪಿಯಿಂದ ಒತ್ತಡ : ಖಜುರಾಹೊ ಲೋಕಸಭಾ ಕ್ಷೇತ್ರದ ಕೆಲವು ಅಭ್ಯರ್ಥಿಗಳ ಮೇಲೆ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿಜೆಪಿ ಒತ್ತಡ ಹೇರುತ್ತಿದೆ ಎಂಬ ಆರೋಪಕೇಳಿ ಬಂದಿವೆ.
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಅಭ್ಯರ್ಥಿ ಆರ್.ಬಿ.ಪ್ರಜಾಪತಿ, ಮಾಜಿ ಸರ್ಕಾರಿ ಅಧಿಕಾರಿ ತಮ್ಮನ್ನು ಭೇಟಿ ಮಾಡಿದ್ದು, ನಾಮಪತ್ರ ಹಿಂಪಡೆಯುವಂತೆ ವಿವಿಧ ತಂತ್ರಗಳ ಮೂಲಕ ಒತ್ತಡ ಹೇರುತ್ತಿದ್ದಾಎ ಎಂದು ಆರೋಪಿಸಿದ್ದಾರೆ.
ಪ್ರಜಾಪತಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ(ಚುನಾವಣಾ ಅಧಿಕಾರಿ) ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆರೋಪಿಸಿವೆ.