ಗಾಯ ಕಥಾ ಸರಣಿ | ಸಂಚಿಕೆ – 18 | ಕೇರಿ ಮಕ್ಕಳ ಅಕ್ಷರ ಕಲಿಕೆಗೆ ಅಡ್ಡಿಪಡಿಸಿದ ಧಣಿ

ಗುರುರಾಜ ದೇಸಾಯಿ
(ಇಲ್ಲಿಯವರೆಗೆ…..  ಮಾದರ ನಾಗ್ಯಾನ ಹೆಗಲ ಮ್ಯಾಲೆ ಶ್ರೀಧರ್‌ ಕೈಹಾಕಿಕೊಂಡು ಶಾಲೆಗೆ ಹೋಗುತ್ತಾನೆ. ನಾಗ್ಯಾ ಎಷ್ಟೆ ನಿರಾಕರಿಸಿದರೂ ಶ್ರೀಧರು ಪಟ್ಟು ಹಿಡಿದು ಅವನ ಹೆಗಲ ಮೇಲೆ ಹಾಕಿದ್ದ ಕೈ ಇಳಿಸುವುದೆ ಇಲ್ಲ, ಶಾಲೆಯಲ್ಲಿ ಇದನ್ನು ಕಂಡು ಊರಿನ ಮಕ್ಕಳು, ಸಂಗಪ್ಪ ಮಾಸ್ತರ್‌ ಹೌಹಾರುತ್ತಾರೆ, ನಮಗೇನು ಕಾದಿದೆಯೋ ಎಂದು ಸಂಗಪ್‌ ಮಾಸ್ತರ್‌ ದಿಕ್ಕು ಕಾಣದೆ ತಿರುಗುತ್ತಾ ನಿಂತಿರುವಾಗ…..  ಧಣಿ ಅಲ್ಲಿ ಪ್ರತ್ಯಕ್ಷನಾಗುತ್ತಾನೆ … ಮುಂದೆ ಓದಿ) ಗಾಯ

ಶ್ರೀಧರನ ನೋಟ ಧಣಿಯನ್ನು ಇನ್ನಷ್ಟು ಕೆಣಕುತ್ತಲೇ… ಇತ್ತು. ಕಣ್ಣಲ್ಲಿ ಕಣ್ಣಿಟ್ಟು ಧೈರ್ಯವಾಗಿ ನೋಡುತ್ತಿದ್ದ ಶ್ರೀಧರನ ಕಣ್ಣುಗಳು ಧಣಿಯನ್ನು ಹೆದರಿಸುವಂತೆ ಕಾಣುತ್ತಿದ್ದವು. ಪಿತ್ತ ನೆತ್ತಿಗೇರಿದ್ದ ಧಣಿ ಪಟಾರ್!!! ಎಂದು ಶ್ರೀಧರನ ಕಪಾಳಕ್ಕೆ ಬಾರಿಸಿದ.

ಯಾಕ ಹೊಡೀತಿ ಕಾಕಾ!!!???  ಕಪಾಳಕ್ಕೆ ಬಾರಿಸಿದ ಕೈ ಹಿಡಿದುಕೊಂಡು ಶ್ರೀಧರ ಪ್ರಶ್ನಿಸಿದ.

ಮಗನೇ!!! “ಯಾಕ ಹೊಡೀತಿ… ಅಂತ ಬ್ಯಾರೆ ಕೇಳ್ತಿ??? ಆ ಮಾದಿಗನ ಹೆಗಲ ಮ್ಯಾಲೆ ಕೈ ಹಾಕೊಂಡು… ಊರೆಲ್ಲ ಸುತ್ತಾಡ್ತಿ???  ನಾಚಿಕೆ ಆಗಗಿಂಗಿಲ್ಲ ನಿನಗ” ಎಂದು ಧಣಿ ಶ್ರೀಧರನನ್ನು ದಬಾಯಿಸಿದ…

ಕಾಕಾ…, ನಾ ಯಾಕ ಅವನ ಹೆಗಲ ಮ್ಯಾಲೆ ಕೈ ಹಾಕಬಾರ್ದು? ಅವನು… ನಾನು… ದಿನ ಸಾಲ್ಯಾಗ ಒಂದೇ… ಕಡೆ ಕುತ್ಕೋತಿವಿ… ಪಾಠ ಕೇಳ್ತಿವಿ… ಆಡ್ತೀವಿ…  ಇನ್ಮುಂದೇನೂ… ಹಿಂಗ… ಇರ್ತೀವಿ… ಎಂದು ಶ್ರೀಧರ ಧಣಿಯ ಪ್ರಶ್ನೆಗೆ ಮಾರುತ್ತರ ನೀಡಿದ.

ಶ್ರೀಧರನ ಖಡಕ್ ಉತ್ತರಕ್ಕೆ ಧಣಿಯ ಕೋಪ ಮತ್ತಷ್ಟು ಹೆಚ್ಚಾಯಿತು. ಇನ್ನೊಂದು ಬಾರಿ ಹೊಡೆಯಲು ಕೈ ಮೇಲೆತ್ತಿದ.

ಧಣಿ!!! ಸಮಾಧಾನ… ಸಮಾಧಾನ… ಶ್ರೀಧರ… ನಿಮ್ಮ ಅಣ್ಣನ ಮಗ. ಹಿಂಗೆ ಹೊಡೆಯೋದು ಸರಿ ಕಾಣೋದಿಲ್ಲ. ತಿಳುವಳಿಕೆ ಕೊಡ್ರಿ, ಹೆದರಿಸ ಬ್ಯಾಡ್ರಿ… ಎಂದರು ಸಂಗಪ್ಪ ಮಾಸ್ತರು.

“ಸುಮ್ನೆ ಹೇಳಿದ್ರ ಕೇಳ್ತಾನೇನ್ರಿ ಇವನು? ಚೋಟುದ್ದ ಇಲ್ಲ, ನನಗ ಎದರುತ್ತರ ಕೊಡ್ತಾನ”. ಲೇ!!! ಶ್ರೀಯಾ… ಎದಿ ಸೀಳಿದ್ರ ಎರಡಕ್ಷರ ಇಲ್ಲ, ಎಷ್ಟೆಲ್ಲ ಹಾರಾಡ್ತಿ? ಅಣ್ಣನ ಮುಂದ ಹೇಳ್ತೀನಿ… ಇರು ಮಗನ ಎಂದ ಧಣಿ.

ಕಾಕಾ… ಎಲ್ಲಿ ಅಪ್ಪನ ಹತ್ತಿರ ಇಲ್ಲದ್ದನ್ನು ಹೇಳುತ್ತಾನೋ… ಎಂಬ ಅಳುಕಿನಿಂದಲೇ… ಹೇಳಿ ಏನ್ ಮಾಡ್ತೀ? ಕಾಕಾ… ನಾ ಯಾಕ ಅವನ ಹೆಗಲ ಮ್ಯಾಲೆ ಕೈಹಾಕಬಾರ್ದು? ಕೇಳಿದಕ್ಕ ನೀ ಇನ್ನೂ ಉತ್ತರ ಕೊಟ್ಟಿಲ್ಲ ನಂಗ… ಎಂದ ಶ್ರೀಧರ.

ಲೇ!!! ಶ್ರೀಯಾ… ಆ ನಾಗ್ಯಾ ಮಾದರವ ಅದನ… ಮೇಲಾಗಿ ಅವರ ಜಾತಿ ಮಂದಿನ… ಊರ ಮಂದಿ ಬಹಿಷ್ಕಾರ ಹಾಕ್ಯಾರ. ಊರ ಪಂಚಾಯತಿ ತೀರ್ಮಾನ ಆಗಿದ್ನ ತಳವಾರ ನಾಗ ಡಂಗೂರ ಸಾರಿ ಹೇಳಿದ್ನ… ಕೇಳಿಯೋ… ಇಲ್ಲೋ… ಎಂದ ಧಣಿ. ಗಾಯ

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ – 16 | “ಧಣಿ”ಯ ಮತ್ತೊಂದು ಮಸಲತ್ತು

ಶ್ರೀಧರ ಉತ್ತರಿಸದೆ ಧಣಿಯನ್ನೇ… ನೋಡುತ್ತಾ ನಿಂತ.

ನಿನ್ನೇ… ಕೇಳ್ತಿರೋದು, ಬಾಯಾಗೇನು ಉಂಡಿ ಇಟ್ಕೊಂಡಿಯೇನು??? ಮಾತಾಡು ಈಗ…

ಅದೆಲ್ಲ ಗೊತ್ತಿಲ್ಲ… ಕಾಕಾ… ನಂಗ… ನಾನು ನಾಗ್ಯಾನ ದೋಸ್ತಿ ಬಿಡಂಗಿಲ್ಲ. ಅದು ಅಪ್ಪಗೂ ಗೊತ್ತು, ಅಮ್ಮಾಗೂ ಗೊತ್ತು ಎಂದು ಶಾಲೆಯ ಕೊಠಡಿಯ ಕಡೆ ಹೊರಟ.

ಧಣಿ, ಶ್ರೀಧರ ಹೋಗುವುದನ್ನೇ…  ದುರುಗುಟ್ಟಿಕೊಂಡು ನೋಡುತ್ತಾ… ನಿಂತ. ಶಾನುಭೋಗ ಧಣಿಯ ಹೆಗಲುಮುಟ್ಟಿ ಸಮಾಧಾನ ಮಾಡಿದ.

ಮೇಸ್ಟ್ರೇ… ಎಂದು ಧಣಿ ಸಂಗಪ್ಪ ಮಾಸ್ತರರ ಕಡೆ ನೋಡುತ್ತಾ ಶ್ರೀಧರನ ಕಡೆ ಕೈ ತೋರಿಸಿದ…

ಹೇ… ಹೇ… ಹೇಳ್ರಿ ಧಣಿ. ನಿಮ್ಮ ಮಗ ನಿಮ್ಮ ಮಾತ ಕೇಳವಲ್ಲ ಅಂದ್ರ ನಾ ಏನ್ ಮಾಡಕ ಆಗ್ತದ ಹೇಳ್ರಿ? ಎಂದು ತಲೆಕೆರದು ಕೊಳ್ಳುತ್ತಾ ಸಂಗಪ್ಪ ಮಾಸ್ತರರು ಉತ್ತರ ನೀಡಿದರು.

ಏನಾದ್ರೂ ಮಾಡಬೇಕ್ರಿ ಮೇಸ್ಟ್ರೇ…   ನೋಡಿದ್ರಲ್ಲ!!! ನಿಮ್ಮ ಮುಂದೇನ, ನನಗ… ಹ್ಯಾಂಗ… ಉತ್ತರ ಕೊಟ್ಟ ಅಂತ. ಇಷ್ಟು ಸಣ್ಣ ವಯಸ್ಸಿಗೆ ಕಡ್ಡಿ ಮುರಿದಂಗ ಉತ್ತರ ಕೊಡ್ತಾನಂದ್ರ, ಮುಂದ ಹೆಂಗ್ರೀ!!!.

ಅಣ್ಣನ ಮಗ ಅಂತ ಸುಮ್ನೆ ಇದ್ರ… ನಾಳೆ ನನಗಾ… ಸಮಸ್ಯೆ ಅಕ್ಕೈತಿ. ನಮ್ಮ ಅಣ್ಣನ ಹತ್ರ ಜಗಳ ಮಾಡಿಯಾದ್ರೂ ಇದಕ್ಕೊಂದು ಗತಿ ಕಾಣಿಸ್ತೀನಿ ಎಂದ ಧಣಿ.

ಅದು ನಿಮ್ಮ ಮನಿ ಗುಟ್ಟು ಧಣಿ. ಅದನ್ನ ತೊಗೊಂಡು ನಾವೇನ್ ಮಾಡಣ ಹೇಳ್ರಿ??? ಮಕ್ಕಳಿಗೆ ಅಕ್ಷರ ಕಲಸದ ಅಷ್ಟ ನಂಗ ಗೊತ್ತಿರೋದ ನೋಡ್ರಿ… ಎಂದರು ಸಂಗಪ್ಪ ಮಾಸ್ತರು.

ಆತ.. ಆತು… ಮೇಸ್ಟ್ರೇ… ಅಕ್ಷರ ಕಲಸದಷ್ಟ… ನಿಮ್ಮ ಕೆಲಸ ತಾನೇ… ಇವತ್ತಿಂದ ಇನ್ನೊಂದು ಕೆಲಸ ಶುರು ಮಾಡ್ರಿ, “ಕೇರಿ ಹುಡುಗರು ಸಾಲಿಗೆ ಬರದಂಗ ನೋಡ್ಕೋರಿ” ಎಂದ ಧಣಿ. ಗಾಯ

ನಾನಾ!!! ಮಾಸ್ತರರು ತಬ್ಬಿಬಾದರು!!! ನಾನೆಂಗ ಸಾಲಿಗೆ ಬರಬಾರ್ದು ಅಂತ ಹೇಳಕ ಅಕ್ಕೈತ್ರಿ??? ನೀವು ಸರ್ಕಾರಿ ನೌಕರದಾರರು, ನಾನು ಸರ್ಕಾರಿ ನೌಕರದಾರ ಹೆಂಗ ಸಾಧ್ಯ ಹೇಳ್ರಿ ಧಣಿ??? ಎಂದು ಮಾಸ್ತರರು ಅರಳು ಹುರಿದಂಗೆ ಧಣಿ ಹೇಳಿದ್ದನ್ನ ನಿರಾಕರಿಸಿಬಿಟ್ಟರು.

ಹೌದು ಧಣಿ, ಸಾಲಿಗೆ ಬರ್ಬಾರ್ದು ಅಂತ ಹೇಳೋದು ಸರಿ ಅಲ್ಲ ಎಂದ ದಳಪತಿ.

ನಂಗೂ ಗೊತ್ತೈತಿ… ಅದು ತಪ್ಪು ಅಂತ… ಆ ಕೇರಿ ಹುಡುಗರ ತಲಿಗೆ ಅಕ್ಷರ ಹೋಗಬಾರ್ದು ಹಂಗ ಏನಾದ್ರು ಉಪಾಯ ಮಾಡ್ರಿ ಮೆಸ್ಟ್ರೇ… ನಿಮಗ ಏನೂ ತೊಂದರೆ ಆಗದಂಗ ನೋಡ್ಕೊಳ್ಳೊ ಜವಾಬ್ದಾರಿ ನಂದು ಎಂದು ಧಣಿ ಭರವಸೆ ನೀಡಿದ.

ಆತರಿ… ಧಣಿ ಹಂಗ ಏನಾದ್ರೂ… ಉಪಾಯ ಮಾಡ್ತೀನಿ ಎಂದು ಮಾಸ್ತರರು ಕೊಠಡಿಯ ಕಡೆ ಹೆಜ್ಜೆ ಹಾಕಿದರು.

ಇದನ್ನೂ ಓದಿಗಾಯ ಕಥಾ ಸರಣಿ | ಸಂಚಿಕೆ – 17 | ಜಾತಿ ಮೀರಿದ ಗೆಳೆತನ : ಉಲ್ಬಣಗೊಂಡ ಧಣಿಯ ಕೋಪ

ಸ್ವಲ್ಪ ದಿನಗಳು ಕಳೆದ ನಂತರ……..

ಶಾಲೆಯ ಚಿತ್ರಣ…. ಊರಿನ ಚಿತ್ರಣ…. ಸಂಪೂರ್ಣವಾಗಿ ಬದಲಾಗಿತ್ತು. ಶಾಲೆಯಲ್ಲಿ ಕೇರಿಯ ಮಕ್ಕಳು ಕೊಠಡಿಯಲ್ಲಿ ಕುಳಿತುಕೊಳ್ಳದೆ ಆವರಣದಲ್ಲಿ ಕುಳಿತು ಪಾಠ ಕಲಿಯುತ್ತಿದ್ದರು. ಸಂಗಪ್ಪ ಮಾಸ್ತರರು ಈ ಮಕ್ಕಳಿಗೆ ಅಕ್ಷರ ಕಲಿಸುವುದು, ಆಡಿಸುವುದು, ಗಮನಿಸುವುದು ಕ್ರಮೇಣ ಕಡಿಮೆ ಮಾಡುತ್ತಾ ಹೋದರು. ಆ ಮಕ್ಕಳು ಕೊಠಡಿಯ ಕಿಡಕಿಯಲ್ಲಿ ಇಣಕಿ ಅಕ್ಷರ ಅಭ್ಯಾಸ ಮಾಡುತ್ತಿದ್ದರು. ಕೇಳಿಸಿಕೊಂಡಿದ್ದನ್ನು ಬರೆದು ಮಾಸ್ತರ್ಗೆ ತೋರಿಸಲು ಹೋದಾಗ, ಮಾಸ್ತರ್ ಕಡೆಯಿಂದ ಬೆತ್ತದ ಏಟು ತಿನ್ನುತ್ತಿದ್ದರು.  ಧಣಿಯ ಬಾಲೋಂಗೋಚಿಗಳು ನಿತ್ಯ ಶಾಲೆಗೆ ಬಂದು “ ಕೇರಿಯ ಮಕ್ಕಳು ಎಲ್ಲಿದ್ದಾರೆ” ಎಂದು ತಿಳಿಯುವುದಕ್ಕಾಗಿ ದಿನವಹಿ ಕೆಲಸ ವಹಿಸಿಕೊಂಡು ಧಣಿಗೆ ವರದಿ ಒಪ್ಪಿಸುತ್ತಿದ್ದರು.

ಇಷ್ಟೆಲ್ಲ ನಡೆಯುತ್ತಿದ್ದರೂ ಶ್ರೀಧರ ಮತ್ತು ನಾಗ್ಯಾನ ಗೆಳತನಕ್ಕೆ ಯಾವುದೇ ಅಡ್ಡಿ ಬಂದಿರಲಿಲ್ಲ. ನಿತ್ಯ ಶಾಲೆಯಲ್ಲಿ ಅವರಿಬ್ಬರೂ ಆಡುತ್ತಾ… ಇದ್ದರು. ಹೀಗಿರುವಾಗ ಒಂದು ದಿನ ಶಾಲೆಯಲ್ಲಿ ಪ್ರೆಯರ್ ಮುಗಿದು ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಹೋಗುವ ಸಮಯದಲ್ಲಿ…

ಏ!!! ಶ್ರೀಧರ ಊರಾಗಿನ ಎಲ್ಲಾ ಮಕ್ಳು ತಗರತಿಗೆ ಹೊಂಟಾರ, ನೀ ಯಾಕ ಇಲ್ಲೇ ನಿಂತಿ??? ಸಂಗಪ್ಪ ಮಾಸ್ತರ್ ಪ್ರಶ್ನಿಸಿದ. ಸರ್… ಅದು… ಅದು… ನನ್ನ ಗೆಳೆಯ ನಾಗ್ಯಾನ ಹಾಗೂ ಕೇರಿ ಹುಡ್ಗುರನ್ನ ನಮ್ಮ ಜೊತಿನ ಕುಂದರ್ಸಿ, ಅಲ್ಲಿ ವರೆಗೂ ನಾ ತರಗತಿಗೆ ಹಾಜಾರ್ ಆಗಂಗಿಲ್ಲ ನೋಡ್ರಿ ಎಂದು ಶ್ರೀಧರ್ ಕೆಳಗಡೆ ಕುಳಿತುಕೊಂಡ.

ಏನೋ!!! ಹೀಂಗ ಕುಂತಕೊಂಡು ಪಟ್ಟ ಹಿಡೀತಿ, ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿ, ನಿಮ್ಮ ಕಾಕಾಗ ಗೊತ್ತಾದ್ರ… ಇಬ್ರದ್ದೂ ಚರ್ಮ ಸುಲಿತಾನ ಅಷ್ಟ.

ಶ್ರೀಧರ ಕುಳಿತ ಜಾಗದಿಂದ ಎದ್ದೇಳಲೇ ಇಲ್ಲ. ಕೊನೆಗೆ ಸಂಗಪ್ಪ ಮಾಸ್ತರರು ಉಪಾಯ ಮಾಡಿ, ನಾಳೆ ಕೂಡಸ್ತೀನಿ ಈಗ ಒಳಗ ಹೋಗು ಎಂದು ಶ್ರೀಧರನನ್ನು ಸಮಾಧಾನ ಮಾಡಿ ಕೊಠಡಿಯೊಳಗೆ ಕಳುಹಿಸಿದರು.

ಕೊಠಡಿಯೊಳಗೆ ನಾಗ್ಯಾನನ್ನು ಕೂಡಿಸಿ ಎಂದು ಶ್ರೀಧರ ಸಂಗಪ್ಪ ಮಾಸ್ತರರಿಗೆ ಬೆನ್ನು ಹತ್ತಿದ್ದರಿಂದ ಮಾಸ್ತರಿಗೆ ದಿಕ್ಕು ತೋಚದಂತಾಗಿತ್ತು. ಊರಾಗಿನ ಉಸಾಬರಿ ನನಗ್ಯಾಕ ಅಂತ ಮಾಸ್ತರರು ಧಣಿಗೆ “ ನಿಮ್ಮ ಮಗನ ಕಾಟ ತಡೆಯೋಕೆ ಆಗ್ತಿಲ್ಲ. ನೀವೇ… ಏನಾದ್ರೂ ಮಾಡಿ” ಎಂದು ಹೇಳಿ ತಲೆ ತಲೆ ಚಚ್ಚಿಕೊಂಡಿದ್ದರು.

ಇತ್ತ ಶ್ರೀಧರನ ವಿಚಾರವಾಗಿ ತನ್ನಣ್ಣನ ಜೊತೆ ಧಣಿ ಜಗಳ ಮಾಡಿದ್ದ, ಆ ಜಗಳ ವಿಕೋಪಕ್ಕೆ ಹೋಗಿತ್ತು. “ಅವನು ಹಠವಾದಿ, ಯಾರು ಹೇಳಿದ್ನೂ ಕೇಳಲ್ಲ, ತನಗೆ ಅನ್ಸಿದ್ನಾ… ಅವನು ಮಾಡ್ತಾನೆ. ನಾವು ಅವನನ್ನ ಹಂಗ ಬೆಳೆಸಿದಿವಿ” ಎಂದು  ಧಣಿಗೆ  ಶ್ರೀಧರನ ಮನೆಯವರು ಹೇಳಿದರು.

ಇತ್ತ… ಧಣಿಯ ಅಟ್ಟಹಾಸ ದಿನೇ… ದಿನೇ… ಹೆಚ್ಚಾಗುತ್ತಲೇ…  ಇತ್ತು.  ಏನಾದರೊಂದು ನೆಪ ಹುಡುಕಿ ಕೇರಿಯ ಜನರನ್ನು ಹಿಂಸಿಸುವುದು ಧಣಿಯ ನಿತ್ಯ ಕೆಲಸವಾಗಿ ಬಿಟ್ಟಿತ್ತು. ಧಣಿಯ ದೌರ್ಜನ್ಯಕ್ಕೆ ನಿತ್ಯ ಕಣ್ಣೀರು ಹಾಕುತ್ತಲೇ… ದಿನಗಳನ್ನು ದೂಡುತ್ತಿದ್ದರು. ಕೇರಿಯ ಹಿರಿಯನೊಬ್ಬ ರಾತ್ರೋ ರಾತ್ರಿ  ಕಾಣೆಯಾಗಿದ್ದು ಕೇರಿಯ ಜನರಿಗೆ ಭಯ ಹುಟ್ಟಿಸಿತ್ತು.

ಇಷ್ಟಾದರೂ… ಧಣಿಯ ಆರ್ಭಟ ಮಾತ್ರ ನಿಂತಿರಲಿಲ್ಲ. ಇದರಿಂದ ರೋಸಿಹೋದ ಜನ ಪತ್ರಕರ್ತ ರಾಜಣ್ಣನ ಬರುವಿಕೆಗಾಗಿ ಕಾದು ಕುಳಿತ್ತಿದ್ದರು. ದಿನಗಳು ಉರುಳಿದವು… ರಾಜಣ್ಣನು ಬರುವ ಲಕ್ಷಣಗಳು ಕಾಣಲೇ… ಇಲ್ಲ. ಚೂರಿ ಪರ್ಸ್ಯಾ, ಸೈಕಲ್ ಹತ್ತಿಕೊಂಡು,  ರಾಜಣ್ಣನನ್ನು ಹುಡುಕಿಕೊಂಡು  ಪೇಟೆಯ ಕಡೆ ಹೊರಟ. ಗಾಯ

              (ಮುಂದುವರೆಯುವುದು……..)

 

ಈ ವಿಡಿಯೋ ನೋಡಿದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media ಗಾಯ

 

 

Donate Janashakthi Media

Leave a Reply

Your email address will not be published. Required fields are marked *