ಕಾರ್ಯಕರ್ತರು ಕಾಂಗ್ರೆಸ್‌ನ ಆಧಾರ ಸ್ತಂಬಗಳು

ಬೆಂಗಳೂರು: ನೀವೆಲ್ಲರೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಯಭಾರಿಗಳು ನೀವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ನಾನು ಹಾಗೂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿ ಅಲ್ಲಿ ನಾವು ಮೊದಲ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಘೋಷಣೆ ಮಾಡಿದೆವು. ಈ ಯೋಜನೆಯಿಂದ 1.50 ಕೋಟಿ ಮನೆಗಳಿಗೆ ಪ್ರಯೋಜನವಾಗುತ್ತಿದೆ. ಇನ್ನು ಹಸಿವು ಮುಕ್ತ ರಾಜ್ಯ ಮಾಡಲು ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಿದೆವು. ನಾವು ಅಕ್ಕಿ ಖರೀದಿ ಮಾಡಲು ಕೇಂದ್ರಕ್ಕೆ ಮನವಿ ಮಾಡಿದರೆ, ಕೇಂದ್ರ ಸರ್ಕಾರ ನಿರಾಕರಿಸಿತು. ಹೀಗಾಗಿ ನಮ್ಮ ಸರ್ಕಾರ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣವನ್ನು ನೀಡುತ್ತಿದ್ದೇವೆ ಎಂದರು.

ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆ 70ರಿಂದ 110ಕ್ಕೆ ಏರಿತು. ಅಡುಗೆ ಅನಿಲ 410ರಿಂದ 1100 ರೂಪಾಯಿ ಆಯಿತು. ಅಡುಗೆ ಎಣ್ಣೆ 200ರ ಗಡಿ ದಾಟಿತು. ಹೀಗಾಗಿ ನಾವು ಬೆಲೆ ಏರಿಕೆ ಸಮಯದಲ್ಲಿ ಮಹಿಳೆಯರಿಗೆ ನೆರವಾಗಬೇಕು ಎಂದು ಚರ್ಚೆ ಮಾಡಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದೆವು. ಇಂದು 1.33 ಕೋಟಿ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ನೀಡಲಾಗುತ್ತಿದೆ. ಈ ಯೋಜನೆ ಘೋಷಣೆ ವೇಳೆ ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ನಮ್ಮ ಗ್ಯಾರಂಟಿ ಚೆಕ್ ಗೆ ನಾನು ಹಾಗೂ ಸಿದ್ದರಾಮಯ್ಯ ಅವರು ಸಹಿ ಹಾಕಿದೆವು. ನಮ್ಮ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿ ಮಂಗಳೂರಿನಲ್ಲಿ ರಾಹುಲ್ ಗಾಂಧಿ ಅವರು ಶಕ್ತಿ ಯೋಜನೆ ಘೋಷಣೆ ಮಾಡಿದರು. ಆಮೂಲಕ ರಾಜ್ಯದ ಎಲ್ಲೆಡೆ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಯಿತು. ನಂತರ ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲು ಯುವನಿಧಿ ಯೋಜನೆ ಘೋಷಣೆ ಮಾಡಿ ಶಿವಮೊಗ್ಗದಲ್ಲಿ ಜಾರಿ ಮಾಡಿದೆವು. ಈ ಕಾರ್ಯಕ್ರಮಕ್ಕೆ 1 ಲಕ್ಷ ಯುವಕರು ಭಾಗವಹಿಸಿದ್ದರು. ಅಲ್ಲಿನ ಜನರನ್ನು ನೋಡಿದರೆ ಯಡಿಯೂರಪ್ಪನವರ ಮಗ ಗೆಲ್ಲುವುದು ಅಸಾಧ್ಯ ಎಂಬುದು ಖಚಿತವಾಗುತ್ತದೆ. ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬಗಳಿಗೆ ಮಾಸಿಕ 5-6 ಸಾವಿರ ಉಳಿತಾಯವಾಗುತ್ತದೆ. ಆಮೂಲಕ ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡಲಾಗಿದೆ. ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂದು ಒತ್ತಿ ಹೇಳಿದರು.

ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಕಾಂಗ್ರೆಸ್ ಪಕ್ಷ ನಿಮ್ಮನ್ನು ನಂಬಿದೆ. ನೀವು ಈ ನಂಬಿಕೆ ಉಳಿಸಿಕೊಳ್ಳಬೇಕು. ನಾವು ದೊಡ್ಡ ಹುದ್ದೆ ಕೊಟ್ಟಿದ್ದೇವೆ ಎಂದು ಹೇಳುತ್ತಿಲ್ಲ. ಆದರೆ ಸಾಧ್ಯವಾದಷ್ಟು ಗೌರವ ಹಾಗೂ ಅಧಿಕಾರ ನೀಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಕರ್ನಾಟಕ ರಾಜ್ಯದ 3.71 ಲಕ್ಷ ಕೋಟಿ ಮೊತ್ತದ ಬಜೆಟ್ ನಲ್ಲಿ 56 ಸಾವಿರ ಕೋಟಿ ಮೀಸಲಿಡಲಾಗಿದೆ. ಅಭಿವೃದ್ಧಿಗೆ 1.20 ಲಕ್ಷ ಕೋಟಿ ಮೀಸಲು ಇಟ್ಟಿದ್ದೇವೆ.ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿ ಹುಂಡಿ ತುಂಬುತ್ತಿದೆ. ಮಹಿಳೆಯರು ನಿಮ್ಮ ಹೆಸರಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ.ಎಐಸಿಸಿ ನಾಯಕರು ಕೂಡ ಐದು ನ್ಯಾಯ ಯೋಜನೆಗಳನ್ನು ಘೋಷಿಸಿದ್ದು, ಈ ನ್ಯಾಯ ಯೋಜನೆಗಳಲ್ಲಿ ತಲಾ ಐದು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಿಳಾ ನ್ಯಾಯ ಯೋಜನೆಯಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಕುಟುಂಬದ ಮನೆಯೊಡತಿಯರಿಗೆ ವರ್ಷಕ್ಕೆ 1 ಲಕ್ಷ, ಕೇಂದ್ರದ ಹೊಸ ನೇಮಕಾತಿಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಮೀಸಲುಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ವೇತನದಲ್ಲಿ ಕೇಂದ್ರದ ಪಾಲು ದುಪ್ಪಟ್ಟು ಮಾಡಲಾಗುವುದು ಎಂದರು.

ರೈತ ನ್ಯಾಯದಲ್ಲಿ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ, ಕೃಷಿ ಕ್ಷೇತ್ರ ಜಿಎಸ್ಟಿ ಮುಕ್ತ. ಕೃಷಿ ಸಾಲ ಮನ್ನಾ ಆಯೋಗ ಸ್ಥಾಪನೆ. ಶ್ರಮಿಕ ನ್ಯಾಯದಲ್ಲಿ ಕಾರ್ಮಿಕರಿಗೆ ಆರೋಗ್ಯದ ಹಕ್ಕು, ಕಾರ್ಮಿಕ ವಿರೋಧಿ ಕಾನೂನು ರದ್ದು, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಗರ ಉದ್ಯೋಗ ಖಾತ್ರಿ. ಹೀಗೆ ಐದು ನ್ಯಾಯ ಯೋಜನೆಯಲ್ಲಿ 25 ಗ್ಯಾರಂಟಿ ಗಳನ್ನ ಘೋಷಣೆ ಮಾಡಲಾಗಿದೆ‌ ಎಂದು ಡಿಕೆಶಿ ಹೇಳಿದರು.

ಬಿಜೆಪಿಯವರು ದೇಶದಲ್ಲಿ ಧರ್ಮ, ದೇವರ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರ ಪರವಾಗಿ ಯಾವುದೇ ಅಲೆ ಇಲ್ಲ. ನಾವು ನಮ್ಮ ಊರುಗಳ ಬಡ ದೇವಾಲಯಗಳ ಅಭಿವೃದ್ಧಿಗೆ ಕಾನೂನು ತಂದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಈ ಕಾನೂನನ್ನು ಪರಿಷತ್ ನಲ್ಲಿ ಮಣಿಸಿದ್ದಾರೆ. ಈಗ ಈ ಯೋಜನೆಗಳನ್ನು ಜಾರಿಗೊಳಿಸಲು ಈ ಅನುಷ್ಠಾನ ಸಮಿತಿ ಮಾಡಲಾಗಿದೆ. ರಾಜ್ಯ ಮಟ್ಟ, ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿ ಮಾಡಿ ಅವರಿಗೆ ಕಚೇರಿ ಹಾಗೂ ಗೌರವಧನ ನೀಡಲಾಗುವುದು. ಇದರ ಜತೆಗೆ ಆರಾಧನ, ಶಿಕ್ಷಣ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುತ್ತಿದೆ. ನಾವು ನುಡಿದಂತೆ ನಡೆದು ನಿಮಗೆ ಶಕ್ತಿ ನೀಡಿದ್ದೇವೆ. ಈಗ ನೀವು ಪಂಚಾಯ್ತಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ಮನೆ ಮನೆಗೆ ಹೋಗಿ ಜನರಿಗೆ ಈ ಯೋಜನೆ ತಲುಪಿಸಬೇಕು. ಆಮೂಲಕ ನಮಗೆ ನೀವು ಶಕ್ತಿ ನೀಡಬೇಕು ಎಂದು ಕರೆ ನೀಡಿದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು, ತೆನೆ ಹೊತ್ತ ಮಹಿಳೆ ತೆನೆ ಬಿಸಾಡಿದಳು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಕರ್ನಾಟಕ ಪ್ರಬುದ್ಧವಾಯಿತು, ಕರ್ನಾಟಕ ಸಮೃದ್ಧವಾಯಿತು‌ ಎಂದರು.

ನಾವು ಎಷ್ಟೇ ದೊಡ್ಡವರಾದರೂ ಕಾರ್ಯಕರ್ತರು. ಹೀಗಾಗಿ ನಾವು ಸ್ವಾಭಿಮಾನ ಬಿಡಬೇಕು. ನಮ್ಮ ಪಕ್ಷದ ಶಾಲು ತ್ರಿವರ್ಣ ಹೊಂದಿದೆ. ಈ ಶಾಲು ಹಾಕಿಕೊಳ್ಳುವ ಅವಕಾಶ ಕಾಂಗ್ರೆಸಿಗರಿಗೆ ಬಿಟ್ಟು ಬೇರೆಯವರಿಗೆ ಇಲ್ಲ. ನೀವು ನಿಮ್ಮ ನಿಮ್ಮಗಳ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲಿಲ್ಲವಾದರೆ ನೀವು ನಾಯಕರಲ್ಲ, ನೀವು ಕೆಲಸ ಮಾಡಿಲ್ಲ ಎಂದರ್ಥ. ಹೀಗಾಗಿ ನೀವು ನಿಮ್ಮ ಬೂತ್ ಗಳಲ್ಲಿ ಪಕ್ಷಕ್ಕೆ ಮುನ್ನಡೆ ತನ್ನಿ, ಪಕ್ಷ ಬಲಪಡಿಸುವಂತೆ‌ ಕರೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *