ಪಾಟ್ನಾ : ಬಿಹಾರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಕ್ಕಿದ್ದು, ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಬಿಸಿ ಬಿಸಿ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಆರ್ ಜೆಡಿ ಮತ್ತು ಜೆಡಿಯು ನಡುವಿನ ಬಿರುಕು ಹೆಚ್ಚಾಗಿದ್ದು ಲಾಲು ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ಈ ಎಲ್ಲಾ ಬೆಳವಣಿಗೆ ಗಮನಿಸಿದರೆ, ನಿತೀಶ್ ಕುಮಾರ್ ಮತ್ತೆ ಪಕ್ಷಾಂತರ ಮಾಡಬಹುದು. ಅವರು ಕಾಂಗ್ರೆಸ್, ಆರ್ ಜೆಡಿ ಮೈತ್ರಿಯನ್ನು ಮುರಿದು ಮತ್ತೆ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹಗಳಿವೆ.
ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಮತ್ತೆ ಮರಳಲು ಬಿಜೆಪಿ ಹೈಕಮಾಂಡ್ ಅನುಮೋದನೆ ನೀಡಿದೆ. ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬಹುದು ಎಂದು ನಂಬಲಾಗಿದೆ. ಇದರ ನಂತರ, ಬಿಹಾರ ವಿಧಾನಸಭೆಯನ್ನು ವಿಸರ್ಜಿಸಬಹುದು ಎಂದು ಹೇಳಲಾಗುತ್ತಿದೆ.
ಇಂಡಿಯಾ ಕೂಟದ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್ ನಡೆಯ ಬಗ್ಗೆ ನಿತೀಶ್ ಅಸಮಾಧಾನ ಹೊಂದಿದ್ದು, ಇಂಡಿಯಾ ಕೂಟದಿಂದ ಹಾಗೂ ಮಹಾಘಟ್ಬಂಧನ ಮೈತ್ರಿಕೂಟದಿಂದ ಹೊರ ಬರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಒಂದು ವೇಳೆ ಜೆಡಿಯು ಮತ್ತೆ ಬಿಜೆಪಿ ಜೊತೆ ಗೆಳೆತನ ಬೆಳೆಸಿದರೆ ಅದು ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಅನ್ವಯ ಆಗೋದಿಲ್ಲ. ಏಕೆಂದರೆ ಬಿಹಾರದಲ್ಲಿ ಮಹಾ ಘಟಬಂಧನ ಸರ್ಕಾರವಿದೆ. ಜೆಡಿಯುಗೆ ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಬೆಂಬಲ ಇದೆ. ಒಂದು ವೇಳೆ ಇಂಡಿ ಮೈತ್ರಿ ಕೂಟದಿಂದ ಹೊರ ಬರಲು ನಿತೀಶ್ ಕುಮಾರ್ ನಿರ್ಧರಿಸಿದರೆ ಮತ್ತೆ ಬಿಜೆಪಿ ಜೊತೆ ಸೇರಿ ಬಿಹಾರದಲ್ಲಿ ಸರ್ಕಾರ ಪುನರ್ ರಚಿಸಬೇಕಾಗುತ್ತದೆ. ಹಾಗೆ ನೋಡಿದರೆ 2013ರಿಂದಲೂ ನಿತೀಶ್ ಕುಮಾರ್ ಇದೇ ಪ್ರವೃತ್ತಿ ಮುಂದುವರೆಸಿದ್ದಾರೆ. ಎನ್‌ಡಿಎ ಹಾಗೂ ಮಹಾ ಘಟಬಂಧನ್ ನಡುವೆ ನಮ್ಮ ದೋಸ್ತಿಯನ್ನು ಬದಲಾವಣೆ ಮಾಡತ್ತಲೇ ಇದ್ದಾರೆ. ಕಳೆದ ಬಾರಿ 2022ರಲ್ಲಿ ಎನ್‌ಡಿಎ ತೆಕ್ಕೆಯಿಂದ ಮಹಾ ಘಟಬಂಧನ ತೆಕ್ಕೆಗೆ ನಿತೀಶ್ ಕುಮಾರ್ ಜಾರಿದ್ದರು.
ಈ ಎಲ್ಲ ಬೆಳವಣಿಗೆ ಊಹಾಪೋಹವೇ? ಎಂಬ ಬಗ್ಗೆ ನಿತೀಶ್ ಕುಮಾರ್ ಇಲ್ಲಿಯವರೆಗೆ ಯಾವುದನ್ನು ಖಚಿತ ಪಡಿಸಿಲ್ಲ. ನಿತೀಶ್ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.