ಲಖನೌ: ಜನರಿಗೆ ಉದ್ಯೋಗದ ಗ್ಯಾರಂಟಿ ನೀಡುವ ಮೂಲಕ ನಿಜವಾದ ದೇಶಭಕ್ತಿ ಪ್ರದರ್ಶಿಸಿ ಎಂದು ನಿರುದ್ಯೋಗ ಸಮಸ್ಯೆ ಕುರಿತಂತೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಿಎಸ್‌ಪಿ ನಾಯಕಿ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ. ದೇಶಭಕ್ತಿ
ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಹಿಂದಿನ ಕಾಂಗ್ರೆಸ್, ಈಗಿನ ಬಿಜೆಪಿ ನೇತೃತ್ವದ ಜಾತಿವಾದಿ, ದುರಹಂಕಾರಿ, ಎಲ್ಲರನ್ನೂ ಒಳಗೊಳ್ಳದ ಸರ್ಕಾರಗಳಿಂದಾಗಿ ದೇಶದ ಕೋಟಿಗಟ್ಟಲೆ ಬಡವರ ಅಭಿವೃದ್ಧಿಗೆ ಧಕ್ಕೆಯಾಗಿದೆ’ ಎಂದು ಕಿಡಿಕಾರಿದರು.
‘ಹೊಸ ವರ್ಷದ ಈ ಸುದಿನದಲ್ಲಿ ಸರ್ಕಾರವು ದೇಶದ ಜನರಿಗೆ ಉದ್ಯೋಗವನ್ನು ಖಾತ್ರಿಪಡಿಸುವ ಮೂಲಕ ನಿಜವಾದ ದೇಶಭಕ್ತಿ ಮತ್ತು ರಾಜಧರ್ಮವನ್ನು ಪಾಲಿಸಲಿ. ಯಾಕೆಂದರೆ ಸರ್ಕಾರದ ಉದ್ಯೋಗ ಉಳಿದ ಗ್ಯಾರಂಟಿಗಳು ಸಂಕುಚಿತ ರಾಷ್ಟ್ರೀಯತೆಯಿಂದ ಕೂಡಿದ ಮೋಸದ ರಾಜಕಾರಣವೆಂದು ಸಾಬೀತಾಗಿದೆ’ ಎಂದರು.
‘ಖರ್ಚು ಮಾಡಲು ಜನರ ಜೇಬಿನಲ್ಲಿ ಹಣವೇ ಇಲ್ಲದಿದ್ದ ಮೇಲೆ ಅಭಿವೃದ್ಧಿಯ ಕಹಳೆ ಊದಿದರೇನು ಪ್ರಯೋಜನ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದರೆ ಅಭಿವೃದ್ದಿ ಹೊಂದಿದ ದೇಶವಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.