ಬೆಂಗಳೂರು: ಈ ಲೋಕಸಭಾ ಚುನಾವಣೆ, ಪ್ರಜಾಪ್ರಭುತ್ವದ ಅಳಿವು ಉಳಿವಿನ, ಸಂವಿಧಾನದ ಸಂರಕ್ಷಣೆಯ ಚುನಾವಣೆಯಾಗಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಸದಸ್ಯರು ಕರೆ ನೀಡಿದರು. ಸಂವಿಧಾನ
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಜಾಗೃತ ನಾಗರಿಕರು ಕರ್ನಾಟಕದಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಜಾಗೃತ ನಾಗರೀಕ ಕರ್ನಾಟಕ ವೇದಿಕೆಯ ಚಿಂತಕ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ,ಜಾತಿ, ಹಣ, ಹೆಂಡ ಇಂಥಹ ಆಮಿಷಗಳಿಗೆ ಬಲಿಯಾಗದೇ ದೇಶದ ಭವಿಷ್ಯವನ್ನು, ಪ್ರಗತಿಯ ವಿಚಾರಗಳನ್ನು ಗಮನಕ್ಕೆ ತಂದುಕೊಂಡು ಮತ ಚಲಾಯಿಸುವ ಅಗತ್ಯವಿದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ಯಾವುದಾದರೂ ಕೊಡುಗೆ ಇದ್ದರೆ ಅದು ಸೌಹಾರ್ದತೆಯ ನೆಲೆಯಲ್ಲಿ ಪ್ರಗತಿಯ ಗುರಿಗಾಗಿ ಹೆಜ್ಜೆ ಇಡುವ, ವೈಚಾರಿಕ ಎಚ್ಚರದ ವೈಜ್ಞಾನಿಕ ಮನೋಧರ್ಮದ ಸುಭದ್ರ ಭಾರತ ಬೇಕು ಎಂದರು.
ದ್ವೇಷ ರಾಜಕಾರಣದಿಂದಾಗಿ ಸಂವಿಧಾನ ಅಪಾಯದ ಸ್ಥಿತಿಯಲ್ಲಿದೆ. ಬಹುತ್ವ ಭಾರತದ ಸೌಹಾರ್ದತೆಗೆ ಧಕ್ಕೆಯಾಗಿದೆ. ಸಮಾಜವನ್ನು ಧರ್ಮ,ಭಾಷೆ,ಜಾತಿಗಳ ಹೆಸರಿನಲ್ಲಿ ಒಡೆಯುವುದನ್ನು ತಡೆಗಟ್ಟುವ ಅನಿವಾರ್ಯತೆ ಇದೆ. ಆದ್ದರಿಂದ 2024 ರ ಚುನಾವಣೆ ನಮ್ಮ ದೇಶದ ಗಣತಂತ್ರ ವ್ಯವಸ್ಥೆಯನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಕಾರಣದಿಂದ ಮತದಾರರು ಯಾವುದೇ ಭಾವನಾತ್ಮಕ ಆವೇಶಗಳಿಗೆ ಬಲಿಯಾಗದೇ ವಿವೇಕಶಾಲಿಗಳಾಗಿ ಮತ ಚಲಾಯಿಸುವ ಅಗತ್ಯವಿದೆ ಎಂದರು.
ಪ್ರೊ.ಕೆ.ಮರುಳಸಿದ್ದಪ್ಪ ಮಾತನಾಡಿ,ಭಯ, ಆತಂಕ, ಆಮಿಷಗಳನ್ನು ಗೆದ್ದು ಪ್ರಜಾಪ್ರಭುತ್ವದ ಶಕ್ತಿ ನಮ್ಮ ಮತದಾನದ ಶಕ್ತಿ ಎಂಬ ಅರಿವಿನಲ್ಲಿ ಮತ ಚಲಾಯಿಸೋಣ. ಪ್ರಜಾಪ್ರಭುತ್ವವನ್ನು ಉಳಿಸೋಣ. ಸಂವಿಧಾನವನ್ನು ಸಂರಕ್ಷಿಸೋಣ. ಧರ್ಮ ಜಾತಿಯ ಆವೇಶದ ಅನಾಹುತಕ್ಕೆ ನಮ್ಮ ಮತಿ ಬಲಿಯಾಗದಿರಲಿ. ದೇಶದ ನಿಜವಾದ ಪ್ರಗತಿಯೇ ನಮ್ಮೆಲ್ಲರ ಆಶಯವಾಗಲಿ.ಭಾರತ ಒಕ್ಕೂಟ ವ್ಯವಸ್ಥೆಯ ಗಣತಂತ್ರ ದೇಶ. ಇಲ್ಲಿ ಎಲ್ಲ ರಾಜ್ಯಗಳಿಗೂ ತಮ್ಮ ಭಾಷೆ,ಪರಂಪರೆ,ಸಂಸ್ಕೃತಿಗಳ ಅಸ್ಮಿತೆಯನ್ನು ಕಾಯ್ದುಕೊಳ್ಳುವ ಹಕ್ಕು ಇದೆ. ಇದಕ್ಕೆ ಧಕ್ಕೆ ತರುವ ಯಾವ ವ್ಯಕ್ತಿಗೂ, ಪಕ್ಷಕ್ಕೂ ಜನ ಮತ ನೀಡಬಾರದು. ಕನ್ನಡದ ಅಸ್ಮಿತೆಗೆ ಧಕ್ಕೆ ತರುವ ಏಕಚಕ್ರಾಧಿಪತ್ಯವನ್ನು ಸಾಧಿಸ ಹೊರಟಿರುವವರಿಗೆ ಮತ್ತೆ ಮಣೆ ಹಾಕಿದರೆ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಇದ್ನು ಓದಿ : “ಆಪರೇಷನ್ ಕಮಲ” ಹೇಳಿಕೆ ಅತಿಶಿಗೆ ಚುನಾವಣಾ ಆಯೋಗ ನೋಟಿಸ್
ನಮ್ಮ ರಾಜ್ಯದ ತೆರಿಗೆಯ ಪಾಲು ನಮಗೆ ಬರಬೇಕಿರುವುದು ನಮ್ಮ ಹಕ್ಕು. ಜಿದ್ದಿನ ರಾಜಕಾರಣದಲ್ಲಿ ನಮ್ಮ ರಾಜ್ಯದ ಹಕ್ಕನ್ನು ಕಸಿಯುತ್ತಿರುವವರ ವಿರುದ್ಧ ನಾವು ನಿಲ್ಲಬೇಕಿದೆ. ಜಿ.ಎಸ್.ಟಿ.ಯಲ್ಲಿ ಕೂಡಾ ನಮ್ಮ ಪಾಲನ್ನು ನಾವು ಪಡೆಯುವುದು ನಮ್ಮ ಹಕ್ಕು. ನಮ್ಮಿಂದಲೇ ತೆರಿಗೆ ವಸೂಲು ಮಾಡಿ ಅದರಲ್ಲಿ ನಮಗೆ ಬರಬೇಕಿರುವ ಪಾಲನ್ನು ಕಿತ್ತುಕೊಳ್ಳುತ್ತಿರುವವರನ್ನು ನ್ಯಾಯವಾಗಿಯೇ ನಾವು ಸೋಲಿಸಬೇಕು. ಈ ಬಗ್ಗೆ ನಾವು ಎಚ್ಚರದಿಂದ ಇರಬೇಕು.
ಗೋದಾಮುಗಳಲ್ಲಿ ಧಾನ್ಯ ಕೊಳೆಯುತ್ತಿದ್ದಾಗಲೂ ನಮ್ಮ ಜನರಿಗೆ ಅನ್ನ ಭಾಗ್ಯ ಯೋಜನೆಗೆ ರಾಜ್ಯ ಸರಕಾರಕ್ಕೆ ಖರೀದಿಗೂ ಅಕ್ಕಿ ಕೊಡಲು ನಿರಾಕರಿಸಿದ ಅನ್ನ ಕಂಟಕರನ್ನು ಕರ್ನಾಟಕದ ಜನ ತಿರಸ್ಕರಿಸಬೇಕು ಎಂದು ಜಾಗೃತ ನಾಗರೀಕರು ಕರ್ನಾಟಕದ ಸದಸ್ಯರು ಒತ್ತಿ ಹೇಳಿದ್ದಾರೆ.
ದೇಶದ ರೈತರ ಬೆನ್ನು ಮೂಳೆ ಮುರಿಯುವ ಕರಾಳ ಕೃಷಿ ಕಾನೂನು ತಂದು, ವಿರೋಧಿಸಿ ತರ ಮೇಲೆ ದಾಳಿ, ದಬ್ಬಾಳಿಕೆ ನಡೆಸಿ ನೂರಾರು ಜನರ ಸಾವಿಗೆ ಕಾರಣರಾದವರು, ಬೆಂಬಲ ಬೆಲೆ ಘೋಷಿಸಿ ಕಾನೂನು ತರುವೆನೆಂದು ಮಾತಿಗೆ ತಪ್ಪಿದವರು ಮತ್ತೆ ಅಧಿಕಾರಕ್ಕೆ ಬಂದರೆ ಉಣ್ಣುವ ಅನ್ನಕ್ಕೂ ಕಷ್ಟಪಡಬೇಕಾಗುತ್ತದೆ ಎಂದು ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದಾರೆ.
ಮಹಿಳೆಯರ ಕುರಿತು ಉದ್ದಾನುದ್ದ ಭಾಷಣ ಮಾಡಿ ಭೇಟಿ ಬಚಾವ್ ಬೇಟಿ ಪಢಾವ್ ಎಂದು ಹೇಳಿರುವ ಪ್ರಧಾನಿ ಮೋದಿ, ಮಣಿಪುರದಲ್ಲಿ ಹಾಡು ಹಗಲೇ ಸಾವಿರಾರು ಜನ ಮಹಿಳೆಯರನ್ನು ಬೆತ್ತಲೆಗೊಳಿಸಿ,ಲೈಂಗಿಕ ದೌರ್ಜನ್ಯ ಅತ್ಯಾಚಾರ ನಡೆಸಿ ಕೊಲೆಗೈದರೂ ಸುಮ್ಮನಿದ್ದಿದ್ದೂ ಖಂಡನೀಯ. ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ನ್ಯಾಯ ಕೇಳಿದರೆ ಈ ಮೋದಿ ತಮ್ಮ ಸಂಸದರ ಪರವಾಗಿ ನಿಲ್ಲುತ್ತಾರೆ.
ಚುನಾವಣಾ ಬಾಂಡ್ ಹೆಸರಿನಲ್ಲಿ ಭ್ರಷ್ಟಾಚಾರವನ್ನೇ ಕಾನೂನು ಬದ್ಧಗೊಳಿಸಿ, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಲ್ಲದೇ ಭ್ರಷ್ಟಾಚಾರಿಗಳನ್ನು ಸಾಕಲು ಹೊರಟ, ಕೋಮುವಾದವನ್ನು ಬಿತ್ತಿ ಬೆಳೆಯುತ್ತಿರುವ ಬಿ.ಜೆ.ಪಿ.ಗೆ ಮತ ಹಾಕಬಾರದು ಎಂದು ಜಾಗೃತ ನಾಗರೀಕ ಕರ್ನಾಟಕ ವೇದಿಕೆಯ ಸದಸ್ಯರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಾಣಗೆರೆ ವೆಂಕಟರಾಮಯ್ಯ ವಿಮಲಾ.ಕೆ.ಎಸ್. ಡಾ. ಜಿ ರಾಮಕೃಷ್ಣ, ಬಿ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
ಇದನ್ನು ನೋಡಿ : ಕನ್ನಗಳ್ಳಂಗೆ (ಮೋದಿ) ಕರುಳುಂಟೆ ? ಡಾ ಮೀನಾಕ್ಷಿ ಬಾಳಿ ಹೀಗಂದಿದ್ದು ಯಾಕೆ..?Janashakthi Media