ದಕ್ಷಿಣ ಕನ್ನಡ: ಮುಸ್ಲಿಂ ಮಹಿಳೆಯರ ಕುರಿತು ಅಶ್ಲೀಲ ಪದಗಳನ್ನು ಬಳಸಿ ದ್ವೇಷ ಭಾಷಣ ಮಾಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ವಿರುದ್ಧ ಪ್ರತಿಭಟನೆ ನಡೆಸಿದ ಒಬ್ಬರ ಮಹಿಳೆ ಸೇರಿದಂತೆ 17 ಡಿವೈಎಫ್ಐ ಮುಖಂಡರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸರೊಬ್ಬರು ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ 70 ವರ್ಷದ ರೈತ ಮುಖಂಡ, ಹಿರಿಯ ಹೋರಾಟಗಾರ ಕೃಷ್ಣಪ್ಪ ಸಾಲಿಯಾನ್ ಅವರ ಹೆಸರನ್ನೂ ಪೊಲೀಸರು ಸೇರಿಸಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ನನ್ನು ಬಂಧಿಬೇಕು ಎಂದು ಆಗ್ರಹಿಸಿ ಡಿಸೆಂಬರ್ 29ರ ಶುಕ್ರವಾರದಂದು ಡಿವೈಎಫ್ಐ ಉಳ್ಳಾಲ ತಾಲೂಕು ಉಳ್ಳಾಲದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿತ್ತು. ಈ ವೇಳೆ ಸಂಘಟನೆಯ 15 ರಿಂದ 20 ಕಾರ್ಯಕರ್ತರು ಮಾತ್ರ ಸೇರಿ ಯಾವುದೆ ವಾಹನ ಓಡಾಟಕ್ಕೆ ತೊಂದರೆಯಾಗದಂತೆ, ಧ್ವನಿ ವರ್ಧಕ ಬಳಸದೆ ಬಸ್ಸು ನಿಲ್ದಾಣದ ಅಂಚಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡಿತ್ತು. ಅದಾಗ್ಯೂ ಪೊಲೀಸರು ಒಟ್ಟು 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ತಪ್ಪಿತಸ್ಥ: ಕೋರ್ಟ್ ಆದೇಶ
ಪೊಲೀಸರ ಅನುಮತಿ ಇಲ್ಲದೆ ಕಾನೂನು ಬಾಹಿರ ಸಭೆ ಸೇರಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಡಿವೈಎಫ್ಐನ 17 ಮುಖಂಡರ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 268, 149 ಅಡಿಯಲ್ಲಿ ಸು-ಮೊಟೊ ಪ್ರಕರಣ ದಾಖಲಿಸಿದ್ದಾರೆ. ಕಲ್ಲಡ್ಕ
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬದಲಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಆಡಳಿತ ನಡೆಸುತ್ತಿದೆ. ಜಿಲ್ಲೆಯ ಪೊಲೀಸರ ಕಡಿವಾಣ ಕಲ್ಲಡ್ಕ ಪ್ರಭಾಕರ್ ಕೈಯ್ಯಲ್ಲಿ ಇರುವಂತೆ ತೋರುತ್ತಿದೆ. ಪೊಲೀಸರು ಆರೆಸ್ಸೆಸ್ನ ಅಣತಿಯಂತೆ ನಡೆಯುತ್ತಿದ್ದಾರೆ. ಇಲ್ಲದಿದ್ದರೆ, ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ದೂರು ನೀಡಿದರೂ ಎಫ್ಐಆರ್ ದಾಖಲಿಸಲು ಮೀನಾಮೇಷ ಎಣಿಸುವ ಪೊಲೀಸರು, ಅವರ ವಿರುದ್ಧ ಹೋರಾಟ ಮಾಡಿದ ಡಿವೈಎಫ್ಐ ಕಾರ್ಯಕರ್ತರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಹೇಗೆ ಸಾಧ್ಯ?” ಎಂದು ಹೇಳಿದರು.
ಇದನ್ನೂ ಓದಿ: ಹಳೆಯ ಬಸ್ಗಳನ್ನು ಗುಜರಿಗೆ ಹಾಕಿ – ಕೆಎಸ್ಆರ್ಟಿಸಿಗೆ ಕರ್ನಾಟಕ ಹೈಕೋರ್ಟ್ ಆದೇಶ
ಕೋಮು ಶಕ್ತಿಗಳ ವಿರುದ್ಧ ಪ್ರತಿಭಟನೆ ನಡೆಸಲು ಇಲ್ಲಿ ಯಾರ ಒಪ್ಪಿಗೆ ಬೇಕು? ಪ್ರತಿಭಟನೆ ನಡೆಸುವುದು ನಮ್ಮ ಹಕ್ಕಾಗಿದೆ. ಅದನ್ನು ನಡೆಸಬೇಡಿ ಎನ್ನಲು ಇವರು ಯಾರು ಎಂದು ಪ್ರಶ್ನಿಸಿದ ಇಮ್ತಿಯಾಝ್, “ಜನರ ಪರವಾಗಿ ಹೋರಾಟ ಮಾಡಿದ ಕಾರಣಕ್ಕೆ 2023ರಲ್ಲಿ ಐದು ಪ್ರಕರಣ ಪೊಲೀಸರು ದಾಖಲಿಸಿದ್ದಾರೆ. ವಿಪರ್ಯಾಸ ಅಂದರೆ ಬಿಜೆಪಿಯನ್ನು ಸೋಲಿಸಿ ಜಾತ್ಯತೀತ ಸರಕಾರ ಬರಲೆಂದು ನಾವೆಲ್ಲಾ ಪ್ರಯತ್ನಪಟ್ಟು ಅಧಿಕಾರಕ್ಕೆ ತಂದ ಜಾತ್ಯತೀತ ಕಾಂಗ್ರೆಸ್ ಸರಕಾರವೇ 4 ಕೇಸುಗಳನ್ನು ನನ್ನ ವಿರುದ್ಧ ಪ್ರಕರಣ ದಾಖಲಿಸಿದೆ. ಕಾಂಗ್ರೆಸ್ ಸರ್ಕಾರದ ಯಾರ ಪರವಾಗಿದೆ” ಎಂದು ಕೇಳಿದ್ದಾರೆ.
ತಮ್ಮ ಸಂಘಟನೆಯ ಮುಖಂಡರ ವಿರುದ್ಧ ದಾಖಲಾದ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಏನಿದು ಕಮೀಷನರ್ ಅಗರವಾಲ್ ? ಮಂಗಳೂರು ಕಮೀಷನರೇಟ್ ಪ್ರತ್ಯೇಕ ರಾಜ್ಯವೆ ? ಕರ್ನಾಟಕ ಸರಕಾರ, ಕಾಂಗ್ರೆಸ್ ಪಕ್ಷ ಉತ್ತರಿಸುತ್ತದೆಯೆ ? ಕ್ಷೇತ್ರದ (ಉಳ್ಳಾಲ ) ಶಾಸಕರೂ ಆಗಿರುವ ಮಾನ್ಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಉತ್ತರಿಸುತ್ತಾರೆಯೆ? ಕೋಮುವಾದಿ ದ್ವೇಷ ಭಾಷಣಕಾರರಿಗೊಂದು ನ್ಯಾಯ, ಬಡವರ, ಕಾರ್ಮಿಕರ, ಅಲ್ಪಸಂಖ್ಯಾತರ, ನ್ಯಾಯದ ಪರ ಇರುವ ರಾಜಕೀಯ ಕಾರ್ಯಕರ್ತರಿಗೊಂದು ನ್ಯಾಯವೆ ? ಇದೇನು ಅಗರವಾಲ್ ಎಂಬ ಪೊಲೀಸ್ ಕಮೀಷನರ್ ರ ರಾಜ್ಯವೆ ? ಕಲ್ಲೆಡ್ಕ ಭಟ್ಟರ ವಸಾಹತೆ?” ಎಂದು ಅವರು ಪ್ರಶ್ನಿಸಿದ್ದಾರೆ.
“ಕಮೀಷನರ್ ಅಗರವಾಲ್ ಈ ಪ್ರಶ್ನೆಗಳಿಗೆ ಉತ್ತರಿಸಬೇಕು. FIR ಹಾಕುವಂತಹ ಘಟನೆ ಪ್ರತಿಭಟನೆಯಲ್ಲಿ ಏನು ನಡೆದಿತ್ತು? ಅಂತಹ ಗಂಭೀರ ಕಾನೂನು ಸುವ್ಯವಸ್ಥೆಯ ಪ್ರಶ್ನೆ ಎಲ್ಲಿ ಎದುರಾಗಿತ್ತು ? ನಿಷೇಧಾಜ್ಞೆ ಏನಾದರು ಜಾರಿಯಲ್ಲಿ ಇತ್ತೆ? ಪೊಲೀಸರ ವಿನಂತಿಗಳಿಗೆ ನಾವು ಅಗತ್ಯ ಬಿದ್ದಾಗಲೆಲ್ಲಾ ಸ್ಪಂದಿಸಿದ್ದೇವೆ. ಹಾಗಂತ ಕಮೀಷನರ್ ಅಗರವಾಲ್ ವಿನಂತಿಸಿದ್ದನ್ನೆಲ್ಲಾ (ಆದೇಶಿಸಿದ್ದನ್ನು) ಮಂಗಳೂರಿನ ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ತಲೆಬಾಗಿ ಪಾಲಿಸಬೇಕು ಎಂದು ಹೇಳಲು ಮಂಗಳೂರು ಏನು ಪೊಲೀಸ್ ರಾಜ್ಯವೆ ? ಕಮೀಷನರ್ ಅನುಪಮ್ ಅಗರವಾಲ್ ಉತ್ತರಿಸಬೇಕು, ದ.ಕ. ಜಿಲ್ಲೆಯಲ್ಲಿ ರಾಜ್ಯ ಸರಕಾರದ ಆಡಳಿತ ಇದ್ದಲ್ಲಿ ಉಸ್ತುವಾರಿ ಸಚಿವರು, ಗೃಹ ಸಚಿವರು ಉತ್ತರಿಸಬೇಕು. ಮಂಗಳೂರಿನಲ್ಲಿ ಪೊಲೀಸ್ ಸರ್ವಾಧಿಕಾರ ನಡೆಯಲು ಬಿಡುವುದಿಲ್ಲ” ಎಂದು ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.
ವಿಡಿಯೊ ನೋಡಿ: ಕರಾವಳಿ ನಾಡು ಇದೀಗ ಕಾರ್ಪೊರೇಟ್ ಬಿಳಿಯಾನೆಗಳ ಬಟ್ಟಲಾಗಿದೆ – ರಾಜಾರಾಂ ತಲ್ಲೂರು Janashakthi Media