ಕೋಝಿಕ್ಕೋಡ್: ಅಚ್ಚರಿಯ ಘಟನೆಯೊಂದು ಕೇರಳದಲ್ಲಿ ನಡೆದಿದ್ದು, ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿಯ ಕಾರ್ಯಕರ್ತರು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ ಬೆಂಬಲ ವ್ಯಕ್ತಪಡಿಸಿದ ಅಧ್ಯಾಪಕನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಅಧ್ಯಾಪಕ ಶೈಜಾ ಅಂಡವನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಅವರು ಸೋಮವಾರ ಪ್ರತಿಭಟನೆ ನಡೆಸಿ ಗೋಡ್ಸೆಯ ಭಾವಚಿತ್ರವನ್ನು ಸುಟ್ಟುಹಾಕಿದ್ದಾರೆ.
ಎಬಿವಿಪಿ ಕೋಝಿಕ್ಕೋಡ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಯದು ಕೃಷ್ಣನ್, “ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಹಲವು ತಪ್ಪು ತಿಳುವಳಿಕೆಗಳಿವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕ್ಕೂ ಗಾಂಧಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ” ಎಂದು ಪ್ರತಿಪಾದಿಸಿದ್ದಾರೆ. ಪ್ರಧ್ಯಾಪಕರ ವಿರುದ್ಧ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ದೂರು ಸಲ್ಲಿಸುವುದಾಗಿ ಯದು ಕೃಷ್ಣನ್ ತಿಳಿಸಿದ್ದಾರೆ.
ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ : ‘ಪ್ರಜಾಪ್ರಭುತ್ವದ ಕಗ್ಗೊಲೆಗೆ ಅವಕಾಶ ನೀಡುವುದಿಲ್ಲ’ ಸುಪ್ರೀಂ ಕೋರ್ಟ್ ಆಕ್ರೋಶ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಕ್ಯಾಲಿಕಟ್ ಪ್ರೊಫೆಸರ್ ಶೈಜಾ ಆಂಡವಾಲ್ ಅವರು ಫೇಸ್ಬುಕ್ನಲ್ಲಿ ಗೋಡ್ಸೆಯನ್ನು ಶ್ಲಾಘಿಸಿ ಕಾಮೆಂಟ್ ಮಾಡಿದ್ದರು. ಇದರ ವಿರುದ್ಧ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐ, ಕಾಂಗ್ರೆಸ್ನ ಕೇರಳ ಸ್ಟೂಡೆಂಟ್ ಯೂನಿಯನ್ (ಕೆಎಸ್ಯು), ಮುಸ್ಲಿಂ ಸ್ಟೂಡೆಂಟ್ಸ್ ಫೆಡರೇಶನ್ (ಎಂಎಸ್ಎಫ್) ಕೂಡಾ ಅಧ್ಯಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ದಾಖಲಿಸಿದ್ದಾರೆ.
1948ರ ಜನವರಿ 30 ರಂದು ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ಗೋಡ್ಸೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಗೆ ಸಂಯೋಜಿತವಾಗಿರುವ ಹಿಂದೂ ಮಹಾಸಭಾದ ಸದಸ್ಯರಾಗಿದ್ದನು. ಮಹಾತ್ಮ ಗಾಂಧಿಯವರ ಮರಣದ ನಂತರ, ಭಾರತ ಸರ್ಕಾರ ಆರೆಸ್ಸೆಸ್ ಅನ್ನು ಅಲ್ಪಾವಧಿಗೆ ನಿಷೇಧಿಸಲಾಗಿತ್ತು.
ಎಸ್ಎಫ್ಐ ಏರಿಯಾ ಕಾರ್ಯದರ್ಶಿ ವಿಶಾಕ್ ಮತ್ತು ಎಂಎಸ್ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಹಿಬ್ ಮುಹಮ್ಮದ್ ಕುನ್ನಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಎಸ್ಯು ಜಿಲ್ಲಾಧ್ಯಕ್ಷ ಸೂರಜ್ ನಡಕ್ಕಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಲ್ಲದೆ, ಕೋಝಿಕ್ಕೋಡ್ನ ಕಾಂಗ್ರೆಸ್ ಸಂಸದ ಎಂಕೆ ರಾಘವನ್ ಅವರು ಶೈಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯವನ್ನು ಒತ್ತಾಯಿಸಿದ್ದಾರೆ. ಕುನ್ನಮಂಗಲಂ ಪೊಲೀಸರು ಶೈಜಾ ವಿರುದ್ಧ ಐಪಿಸಿ ಸೆಕ್ಷನ್ 153 ರ ಅಡಿಯಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಚುನಾವಣಾಧಿಕಾರಿ ಆತ್ಮಹತ್ಯೆಗೆ ಕುಮ್ಮಕ್ಕು : ಶಿರಸ್ತೇದಾರ್ ಬಂಧನ
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಶೈಜಾ ಅವರು ಗಾಂಧಿ ಹತ್ಯೆಯ ದಿನವಾದ ಜನವರಿ 30 ರಂದು ಫೇಸ್ಬುಕ್ನಲ್ಲಿ ಕಾಮೆಂಟ್ ಮಾಡಿದ್ದರು. ನಿರಂತರವಾಗಿ ಹಿಂದುತ್ವ ಪರ ಬರೆಯುವ ಕೃಷ್ಣ ರಾಜ್ ಎಂಬ ವಕೀಲರು ಹಾಕಿದ ಪೋಸ್ಟ್ನ ಅಡಿಯಲ್ಲಿ ಪ್ರಾಧ್ಯಾಪಕ ‘ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆಯ ಬಗ್ಗೆ ಹೆಮ್ಮೆಯಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಅದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಅವರು ಕಾಮೆಂಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶೈಜಾ ಅವರು, “ನಾನು ಮೊದಲು ಕಾಮೆಂಟ್ ಮಾಡಿದಾಗ ನಾನು ಅದರ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ‘ವೈ ಐ ಕಿಲ್ಡ್ ಗಾಂಧಿ’ ಪುಸ್ತಕವನ್ನು ಓದಿ ಅದರಲ್ಲಿ ಹೇಳಿರುವ ಕೆಲವು ಅಂಶಗಳು ನಿಜವೆನ್ನಿಸಿತ್ತು. ಹಾಗಾಗಿ ಕಾಮೆಂಟ್ ಮಾಡಿದ್ದೆ. ಆದರೆ ಈಗ, ನಾನು ಅದನ್ನು ಮಾಡಬಾರದಿತ್ತು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾನು ಕಾಮೆಂಟ್ ಅನ್ನು ಅಳಿಸಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: 1000 ಕೋಟಿ ರೂ, ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ದಾಖಲೆ ಬಿಡುಗಡೆ ಮಾಡಿದ ಎಎಪಿ!
ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ಕೂಡ ಪ್ರಾಧ್ಯಾಪಕರ ಹೇಳಿಕೆಯನ್ನು ಖಂಡಿಸಿದ್ದು, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ಹೊಗಳುವುದು ಕೃತಜ್ಞತೆಯಿಲ್ಲದವರ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸರಿಯಾದ ದೇಶಭಕ್ತಿ ಮತ್ತು ಇತಿಹಾಸದ ಪ್ರಜ್ಞೆಯನ್ನು ಬೆಳೆಸಬೇಕು ಎಂದು ಅವರು ಹೇಳಿದ್ದು, ಪ್ರಾಧ್ಯಾಪಕರ ಹೇಳಿಕೆಯು ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಈ ಮಧ್ಯೆ, ಫೇಸ್ಬುಕ್ನಲ್ಲಿ ಮಾಡಿದ ‘ಗೋಡ್ಸೆ ಪರ’ ಕಾಮೆಂಟ್ಗೆ ಸಂಬಂಧಿಸಿದಂತೆ ಪ್ರೊಫೆಸರ್ ಶೈಜಾ ಅಂಡವನ್ ಅವರಿಂದ ವಿವರಣೆಯನ್ನು ಕೇಳಲು ರಿಜಿಸ್ಟ್ರಾರ್ಗೆ ಸೂಚಿಸಲಾಗಿದೆ ಎಂದು ಎನ್ಐಟಿ ನಿರ್ದೇಶಕರು ಪ್ರಕಟಿಸಿದ್ದಾರೆ. ರಾಮ ಮಂದಿರ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ನಡೆದ ಸಂಘರ್ಷ ಕಾರಣಕ್ಕಾಗಿ ಕೋಝಿಕ್ಕೋಡ್ ಎನ್ಐಟಿ ಕ್ಯಾಂಪಸ್ ಅನ್ನು ಮುಚ್ಚಲಾಗಿತ್ತು. ಕೆಲವು ದಿನಗಳ ನಂತರ ಸೋಮವಾರ ಪುನರಾರಂಭವಾಗಿತ್ತು.
ವಿಡಿಯೊ ನೋಡಿ: ದಲಿತರು ನೆಮ್ಮದಿಯಿಂದ ಬದುಕಬೇಕಾದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು – ಕೆ.ರಾಧಾಕೃಷ್ಣ