19 ಕೋಟಿ ಜನರು ಹಸಿವಿನಿಂದ ಬಳಲುತ್ತಿರುವ ದೇಶದಲ್ಲಿ, ತಾತನಿಂದ ಮೊಮ್ಮಗನಿಗೆ 240 ಕೋಟಿ ಉಡುಗೊರೆ

-ಸಿ.ಸಿದ್ದಯ್ಯ 

 ನಾರಾಯಣಮೂರ್ತಿ ತಮ್ಮ ಮೊಮ್ಮಗನಿಗೆ ಕೊಟ್ಟ 240 ಕೋಟಿ ರೂ. ಉಡುಗೊರೆಯಲ್ಲಿ ಮತ್ತು ಮುಕೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಸಮಾರಂಭಕ್ಕೆ ವೆಚ್ಚ ಮಾಡಿದ 1,259 ಕೋಟಿ ರೂ. ಹಣದಲ್ಲಿ ದುಡಿಯುವ ವರ್ಗದ, ಜನಸಾಮಾನ್ಯರ ಬೆವರಿನ ಫಲದ ಪಾಲಿದೆ, ಸಾರ್ವಜನಿಕರ ಸಂಪತ್ತಿನಲ್ಲಿ ದೋಚಿದ ಭಾಗವೂ ಇದೆ ಎಂಬುದನ್ನು ಅರಿಯಬೇಕಿದೆ. ಉಡುಗೊರೆ

ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ದೇಶಾದ್ಯಂತ ಹಲವರ ಹುಬ್ಬೇರಿಸುವಂತೆ ಮಾಡಿದೆ. ಆ ಹಸುಗೂಸು ಎಷ್ಟೊಂದು ಅದೃಷ್ಟವಂತ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡ ಜನರೆಷ್ಟೊ. ಸಿರಿವಂತರ ಮನೆಯಲ್ಲಿ ಹುಟ್ಟುವ ಮಕ್ಕಳ ಬಗ್ಗೆ ಮಾತನಾಡುವಾಗ ‘ಅವರು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರು’ ಎನ್ನುತ್ತಾರೆ. ಆದರೆ, ಈ ಉಡುಗೊರೆ ಅದಕ್ಕಿಂತ ದೊಡ್ಡದು. ಉಡುಗೊರೆ

ನಾರಾಯಣಮೂರ್ತಿ ಅವರು ಇನ್ಫೋಸಿಸ್‌ ಸಂಸ್ಥೆಯಲ್ಲಿ 1.51 ಕೋಟಿ (ಒಂದು ಕೋಟಿ, 51 ಲಕ್ಷ) ಷೇರುಗಳನ್ನು ಹೊಂದಿದ್ದಾರೆ. ಇಷ್ಟು ಷೇರುಗಳಲ್ಲಿ ಅವರು ತಮ್ಮ ಮೊಮ್ಮಗನ ಹೆಸರಿಗೆ ಕೇವಲ 15 ಲಕ್ಷ ಷೇರುಗಳನ್ನು ವರ್ಗಾಯಿಸಿದ್ದಾರೆ! ಅಂದರೆ ಇದು ಈ ಲೆಕ್ಕದಲ್ಲಿ ಅತ್ಯಲ್ಪ ಮಾತ್ರ ! ಆದ್ದರಿಂದಲೇ ನಾರಾಯಣ ಮೂರ್ತಿಯವರ ಮೊಮ್ಮಗ ಅತಿ ಕಿರಿಯ ದ್ವಿಶತ ಕೋಟ್ಯಾಧಿಪತಿ ಆಗಿದ್ದಾನೆ. ಇಂದಲ್ಲದಿದ್ದರೆ ನಾಳೆ ಅವರ ಆಸ್ತಿಗಳೆಲ್ಲ ಮೊಮ್ಮಗನಿಗೆ ಸೇರಬೇಕಲ್ಲವೇ? ಹಾಗಾದರೆ, ಇಷ್ಟು ತರಾತುರಿಯಲ್ಲಿ ನೂರಾರು ಕೋಟಿಗಳನ್ನು ಮೊಮ್ಮಗನಿಗೆ ವರ್ಗಾಯಿಸಿದ್ದು ಏಕೆ? ದೊಡ್ಡವರ ವ್ಯವಹಾರಗಳಲ್ಲಿ ಹಲವು ಅರ್ಥಗಳಿವೆ. ಆ ವ್ಯವಹಾರಗಳು ಸಾಮಾನ್ಯ ಜನರಿಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ! ಉಡುಗೊರೆ

ಈ ಹಸುಗೂಸು ಎಷ್ಟು ಗಂಟೆ ದುಡಿದು ಬೆವರು ಸುರಿಸಿದೆ?

ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ನಾರಾಯಣ ಮೂರ್ತಿ ಅವರು ಇತ್ತೀಚೆಗೆ ದೇಶದ ಯುವಕರಿಗೆ ಕರೆ ನೀಡಿದ್ದರು. ಅದೇನೆಂದರೆ, ವಾರಾಂತ್ಯದ ರಜೆಯೂ ಇಲ್ಲದೆ, ದಿನಕ್ಕೆ 10 ಗಂಟೆ ಮತ್ತು ವಾರದಲ್ಲಿ ಏಳು ದಿನ ಕೆಲಸ ಮಾಡಿ ಎಂಬುದು. ಆ ಸಮಯದಲ್ಲಿ ಅವರು, ಯುವಕರು 70 ಗಂಟೆ ಕೆಲಸ ಮಾಡದಿದ್ದರೆ ಸೋಮಾರಿಗಳ ಲೆಕ್ಕಕ್ಕೆ ಬರುತ್ತಾರೆ ಎಂದಿದ್ದರು. ಇವರ ಈ ಮಾತುಗಳು ಆ ಸಮಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇತ್ತೀಚೆಗಷ್ಟೇ ದ್ವಿಶತಕೋಟ್ಯಾಧಿಪತಿಗಳ ಪಟ್ಟಿಗೆ ಸೇರಿರುವ ನಾರಾಯಣ ಮೂರ್ತಿ ಮೊಮ್ಮಗ ದಿನಕ್ಕೆ ಎಷ್ಟು ಗಂಟೆ ದುಡಿದು ಬೆವರು ಸುರಿಸಿದ್ದಾನೆ? ಉಡುಗೊರೆ

ಫೋರ್ಬ್ಸ್ ಪ್ರಕಾರ, 77 ವರ್ಷದ ನಾರಾಯಣ ಮೂರ್ತಿ ಅವರ ಆಸ್ತಿ ಅಂದಾಜು 38,981 ಕೋಟಿ ರೂಪಾಯಿಗಳು. 1981ರಲ್ಲಿ ಪತ್ನಿ ಸುಧಾಮೂರ್ತಿ ಅವರಿಂದ ಪಡೆದ 10,000 ರೂಪಾಯಿಯಿಂದ ಆರು ಎಂಜಿನಿಯರ್ ಗಳೊಂದಿಗೆ ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿದ್ದರು ಎಂದು ಹೇಳಲಾಗಿದೆ. ಈ 43 ವರ್ಷಗಳಲ್ಲಿ ಅವರು ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಿದರು ಮತ್ತು ಅವರು ಎಷ್ಟು ಸಂಪತ್ತನ್ನು ಸಂಗ್ರಹಿಸಿದರು? ಉಡುಗೊರೆ

ಇದನ್ನು ಓದಿ : ಕರ್ನಾಟಕದಲ್ಲಿ 28ಕ್ಕೆ 2 8ಕ್ಷೇತ್ರಗಳನ್ನು ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ: ಬಿ.ಎಸ್.ಯಡಿಯೂರಪ್ಪ

ಮುಕೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಸಮಾರಂಭ ;

ಇತ್ತೀಚೆಗೆ ಹೆಚ್ಚು ಸುದ್ದಿಯಾದ ಅದ್ದೂರಿ ಸಮಾರಂಭವೆಂದರೆ, ಅದು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಸಮಾರಂಭ! ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಈ ಮೂರು ದಿನಗಳ ಆಚರಣೆಗೆ ಅಂಬಾನಿ ಕುಟುಂಬ ಅಕ್ಷರಶಃ 1,259 ಕೋಟಿ ರೂ. ಹಣ ಖರ್ಚು ಮಾಡಿದೆ! ಇಷ್ಟು ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಿದೆ? ಕೇಂದ್ರೀಯ ತನಿಖಾ ಸಂಸ್ಥೆಗಳಾದ ಐಟಿ ಮತ್ತು ಇಡಿ ಇವರನ್ನು ಪ್ರಶ್ನಿಸುವ ಧೈರ್ಯ ಮಾಡುವುದಿಲ್ಲ. ಮುಕೇಶ್ ಅಂಬಾನಿ 9.70 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ! ಮಗನ ಮೇಲಿನ ಪ್ರೀತಿಗಾಗಿ ವ್ಯಯಿಸಿದ ಮೊತ್ತ ಅವರ ಒಟ್ಟು ಸಂಪತ್ತಿನ ಸಮುದ್ರದಲ್ಲಿ ಒಂದು ಹನಿ ನೀರಿನಂತೆ! ಉಡುಗೊರೆ

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಮ್ಮ ಸಂಪತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಿದ ಗೌತಮ್ ಅದಾನಿ ಅವರ ಒಟ್ಟು ಆಸ್ತಿ ಮೌಲ್ಯ 6.75 ಲಕ್ಷ ಕೋಟಿ! ಅಂಬಾನಿಗಳು ಮತ್ತು ಅದಾನಿಗಳು ಎಷ್ಟು ಗಂಟೆಗಳ ಬೆವರಿನ ದುಡಿಮೆಯ ನಂತರ ಇಷ್ಟು ಸಂಪತ್ತನ್ನು ಗಳಿಸಿಕೊಂಡರು!

ಹಸಿವಿನಿಂದ ಬಳಲುತ್ತಿರುವ 19 ಕೋಟಿ ಜನರು ;

ಮತ್ತೊಂದೆಡೆ, ದೇಶದಲ್ಲಿ 19 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 125 ದೇಶಗಳನ್ನು ಒಳಗೊಂಡಿರುವ ಜಾಗತಿಕ ಹಸಿವು ಸೂಚ್ಯಂಕದಲ್ಲಿ ನಾವು 111 ನೇ ಸ್ಥಾನದಲ್ಲಿದ್ದೇವೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಇನ್ನೊಂದು ವರದಿ ಪ್ರಕಾರ ದೇಶದ ಶೇ.16ರಷ್ಟು ಜನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 53 ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ದೇಶದ ಜನಸಂಖ್ಯೆಯ ಶೇ. 21.25ರಷ್ಟು ಜನರು ದಿನಕ್ಕೆ 160 ರೂ.ಗಿಂತ ಕಡಿಮೆ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಿನಕ್ಕೆ ಹತ್ತಲ್ಲ. ಹನ್ನೆರಡು, ಹದಿನಾಲ್ಕು ಗಂಟೆ ದುಡಿದರೂ ಬಡತನ ತಲೆಮಾರುಗಳಿಂದ ಕಾಡುತ್ತಲೇ ಇರುತ್ತದೆ. ಬಡತನ ದುಃಖಕ್ಕೆ ಕಾರಣವಾಗಿದೆ. ದೇಶದ ಬಹುಪಾಲು ಜನಸಂಖ್ಯೆಯು ತಮ್ಮ ಬದುಕಿಗೆ ಅಗತ್ಯವಾದಷ್ಟು ಸಂಪಾದಿಸಲು ಹೆಣಗಾಡುತ್ತಿದ್ದರೆ, ಕೆಲವರು ಎಲ್ಲಾ ಸೌಕರ್ಯಗಳನ್ನು ಹೇಗೆ ಪಡೆಯುತ್ತಿದ್ದಾರೆ?!

ಉದ್ಯಮಿಗಳ ಸಂಪತ್ತು ವೃದ್ಧಿ ಇಷ್ಟು ವೇಗದಲ್ಲಿ ಹೇಗೆ?

ಅದಾನಿಗಳು, ಅಂಬಾನಿಗಳು, ನಾರಾಯಣಮೂರ್ತಿಗಳಂತಹ ಉದ್ಯಮಿಗಳ ಸಂಪತ್ತಿನ ವೃದ್ಧಿಯ ಹಿಂದಿನ ನಿಜವಾದ ಕಾರಣ ದೇಶದ ಜನತೆಗೆ ತಿಳಿಯಬೇಕಿದೆ. ಇದಕ್ಕೆ ಆಳುವ ಬಂಡವಾಳಶಾಹಿ ಪಕ್ಷಗಳ ಬಂಡವಾಳಶಾಹಿ ಪರವಾದ ನೀತಿಗಳೇ ಕಾರಣ. ಇತ್ತೀಚಿಗೆ ಬಹಿರಂಗಗೊಂಡ ಮತ್ತು ಪ್ರಸ್ತುತ ವ್ಯಾಪಕ ಚರ್ಚೆಯಲ್ಲಿರುವ ಚುನಾವಣಾ ಬಾಂಡ್ ಎಂಬ ಕಳ್ಳ ವ್ಯವಹಾರ ಆಳುವ ಪಕ್ಷಗಳು ಮತ್ತು ಉದ್ಯಮಿಗಳ ನಡುವಿನ ಗಾಢವಾದ ಸಂಬಂಧಗಳನ್ನು ಬಹಿರಂಗಗೊಳಿಸಿದೆ. ಆಳುವ ರಾಜಕೀಯ ಪಕ್ಷಗಳು ಮತ್ತು ಉದ್ಯಮಿಗಳ ನಡುವಿನ ‘ಕೊಡು ಕೊಳ್ಳುವ ವ್ಯವಹಾರ’ದ ಮೂಲಕ ಉದ್ಯಮಿಗಳು ಹೇಗೆ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬುದನ್ನು ಇದು ಸ್ವಲ್ಪಮಟ್ಟಿಗಾದರೂ ಜನತೆಗೆ ತಿಳಿಸುತ್ತದೆ. ಈ ಉದ್ಯಮಿಗಳ ಸಂಪತ್ತು ಸಾರ್ವಜನಿಕರ ಸಂಪತ್ತನ್ನು ದೋಚುವ ಮೂಲಕವೇ ಅಗತ್ಯಕ್ಕಿಂತ ಹೆಚ್ಚಾಗಿ ವೃದ್ಧಿಯಾಗಿದೆ.

ಆಳುವ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಲಂಚ ಕೊಟ್ಟು, ಉದ್ಯಮಿಗಳು ಸರ್ಕಾರದಿಂದ ಪಡೆದ ಸಾರ್ವಜನಿಕರ ಸ್ವತ್ತೆಷ್ಟೊ? ಉದ್ಯಮಗಳ ಸ್ಥಾಪನೆ ಹೆಸರನಲ್ಲಿ, ಹೊಸದಾಗಿ ಹೆಸರಿಟ್ಟಿರುವ ‘ನವೋದ್ಯಮ’ ಹೆಸರಿನಲ್ಲಿ ಪಡೆದ ಉಚಿತ ಭೂಮಿ ಎಷ್ಟೋ? ಪಡೆದ ತೆರಿಗೆ ವಿನಾಯಿತಿ ಎಷ್ಟೋ? ಬ್ಯಾಂಕುಗಳಿಂದ ಪಡೆದ ಬಡ್ಡಿ ರಹಿತ ಅಥವಾ ರಿಯಾಯಿತಿ ದರದ ಸಾಲವೆಷ್ಟೊ? ಪ್ಯಾಕೇಜ್ ಗಳ ಹೆಸರಿನಲ್ಲಿ ಮೋದಿ ಸರ್ಕಾರ ಉದ್ಯಮಿಗಳಿಗೆ ಬಾಚಿಕೊಟ್ಟ ಹಣವೆಷ್ಟೋ? ಈ ಉದ್ಯಮಿಗಳು ತಾವು ಬ್ಯಾಂಕುಗಳಿಂದ ಪಡೆದ ಸಾಲಗಳನ್ನು ಮರುಪಾವತಿ ಮಾಡದೆ, ಮನ್ನಾ ಅಥವಾ ರೈಟ್ ಆಪ್ ಮಾಡಿಸಿಕೊಂಡ ಹಣವೆಷ್ಟೋ? (ಒಟ್ಟು 15 ಲಕ್ಷ ಕೋಟಿ ಸಾಲ ರೈಟ್ ಆಪ್ /ಮನ್ನಾ ಮಾಡಲಾಗಿದೆ). ಇವೆಲ್ಲವೂ ಸಾರ್ವಜನಿಕರ ಸಂಪತ್ತು. ಆದರೂ, ಸಾಲ ಪಡೆದು ವಂಚಿಸಿದ ಉದ್ಯಮಿಗಳು ಯಾರೆಂದು ನಮಗಿನ್ನೂ ತಿಳಿಯಲು ಸಾಧ್ಯವಾಗುತ್ತಿಲ್ಲ. ಇಂತಹ ಉದ್ಯಮಿಗಳು ಯಾರೆಂದು ಸಾರ್ವಜನಿಕರಿಗೆ ತಿಳಿಸಿ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು , ಇದಕ್ಕೂ ಮೋದಿ ಸರ್ಕಾರ ಬೆಲೆ ಕೊಡುತ್ತಿಲ್ಲ. ಇಷ್ಟೆಲ್ಲಾ ಸಾಲದೆಂಬಂತೆ, ಸರ್ಕಾರಕ್ಕೆ ಬರುತ್ತಿದ್ದ ಆದಾಯದಲ್ಲಿ ಪ್ರತಿ ವರ್ಷ ಒಂದು ಲಕ್ಷ ಕೋಟಿ ಆದಾಯ ಕಳೆದುಕೊಳ್ಳುವ ಶೇಕಡಾ 8ರಷ್ಟು ಕಾರ್ಪೊರೇಟ್ ತೆರಿಗೆಯನ್ನು ಕಡಿತ ಮಾಡಲಾಗಿದೆ.

ಇದೂ ಅಲ್ಲದೆ, ಡಾಲರ್ ಎದುರಿನ ರೂಪಾಯಿ ಮೌಲ್ಯದ ಕುಸಿತವು ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಮತ್ತು ಸಾರ್ವಜನಿಕರು ಬಳಕೆ ಮಾಡುವ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇದು ಜನಸಾಮಾನ್ಯರ ಬದುಕನ್ನು ಬಾಧಿಸುತ್ತದೆ. ಆದರೆ, ರೂಪಾಯಿ ಮೌಲ್ಯ ಕುಸಿತವು, ವಿದೇಶದಲ್ಲಿ ಡಾಲರ್ ಲೆಕ್ಕದಲ್ಲಿ ವ್ಯವಹರಿಸುವ, ಡಾಲರ್ ಲೆಕ್ಕದಲ್ಲಿ ತಮ್ಮ ಉತ್ಪನ್ನಗಳನ್ನು, ಮಾಹಿತಿ ತಂತ್ರಜ್ಞಾನವನ್ನು ರಪ್ತುಮಾಡುವ ಇನ್ಪೋಸಿಸ್ ಸಂಸ್ಥೆಗೆ ಮತ್ತು ನಾರಾಯಣ ಮೂರ್ತಿ, ಅಂಬಾನಿಯವರಂತಹ ಉದ್ಯಮಿಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಸ್ಥಳೀಯವಾಗಿ ಉತ್ಪನ್ನವಾಗುವ ಪೆಟ್ರೋಲಿಯಂ ಪದಾರ್ಥಗಳನ್ನು ಕೂಡ ಅಂತರಾಷ್ಟ್ರೀಯ ಮಾರುಕಟ್ಟೆ ದರದಲ್ಲಿ ಸ್ಥಳೀಯವಾಗಿ ಮಾರಾಟ ಮಾಡಿ ಗ್ರಾಹಕರನ್ನು ಸುಲಿಗೆ ಮಾಡುತ್ತಾರೆ. ಇವೆಲ್ಲವಕ್ಕೂ ನಮ್ಮ ದೇಶದ ಬಂಡವಾಳಶಾಹಿ ಆಡಳಿತದಲ್ಲಿ ಮುಕ್ತ ಅವಕಾಶಗಳಿವೆ.

ನಾರಾಯಣಮೂರ್ತಿ ತಮ್ಮ ಮೊಮ್ಮಗನಿಗೆ ಕೊಟ್ಟ 240 ಕೋಟಿ ರೂ. ಉಡುಗೊರೆಯಲ್ಲಿ ಮತ್ತು ಮುಕೇಶ್ ಅಂಬಾನಿ ಪುತ್ರನ ವಿವಾಹ ಪೂರ್ವ ಸಮಾರಂಭಕ್ಕೆ ವೆಚ್ಚ ಮಾಡಿದ 1,259 ಕೋಟಿ ರೂ. ಹಣದಲ್ಲಿ ದುಡಿಯುವ ವರ್ಗದ, ಜನಸಾಮಾನ್ಯರ ಬೆವರಿನ ಫಲದ ಪಾಲಿದೆ, ಸಾರ್ವಜನಿಕರ ಸಂಪತ್ತಿನಲ್ಲಿ ದೋಚಿದ ಭಾಗವೂ ಇದೆ ಎಂಬುದನ್ನು ಅರಿಯಬೇಕಿದೆ.

ಇದನ್ನು ನೋಡಿ : JNU ವಿದ್ಯಾರ್ಥಿ ಸಂಘದ ಚುನಾವಣೆ : ಎಡ ವಿದ್ಯಾರ್ಥಿ ಸಂಘಟನೆಗಳಿಗೆ ಭರ್ಜರಿ ಗೆಲುವು Janashakthi Media

Donate Janashakthi Media

Leave a Reply

Your email address will not be published. Required fields are marked *