ನಾಗೇಶ್ ಹೆಗಡೆ
ಒಬ್ಬೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ಹಾಕುತ್ತೇನೆಂದು ಹೇಳಿದವರ ಬಗ್ಗೆ ನಮಗೆ ಗೊತ್ತಿದೆ. ಬರೀ 15 ಲಕ್ಷವಲ್ಲ, 15 ಕೋಟಿ ರೂಪಾಯಿ ಸಿಗುವಂತೆ ಮಾಡುತ್ತೇನೆ ಎಂಬ ಕನಸನ್ನು ಬಿತ್ತುತ್ತ ಹೋದವನ ಕತೆ ಇಲ್ಲಿದೆ. ಕಮಲ
ಈತನ ಹೆಸರು ಸ್ಯಾಂಟಿಯಾಗೊ ಮಾರ್ಟಿನ್. ಕೊಯಿಂಬತ್ತೂರಿನಲ್ಲಿ ಜನಿಸಿ, ಮ್ಯಾನ್ಮಾರ್ಗೆ ಹೋಗಿ ಅಲ್ಲಿಂದ ಮತ್ತೆ ಬಂದು ನಮ್ಮ ದೇಶದ ತುಂಬೆಲ್ಲ ಲಾಟರಿ ಏಜೆನ್ಸಿ ನಡೆಸುವವ. ಈತನೇ ಎಲ್ಲರಿಗಿಂತ ಹೆಚ್ಚು ₹ 1368 ಕೋಟಿ ಮೊತ್ತದ ʻಚುನಾವಣಾ ಬಾಂಡ್ʼ ಖರೀದಿಸಿದವ.
ಇವನ ಕಂಪನಿಯ ಹೆಸರು ʻಫ್ಯೂಚರ್ ಗೇಮಿಂಗ್ ಅಂಡ್ ಹೊಟೆಲ್ ಸರ್ವಿಸಿಸ್ʼ. ಈ ಕಂಪನಿಯ ಮೇಲೆ ಇಡಿ ದಾಳಿ ನಡೆಸಿದಾಗಲೆಲ್ಲ ಈತ ಬಾಂಡ್ ಖರೀದಿ ಮಾಡಿದ್ದಾನೆ. ಅಥವಾ ಬಾಂಡ್ ಖರೀದಿ ಮಾಡದೇ ಇದ್ದರೆ ಈತನ ಮೇಲೆ ರೇಡ್ ಆಗುತ್ತಿತ್ತು.
2019ರಿಂದ 2024ರವರೆಗೆ ಅನೇಕ ಬಾರಿ ಈತನ ಮೇಲೆ ಇನ್ಕಮ್ ಟ್ಯಾಕ್ಸ್ ದಾಳಿ, ಇಡಿ ದಾಳಿ, ಸಿಬಿಐ ದಾಳಿ ಎಲ್ಲ ನಡೆದಿವೆ. ಒಮ್ಮೆ ತಮಿಳುನಾಡಿನಲ್ಲಿದ್ದ ಈತನ 409 ಕೋಟಿಯ ಆಸ್ತಿಯನ್ನು ಕೇಂದ್ರ ಸರಕಾರ ಜಪ್ತಿ ಮಾಡಿತ್ತು. ಐದೇ ದಿನಗಳಲ್ಲಿ ಈತನ ಕಂಪನಿ 100 ಕೋಟಿ ರೂಪಾಯಿಗಳ ಬಾಂಡ್ ಖರೀದಿ ಮಾಡುತ್ತದೆ. ಕಮಲ
ಮಾರ್ಟಿನ್ ಮೇಲೆ ಮನಿ ಲಾಂಡ್ರಿಂಗ್ ಪ್ರಕರಣಗಳಿವೆ. ಈತ ಸಿಕ್ಕಿಂ ಸರಕಾರಕ್ಕೆ 910 ಕೋಟಿಯ ನಷ್ಟ ಮಾಡಿದ್ದ. ಕೇರಳದಲ್ಲಿ ಲಾಟರಿ ಹಗರಣದಲ್ಲಿ ಈತನ ಮೇಲೆ 32 ಖಟ್ಲೆಗಳನ್ನು ಹಾಕಲಾಗಿತ್ತು. ಪಂಜಾಬ್ ಲಾಟರಿ ಹಗರಣದಲ್ಲಿ ಸಿಕ್ಕು ವೆಲ್ಲೋರ್ ಜೈಲಲ್ಲಿ ಎಂಟು ತಿಂಗಳು ಕಾಲಯಾಪನೆ ಮಾಡಿದ್ದ.
ಅದೇ ವೇಳೆಗೆ ತಮಿಳುನಾಡಿನಲ್ಲಿ ಚುನಾವಣೆ ಬಂತು. ಕೊಯಂಬತ್ತೂರಿ ನಲ್ಲಿ ಆತನ ಪತ್ನಿ ಲೀಮಾ ರೋಸ್ ನಮ್ಮ ಪ್ರಧಾನಿಯ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಳು.
ಅದೇನೂ ವಿಶೇಷವಲ್ಲ. ಮಾರ್ಟಿನ್ನ ಹಿರಿಯ ಮಗ ಚಾರ್ಲ್ಸ್ ಜೋಸ್ ಮಾರ್ಟಿನ್ ಎಂಬಾತ ದಿಲ್ಲಿಯಲ್ಲಿ ಬಿಜೆಪಿ ಸೇರಿದ್ದಾಗಿ 2015ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. “ಈತನ ಮೇಲೆ ದಾವೆ ಏನೂ ಇಲ್ಲವಲ್ಲ, ಒಳ್ಳೇ ಹುಡುಗ; ಮೋದಿ ಮತ್ತು ಅವರ ಪಕ್ಷದ ಬಗ್ಗೆ ತುಂಬ ಗೌರವ ಇದೆ, ಈತನಿಗೆʼ ಎಂದು ಭಾಜಪಾ ವಕ್ತಾರರು ಹೇಳಿದ್ದು ಪತ್ರಿಕಾ ವರದಿಗಳಿವೆ.
ಈತನಿಂದ ಚಂದಾ ವಸೂಲಿ ಮಾಡಬೇಕಾಗಿ ಬಂದಾಗಲೆಲ್ಲ ಇಡಿ ರೇಡ್ ಮಾಡಿಸುತ್ತಿತ್ತೆ? ಅಥವಾ ಇಡಿ ರೇಡ್ ಮಾಡಿದಾಗಲೆಲ್ಲ ಈತ ಪಕ್ಷಕ್ಕೆ ಚಂದಾ ಕೊಡುತ್ತಿದ್ದನೆ?ʼ ಎಂದು ರವೀಶ್ ಕುಮಾರ್ ಕೇಳುತ್ತಾರೆ. ಅಕ್ಟೊಬರ್ 202೦ರಿಂದ ಹಿಡಿದು ಜನವರಿ 2024ರ ನಡುವೆ ಈತನ ಕಂಪನಿ ಒಮ್ಮೆ 150 ಕೋಟಿ, 109 ಕೋಟಿ, 30 ಕೋಟಿ, 195 ಕೋಟಿ, 210 ಕೋಟಿ, 100 ಕೋಟಿ, 75 ಕೋಟಿ, 105 ಕೋಟಿ, 10 ಕೋಟಿ, 38 ಕೋಟಿ, 150 ಕೋಟಿ, 63 ಕೋಟಿ, 65 ಕೋಟಿ, 5 ಕೋಟಿ, 63 ಕೋಟಿ -ಹೀಗೆ 14 ಬಾರಿ ಬಾಂಡ್ಗಳನ್ನು ಖರೀದಿಸಿದೆ.
ಈ ಅವಧಿಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಹಿಮಾಚಲ್ ಮತ್ತು ಗುಜರಾತ್ ನಲ್ಲಿ ಚುನಾವಣೆಗಳು ನಡೆದಿದ್ದವು.ಚುನಾವಣೆ ಬಂದಾಗಲೆಲ್ಲ ಈತನ ಕಂಪನಿಯ ಮೇಲೆ ದಾಳಿ ನಡೆಯುತ್ತಿತ್ತೆ?
ತನ್ನ ರಾಜ್ಯದ ಚುನಾವಣಾ ಸಂದರ್ಭದಲ್ಲೇ ಮಾರ್ಟಿನ್ ಕಂಪನಿಯು ಭಾಜಪಾಕ್ಕೆ 100 ಕೋಟಿ ಚಂದಾ ಕೊಟ್ಟನೆಂದೂ ಇದರ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದೂ ತಮಿಳು ನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ 2021ರಲ್ಲಿ ಟ್ವೀಟ್ ಕೂಡ ಮಾಡಿದ್ದಿದೆ.
ರಾಯ್ಟರ್ ವರದಿಯ ಪ್ರಕಾರ ದಿಲ್ಲಿಯಲ್ಲಿ ಕೇವಲ ಇಬ್ಬರು ಸಿಬ್ಬಂದಿ ಇರುವ ಒಂದು ಚಿಕ್ಕ ಕಚೇರಿಯಿಂದ ಇಷ್ಟೆಲ್ಲ ಹಣ ವಿತರಣೆ ಆಗುತ್ತಿದ್ದುದು ಯಾರಿಗೆ? ಈ ಕಂಪನಿಗೆ ಅಷ್ಟೆಲ್ಲ ಹಣ ಎಲ್ಲಿಂದ ಬರುತ್ತಿತ್ತು? ಯಾರೋ ಈತನ ಮೂಲಕ ಬಾಂಡ್ ಖರೀದಿ ಮಾಡಿ ಆಳುವ ಪಕ್ಷಕ್ಕೆ ಕೊಡುತ್ತಿದ್ದರೆ?
ಈತ ಬಾಂಡ್ ಖರೀದಿಸಿದ್ದರ ಬಗ್ಗೆ ದಾಖಲೆ ಇದೆ. ಆದರೆ ಯಾವ ಪಕ್ಷಕ್ಕೆ ಕೊಟ್ಟಿದ್ದ ಎಂಬುದರ ಅಧಿಕೃತ ಮಾಹಿತಿ ಸದ್ಯಕ್ಕೆ ಬಂದಿಲ್ಲ. ಇನ್ನೇನು ಅದೂ ಬಹಿರಂಗ ಆಗುತ್ತದೆ.
ಮಾರ್ಚ್ 2021ರ ಮಾರ್ಚ್ 23, 24ರಂದು ಈತನ ಕಂಪನಿ ಕ್ರಮವಾಗಿ 50 ಕೋಟಿಗಳ ಎರಡು ಬಾಂಡ್ ಖರೀದಿ ಮಾಡಿತ್ತು. ಅದೇ ದಿನ ಭಾಜಪಾಕ್ಕೆ ಅಷ್ಟೇ ಮೊತ್ತದ ಹಣವನ್ನು ನೀಡಿತ್ತು. ಈತ ನೀಡಿದ ಹಣದ ಬಹುಪಾಲು ಭಾಜಪಾಕ್ಕೇ ಸೇರಿದೆ ಎನ್ನಲು ಇನ್ನೂ ಅದೆಷ್ಟೊ ಕ್ಲೂಗಳಿವೆ.
ಒಂದು ಕಡೆ ರಾಜಕೀಯ ಲಾಭ (ಇಡಿ ದಾಳಿಯ ಭಯ ಹುಟ್ಟಿಸಿ ರಾಜಕಾರಣಿಗಳನ್ನು ತನ್ನ ಪಕ್ಷಕ್ಕೆ ಸೆಳೆದುಕೊಳ್ಳುವುದು) ಮತ್ತು ಇನ್ನೊಂದು ಕಡೆ (ಕಂಪನಿಗಳ ಮೇಲೆ ಇಡಿ ಛೂ ಬಿಟ್ಟು) ಆರ್ಥಿಕ ಲಾಭ ಪಡೆದು ದೇಶದುದ್ದಕ್ಕೂ ತನ್ನ ಸಾಧನೆಯನ್ನು ಅಹೋರಾತ್ರಿ ಟಾಂ ಟಾಂ ಮಾಡುವುದು. ಇಂಥವರ ಆಡಳಿತದಲ್ಲಿ ನಾವಿದ್ದೇವೆ.
ಈತ ತನ್ನವರ ಜೊತೆ ಸೇರಿ ಅರ್ಥ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿದ್ದನ್ನು ಸ್ವತಃ ನಿರ್ಮಲಾ ಅವರೇ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಈತನೂ ಆ ಚಿತ್ರವನ್ನು ತೋರಿಸುತ್ತ ಬಡಾಯಿ ಕೊಚ್ಚಿಕೊಂಡಿದ್ದ. “ಲಾಟರಿ ಓಪನ್ ಮಾಡಿದರೆ 5 ಲಕ್ಷ ಜನರಿಗೆ ನೌಕರಿ ಸಿಗುತ್ತದೆಂದೂ ಸರಕಾರಕ್ಕೆ 1.37 ಲಕ್ಷ ಕೋಟಿ ಜಿಎಸ್ಟಿ ಸಿಗುತ್ತದೆ” ಎಂದು ತಾನು ಅರ್ಥ ಸಚಿವೆಗೆ ಸಲಹೆ ನೀಡಿದ್ದಾಗಿ ಹೇಳಿಕೊಂಡಿದ್ದ.
ಇದ್ದುದರಲ್ಲಿ ಒಳ್ಳೆಯ ಸಂಗತಿ ಏನೆಂದರೆ ನಿರ್ಮಲಾ ಸೀತಾರಾಮನ್ ಈತನ ಸಲಹೆಯನ್ನು ಸ್ವೀಕರಿಸಿರಲಿಲ್ಲ.
ಮಾರ್ಟಿನ್ ಕೇರಳದ ಸಿಪಿಎಮ್ ಮುಖವಾಣಿ ʼದೇಶಾಭಿಮಾನಿʼಗೆ ಅಪ್ಪ ಮಾರ್ಟಿನ್ ಎರಡು ಕೋಟಿ ದಾನ ಕೊಟ್ಟಿದ್ದ. ಅದು ಗೊತ್ತಾಗಿ ಸಿಪಿಎಮ್ ಕೆರಳಿ, ಈ ಪತ್ರಿಕೆಯ ಮುಖ್ಯಾಧಿಕಾರಿಯಿಂದ ಅಷ್ಟೂ ಹಣವನ್ನು ಕಕ್ಕಿಸಿದ್ದಲ್ಲದೆ, ಆತನ ರಾಜೀನಾಮೆಯನ್ನೂ ಪಡೆಯಿತು. ತಮಿಳು ನಾಡಿನಲ್ಲಿ ಕರುಣಾನಿಧಿಯ ಕಥೆಯನ್ನು ಆಧರಿಸಿ ಮಾರ್ಟಿನ್ ಒಂದು ಸಿನೆಮಾವನ್ನೂ ನಿರ್ಮಿಸಿದ್ದ.
ಈ ಅಕ್ರಮಗಳ ಕಥಾಸರಣಿ ಈಗಷ್ಟೇ ಆರಂಭವಾಗಿದೆ. ಇನ್ನೂ ಹೆಚ್ಚಿನ ವಿವರಗಳು ಮತ್ತೆ ಮತ್ತೆ ಬರಲಿವೆ.
ಚುನಾವಣಾ ಬಾಂಡ್ ಖರೀದಿಸಿದ ಇನ್ನೊಂದು ಕಂಪನಿಯ ಹೆಸರು ʻಹೆಟೆರೋ ಫಾರ್ಮಾʼ. ವರಮಾನ ತೆರಿಗೆ ಇಲಾಖೆ ಇದರ ಮೇಲೆ ದಾಳಿ ಮಾಡುತ್ತದೆ. 2021 ಇಕಾನಮಿಕ್ ಟೈಮ್ಸ್…ವರದಿ. 550 ಕೋಟಿಯ ಅಘೋಷಿತ ವರಮಾನ ಪತ್ರೆಯಾಗುತ್ತದೆ. 142 ಕೋಟಿ ಕ್ಯಾಶ್. ನಂತರ ಕಂಪನಿ ಬಾಂಡ್ ಖರೀದಿ ಮಾಡಿತು. ಈ ಕಂಪನಿ ರೆಮ್ಡೆಸಿವಿಯರ್ ತದ್ರೂಪದ ಔಷಧವನ್ನೂ ಉತ್ಪಾದಿಸುತ್ತಿತ್ತು.
ಮೋದಿಯವರ ಆಡಳಿತಕ್ಕೆ ಸದಾ ಉಘೇ ಉಘೇ ಎನ್ನುವ ಗೋದಿ ಮೀಡಿಯಾದಲ್ಲೂ ಒಂದು ಕಂಪನಿ ಖಾಸಗಿಯಾಗಿ ಬೇರೊಂದು ವ್ಯವಹಾರ ನಡೆಸುತ್ತಿತ್ತು. ಅದೂ 966 ಕೋಟಿಯ ಬಾಂಡ್ ಖರೀದಿ ಮಾಡಿತ್ತು. ಖರೀದಿಯ ನಂತರ ಇದಕ್ಕೆ 14 ಸಾವಿರ ಕೋಟಿ ರೂಪಾಯಿಯ ಗುತ್ತಿಗೆ ಲಭಿಸಿತ್ತು….
ನಮ್ಮ ದೇಶದಲ್ಲಿ 16 ಲಕ್ಷ ನೋಂದಾಯಿತ ಕಂಪನಿಗಳಿವೆ. ಅವುಗಳಲ್ಲಿ ಕೇವಲ 1300 ಮಾತ್ರ ಬಾಂಡ್ ಖರೀದಿವೆ. ದೊಡ್ಡ ಮೊತ್ತದ ಹಣ ನೀಡಿದ ಕಂಪನಿಗಳ ಸಂಖ್ಯೆ 25-30 ಕೂಡ ಇಲ್ಲ. ಅಂದರೆ, ಇವರೇ ಇಡೀ ದೇಶವನ್ನು ಆಳುತ್ತಿದ್ದಾರೆ.
-ಹೀಗೆಂದು ಹೇಳುತ್ತ ಇವೆಲ್ಲ ಕರಾಳ ಸಂಗತಿಗಳನ್ನೂ ಸಾಕ್ಷ್ಯಾಧಾರಗಳ ಸಮೇತ ರವೀಶ್ ಕುಮಾರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಶ್ಲೇಷಿಸಿದ್ದಾರೆ (ಅವರು ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹಿಂದೀ ಪತ್ರಕರ್ತ).
“ಲಾಟರಿ ರಾಜ ಮಾರ್ಟಿನ್ನಿಂದ ಇಷ್ಟೆಲ್ಲ ಹಣ ವಸೂಲಿ ಮಾಡಿ ದರ್ಬಾರ ನಡೆಸಿದ್ದು ನಿಜವೆಂದು ಭಾಜಪಾ ಒಪ್ಪಿಕೊಂಡೀತೆ?
ಶ್ರೀರಾಮಚಂದ್ರನ ಆಣೆಯಾಗಿ ಆ ಅಷ್ಟೂ ಮೊತ್ತವನ್ನು ಮಾರ್ಟಿನ್ ಮಹಾಶಯನಿಗೆ ಹಿಂದಿರುಗಿಸುತ್ತೇನೆಂದು ಘೋಷಣೆ ಮಾಡೀತೆ?” ಎಂದು ರವೀಶ್ ಕೇಳುತ್ತಾರೆ.
“ರಾಷ್ಟ್ರದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನಮ್ಮನ್ನೆಲ್ಲ ಮಂಗ ಮಾಡುವವರ ಬಗ್ಗೆ ಹುಷಾರಾಗಿರಿ” ಎಂದೂ ಅವರು ಎಚ್ಚರಿಸುತ್ತಾರೆ. ರವೀಶ್ರವ ವಿಡಿಯೋ ಈ ಲಿಂಕ್ ಕೆಳಗೆ ಇದೆ.
ನಾನು ಇದನ್ನು ಇಲ್ಲಿ ಪೋಸ್ಟ್ ಮಾಡಿದ್ದು ಏಕೆಂದರೆ-
ವಿರೋಧ ಪಕ್ಷಗಳಂತೂ ನರಸತ್ತಂತಿವೆ. ಪ್ರಧಾನಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುವಷ್ಟೂ ದಮ್ ಅವಕ್ಕಿಲ್ಲ. ಜೊತೆಗೆ ಬಹುತೇಕ ಮಾಧ್ಯಮಗಳು ಆಳುವ ಪಕ್ಷದ ಕೈಗೊಂಬೆಗಳಾಗಿ ʼಮಡಿಲು ಮಾಧ್ಯಮʼ ಎನ್ನಿಸಿಕೊಂಡಿವೆ. ಆದರೂ ಈ ಚುನಾವಣಾ ಬಾಂಡ್ʼ ವಿಷಯ ಬಂದಾಗ ಅವೆಷ್ಟು ಚುರುಕಾಗಿವೆ ಎಂಬುದರ ಒಂದು ಉದಾಹರಣೆ ಇದು ಅಷ್ಟೆ. ಅನೇಕ ವ್ಯಂಗ್ಯಚಿತ್ರಕಾರರು ತುಂಬ ಹರಿತವಾದ ಚಿತ್ರಗಳನ್ನು ಬರೆದಿದ್ದಾರೆ. ಆ ಸ್ವಾತಂತ್ರ್ಯ ಅವರಿಗೆ ಇನ್ನೂ ಇದೆ, ಅದಕ್ಕೆ ಜೈ ಎನ್ನೋಣ. ನ್ಯಾಯಾಲಯಕ್ಕೆ ಈಗಲೂ ಸರ್ವೋಚ್ಚ ಶಕ್ತಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅದಕ್ಕೆ ಸಲಾಂ.
ಪ್ರಜಾಪ್ರಭುತ್ವ ಪೂರ್ತಿ ನೆಲ ಕಚ್ಚಿಲ್ಲ ಎಂದು ನಾವೆಲ್ಲ ಹೆಮ್ಮೆ ಪಡೋಣ.