ಬೆಂಗಳೂರು: ಲೋಕಾಯುಕ್ತರ ಬಲೆಗೆ ಪೊಲೀಸ್ ಪೇದೆಗಳು ಬಿದ್ದಿದ್ದಾರೆ.ಲಂಚ ಪಡೆಯುವಾಗ ಹೆಡ್ ಕಾನ್ಸ್ಟೆಬಲ್ ಸೇರಿದಂತೆ ಇಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪೀಣ್ಯ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೆಬಲ್ ಗಂಗಹನುಮಯ್ಯ ಹಾಗೂ ಪೀಣ್ಯದ ಎಸಿಪಿ ಕಚೇರಿ ಬಳಿ ಪೊಲೀಸ್ ಅಧಿಕಾರಿಯ ಜೀಪ್ ಚಾಲಕ ನಾಗರಾಜ್ ಅವರು 50 ಸಾವಿರ ಲಂಚ ಪಡೆಯುವಾಗ ವಿಜಯಕೃಷ್ಣ ನೇತೃತ್ವದ ತಂಡ ದಾಳಿ ನಡೆಸಿ ನಗದು ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಗ್ಯಾಸ್ ಸಿಲಿಂಡರ್ ಗೋದಾಮು ತೆರೆಯಲು ಅನುಮತಿಗಾಗಿ ಸುಂಕದಕಟ್ಟೆಯ ಮಾರುತಿನಗರದ ಚೇತನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು 2 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ಲೋಕಾಯುಕ್ತಕ್ಕೆ ಬಂದ ದೂರಿನ ಆಧಾರದ ಮೇಲೆ ಡಿವೈಎಸ್ಪಿ ಉಮಾದೇವಿ ಅವರ ನೇತೃತ್ವದಲ್ಲಿ ನಡೆದ ಟ್ಯಾಪ್ ಕಾರ್ಯಾಚರಣೆಯಲ್ಲಿ 50 ಸಾವಿರ ರೂ. ಲಂಚ ಪಡೆಯುವಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸಲಾಗುತ್ತಿದೆ.