ರಾಜ್ಯ ಬಜೆಟ್‌ 2024 : ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಸ್ವಾಗತಾರ್ಹ,ಕೃಷಿ ಬಿಕ್ಕಟ್ಟಿಗೆ ಪರಿಹಾರ ಒದಗಿಸುವಲ್ಲಿ ವಿಫಲ – ಪ್ರಾಂತ ರೈತ ಸಂಘ

ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲದಲ್ಲಿ ನೆರವಿಗೆ ಬಂದ ಐದು ಗ್ಯಾರಂಟಿ ಯೋಜನೆಗಳಿಗೆ ಬದ್ದತೆ ಮುಂದುವರೆಸಿರುವುದು ಸ್ವಾಗತಾರ್ಹವಾಗಿರುವಾಗಲೇ ,ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆಗೆ ಪರಿಹಾರ ಒದಗಿಸುವ ನಿರ್ಣಾಯಕ ಕ್ರಮಗಳನ್ನು ಈ ಬಜೆಟ್ ಒಳಗೊಂಡಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯ ಪಟ್ಟಿದೆ.

ರಾಜ್ಯ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್‌ ಜಂಟಿ ಹೇಳಿಕೆ ನೀಡಿದ್ದು,  ಎಪಿಎಂಸಿ ಕಾಯ್ದೆ 2020 ಅನ್ನು ರದ್ದುಗೊಳಿಸಿ ಬಲಪಡಿಸುವ ಪ್ರಸ್ತಾಪ, ಸಹಕಾರ ಸಂಘಗಳ ಮೂಲಕ ಬೆಳೆ ಸಾಲ ವಿತರಣೆಯ ಗುರಿ, ಸಹಕಾರ ಸಂಘಗಳ ಗೋದಾಮು ನಿರ್ಮಾಣಕ್ಕೆ ಬಡ್ಡಿ ಸಹಾಯಧನ ,ಕಬ್ಬು ತೂಕದಲ್ಲಿ ಮೋಸ ತಡೆಗಟ್ಟಲು ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿ ವೇಬ್ರಿಡ್ಜ್ ಸ್ಥಾಪನೆ, ಏತ ನೀರಾವರಿ ಯೋಜನೆಗಳ ಮೂಲಕ ನೀರಾವರಿ ಅಚ್ಚುಕಟ್ಟು ವಿಸ್ತರಣೆ, ಅಡಿಕೆ ರೋಗ ನಿರ್ವಹಣೆಗೆ ಕ್ರಮ ,ದೇವದಾಸಿ ಮಹಿಳೆಯರು ಸೇರಿದಂತೆ ದಮನಿತ ವಿಭಾಗಗಳ ಕಲ್ಯಾಣಕ್ಕೆ ನೆರವು ಹೆಚ್ಚಳ ಮುಂತಾದವುಗಳ ಪ್ರಸ್ತಾಪಗಳು ಸ್ವಾಗತಾರ್ಹವಾಗಿದ್ದರೂ, ರಾಜ್ಯದ ಕೃಷಿ ಬಿಕ್ಕಟ್ಟಿನ ಹಾದಿ ಬದಲಿಸುವಂತಹ ನಿರ್ಣಾಯಕ ಕ್ರಮಗಳಾದ ಮಾರುಕಟ್ಟೆ ಮಧ್ಯಪ್ರವೇಶಕ್ಕಾಗಿ ಅವರ್ತ ನಿಧಿ ಸ್ಥಾಪನೆ, ಕೃಷಿ ಉತ್ಪಾದಕತೆಯನ್ನು ತೀವ್ರವಾಗಿ ಹೆಚ್ಚಿಸುವ ಕ್ರಮಗಳು, ಸಾರ್ವಜನಿಕ ಪಡಿತರ ವ್ಯವಸ್ಥೆ ಯ ಬಲವರ್ಧನೆ, ನರೇಗಾ ಕೂಲಿಯನ್ನು ಶಾಸನಬದ್ದ ಕನಿಷ್ಟ ಕೂಲಿದರಕ್ಕೆ ಹೆಚ್ಚಳ ,ಕೃಷಿ ಕೂಲಿಕಾರರಿಗೆ ಕಲ್ಯಾಣ ಮಂಡಳಿ ರಚನೆ ಮುಂತಾದ ಪ್ರಸ್ತಾಪಗಳನ್ನು ಒಳಗೊಂಡಿಲ್ಲದಿರುವುದು ಹಾಗೂ ಸಾರ್ವಜನಿಕ ಆಸ್ತಿಗಳ ನಗದೀಕರಣ , ಸಾರ್ವಜನಿಕ ಸೇವೆಗಳಲ್ಲಿ ಖಾಸಗಿ ಸಹಭಾಗಿತ್ವದ ಉದಾರೀಕರಣದ ಪ್ರಸ್ತಾಪಗಳು ಈ ಬಜೆಟ್ ನ ಗಂಭೀರ ಲೋಪವಾಗಿದೆ ಎಂದಿದ್ದಾರೆ.

ಉದ್ದೇಶ ಮತ್ತು ಸ್ವರೂಪದ ಪ್ರಸ್ತಾಪ ಇಲ್ಲದೇ ಕೃಷಿ ಅಭಿವೃದ್ಧಿ ಪ್ರಾಧೀಕರದ ಘೋಷಣೆ ಅರ್ಥ ಹೀನ. ಕೃಷಿಕರ ಆದಾಯ ಮತ್ತು ಜೀವನ ಭದ್ರತೆ ಹಾಗೂ ಕೃಷಿ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬಗರ್ ಹುಕಂ ,ಅರಣ್ಯ ಸಾಗುವಳಿ ,ಗೇಣಿ ರೈತರ ಕಲ್ಯಾಣದ ಉದ್ದೇಶ ಇಲ್ಲದೇ ಇದ್ದರೆ ಇದು ಕೇವಲ ಘೋಷಣೆ ಯಾಗಿ ಉಳಿಯಲಿದೆ. ರಾಜ್ಯದ ಬಂಜರು ಭೂಮಿಯನ್ನು ಭೂ ಹೀನ ರೈತ ಕುಟುಂಬಗಳಿಗೆ ಹಂಚಬೇಕು ಹಾಗೂ ಎಲ್ಲಾ ಬಗರ್ ಹುಕಂ ,ಅರಣ್ಯ ಸಾಗುವಳಿದಾರರಿಗೆ ಭೂಮಿ ಹಕ್ಕು ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.

ಇದನ್ನೂ ಓದಿ : ಹಳೆಯ ಹಳಸಲು ಹಾದಿಯನ್ನು ಬದಲಾಯಿಸದ ಬಜೆಟ್ – ಸಿಪಿಐಎಂ

ಬಲವಂತದ ಭೂ ಸ್ವಾಧೀನದ ವಿರುದ್ಧ ರಕ್ಷಣೆ, ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಪ್ರೀಪೇಡ್ ಮೀಟರ್ ಅಳವಡಿಸುವ ಕೇಂದ್ರದ ವಿದ್ಯುತ್ ಖಾಸಗೀಕರಣ ನೀತಿಗೆ ನಿರಾಕರಣೆ, ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಘೋಷಿಸಿ, ಇಂಟಿಗ್ರೇಷನ್ ಕಂಪನಿಗಳನ್ನು ನಿಯಂತ್ರಿಸುವ ಕರ್ನಾಟಕ ಕುಕ್ಕುಟ ಅಭಿವೃದ್ಧಿ ನಿಯಂತ್ರಣ ಮಸೂದೆ-2022, ಸಾಲಭಾಧೆಯಿಂದ ಆತ್ಮಹತ್ಯೆಗೆ ತುತ್ತಾಗದಂತೆ ಕಾಪಾಡುವ ಕೇರಳ ಮಾದರಿಯ ಋಣಮುಕ್ತ ಕಾಯ್ದೆ, ಮೈಕ್ರೋ ಪೈನಾನ್ಸ್ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸುವ ಕಾನೂನು ಅನ್ನು ರಚಿಸಬೇಕು ಎಂಬ ಹಕ್ಕೊತ್ತಾಯಗಳನ್ನು ಮುಖ್ಯಮಂತ್ರಿಗಳ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಒತ್ತಾಯಿಸಿದ್ದರೂ ಕೈ ಬಿಟ್ಟಿರುವುದು ಸರಿಯಲ್ಲ. ರಾಜ್ಯ ಸರ್ಕಾರದ ಮೇಲೆ ದೊಡ್ಡ ಹಣಕಾಸು ಹೊರೆ ಇಲ್ಲದ ಆದರೆ ರೈತರಿಗೆ ಬಹಳವಾಗಿ ನೆರವಾಗುವ ಇಂತಹ ಹಕ್ಕೊತ್ತಾಯಗಳನ್ನು ಈ ಕೂಡಲೇ ಈ ಬಜೆಟ್ ನಲ್ಲಿ ಒಳಗೊಳ್ಳಬೇಕು ಎಂದು ಆಗ್ರಹಿಸಿದೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಆಗಿರುವ ನ್ಯಾಯಬದ್ಧ, ಶಾಸನಬದ್ಧ ತೆರಿಗೆ ಪಾಲಿನಲ್ಲಿ ವಂಚನೆ, ಅಭಿವೃದ್ಧಿ ಅನುದಾನದಲ್ಲಿ ತಾರತಮ್ಯ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸದೇ ರಾಜ್ಯ ಸರ್ಕಾರಗಳ ಕತ್ತು ಹಿಸುಕುವ ಗಂಭೀರ ಸಮಸ್ಯೆ-ಸವಾಲುಗಳ ಕುರಿತು ಚರ್ಚೆಗೆ ಸಿದ್ದವಿಲ್ಲದೇ ಬಜೆಟ್ ಭಾಷಣವನ್ನು ಬಹಿಷ್ಕರಿಸಿ ಪಲಾಯನ ಮಾಡಿರುವುದು ಬಿಜೆಪಿ ಪಕ್ಷದ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ .ಸದನದಲ್ಲಿ ರಾಜ್ಯದ ಜನರ ಹಿತ ಕಾಪಾಡುವ ಅರ್ಥ ಪೂರ್ಣ ಚರ್ಚೆಯಲ್ಲಿ ತೊಡಗದೇ ಮತೀಯ ಧ್ವೇಷ ಹೆಚ್ಚಿಸುವ ಸುಳ್ಳುಗಳನ್ನು ಬಜೆಟ್ ವಿಷಯದಲ್ಲೂ ಹರಡುತ್ತಿದೆ. ಇಂತಹ ಮತೀಯ ಧ್ವೇಷಕ್ಕೆ ಬಲಿಯಾಗದಂತೆ ಎಚ್ವರವಹಿಸಲು ರಾಜ್ಯದ ಜನರಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮನವಿ ಮಾಡಿದೆ.

 

ವಿಡಿಯೋ ನೋಡಿಬಜೆಟ್‌ ಮಾತುಕತೆ ʻಬಜೆಟ್‌ʼ ದಾರಿ – ಗುರಿ

 

Donate Janashakthi Media

Leave a Reply

Your email address will not be published. Required fields are marked *