ಗುರುರಾಜ ದೇಸಾಯಿ
(ಇಲ್ಲಿಯವರೆಗೆ…… ಊರಿನ ಜನ ಬಹಿಷ್ಕಾರ ಹಾಕಿದ್ದನ್ನು ಸವಾಲಾಗಿ ಸ್ವಿಕರಿಸಿದ ಕೇರಿಯ ಜನ ನೆಮ್ಮದಿಯ ನಾಳೆಗಾಗಿ ಪಣ ತೊಟ್ಟರು. ನಾವು ಎದೆಗುಂದಿಲ್ಲ ಎಂದು ಸಂತಸದಿಂದಲೇ ಬಾಡೂಟಕ್ಕೆ ಸಿದ್ದತೆ ಮಾಡಿಕೊಂಡರು…. ಮುಂದೆ ಓದಿ…….) ಗಾಯ
ಬಹಿಷ್ಕಾರ ಹಾಕ್ಯಾರ… ಅಂತ ಚಿಂತೆ ಮಾಡೋದರ ಬದಲು, ನಾವು ಬದಲಾಗೋದು ಹೇಗೆ? ಎಂದು ತಪಗಲೂರಿನ ಕೇರಿಯ ಜನ ಚರ್ಚೆ ನಡೆಸಿದರು. ಅಂತಿಮವಾಗಿ ಬಾಡೂಟ ತಿಂದು ಈ ಕರಾಳ ರಾತ್ರಿ ಮತ್ತೆಂದು ಬರದಿರಲಿ ಎಂಬ ಭರಸವಸೆಯೊಂದಿಗೆ ಸಂಭ್ರಮಿಸೋಣ ಎಂದು ನಿರ್ಧರಿಸಿದರು. ಅದಕ್ಕೆ ಕೇರಿಯ ಹಿರಿಯ ತನ್ನ ಮನೆಯಲ್ಲಿದ್ದ ಎರಡು ಕುರಿಗಳನ್ನು ನೀಡಿದ.
ಹಿರಿಯನ ಮಾತು ಕೇಳಿ ಕೇರಿಯ ಜನರೆಲ್ಲ ಹೋ… ಹೋ… ಎಂದು ಕೇಕೆ ಹಾಕಿದರು. ಮನೆಯಲ್ಲಿದ್ದ ಕಟ್ಟಿಗೆಗಳನ್ನು ಕೈಗೆ ಬಂದಷ್ಟು ಎದಿಗೆ ಆನಿಸಿಕೊಂಡು ತರುತ್ತಿರುವುದನ್ನು ನೋಡಿ ಹುಚ್ಚೆದ್ದು ಕುಣಿದರು.
ಮನೆಯಲ್ಲಿದ್ದ ದೊಡ್ಡ ದೊಡ್ಡ ಡಬರಿಗಳನ್ನು (ಪಾತ್ರೆ) ತಂದರು, ಖಾರದ ಪುಡಿ, ಅರಿಶಿಪುಡಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮ್ಯಾಟೋ, ಮಸಾಲೆ ಸಾಮಾನು, ಹೀಗೆ ಬಾಡೂಟಕ್ಕೆ ಬೇಕಾದ ಪದಾರ್ಥಗಳನ್ನು ಒಬ್ಬೊಬ್ಬರೇ ತರ ತೊಡಗಿದರು…
ಯೇ!!! ದೇವಣ್ಣ, ಪರ್ಸಪ್ಪಣ್ಣ ಕುರಿ ಕಡದಿದ್ದು ಆತೇನೋ……??? ಎಂದ ಮಲ್ಯಾ.
ಹುನೋ…, ಚರ್ಮ ಸುಲ್ಯಕತ್ತೀನಿ, ಒಲಿ ಹೂಡಿ ಬೆಂಕಿ ಹಚ್ರೀ… ಎಂದ ದೇವ್ಯಾ…
ಆತಪ್ಪಾ… ಆತು… ಬೇ!!! ಭರ್ಮವ್ವ… ದೇವವ್ವ… ಒಂದಿಷ್ಟ ಮಂದಿ ಕರ್ಕೊಂಡು ನೀವು ಮಸಾಲೆ ರುಬ್ಬರಬೇ… ಎಂದ ಮಲ್ಯಾ…
ದೇವಣ್ಣ… ನೀ ಮಾಂಸ ಎಲ್ಲ ರೆಡಿ ಮಾಡ್ಕೋಂಡಿರು, ನಾನು… ಒಲಿ ಹೂಡ್ತೀನಿ ಎಂದ ಚೂರಿ ಪರ್ಸ್ಯಾ…
ಚೂರಿ ಪರ್ಸ್ಯಾ, ಮಲ್ಯಾ ಎಲ್ಲಾ ಸೇರಿ ಒಲಿ ಹೂಡಿದರು, ಬೆಂಕಿ ಜೋರಾಗಿ ಉರೀತಾ ಇತ್ತು. ಬಳ್ಳೊಳ್ಳಿಯ ವಾಸನೇ… ಕೇರಿ ದಾಟಿ ಊರ ಮಂದಿ ಮೂಗಿಗೆ ಘಮ್!!!! ಘಮ್!!!! ಎಂದು ಬಡೆಯುವಷ್ಟು ಹದವಾಗಿ ಬೇಯಿಸತೊಡಗಿದರು.
ಇತ್ತ ಹುಡುಗರು ಮನೆಯಲ್ಲಿದ್ದ ಹಲಗಿ ತಂದು ಬೆಂಕಿಗೆ ಕಾಸ ತೊಡಗಿದರು…
ದೇವ್ಯಾ… ಪರ್ಸ್ಯಾ… ಮಲ್ಯಾ… ರೆಡಿ ಮಾಡಿ ಇಟ್ಟಿದ್ದ ಕುರಿ ಮಾಂಸವನ್ನು ಡಬರಿಗೆ ಹಾಕಿದರು.
ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ 12 | ಊರಿಂದ ಬಹಿಷ್ಕಾರ | ಧಣಿಯ ಅಟ್ಟಹಾಸ
ಹುಡುಗರು ಓಹ್!!! ಓಹ್!!! ಎಂದು ಜೋರಾಗಿ ಕೇಕೆ ಹಾಕುತ್ತಾ ಹಲಗಿಯನ್ನು ಬಾರಿಸ ತೊಡಗಿದರು.
ಜಕ್ಕಣಕ್ಕ ಜಕ್ಕಣಕ್ಕ ಜಕ್ಕಣ್ಣಕ್ಕ.. ಜಕ್ಕಣಕ್ಕ …… ಹಲಗಿಯ ಸದ್ದು ಜೋರಾಯ್ತು, ಹಲಗೆಯ ನಾದಕ್ಕೆ ಹುಡುಗರು ಹುಚ್ಚೆದ್ದು!!! ಕುಣಿಯಲು ಆರಂಭಿಸಿದರು.
ಹುಡುಗರ ಒಂದು ಗುಂಪು ಮಲ್ಯಾ, ದೇವ್ಯಾ, ಭರ್ಮವ್ವ, ದೇವವ್ವರನ್ನು ನಡುವೆ ನಿಲ್ಲಿಸಿ!!! ಹಲಗಿಯ ನಾದಕ್ಕೆ ಕುಣಿಯತೊಡಗಿದರು. ಇನ್ನೂ ಕೆಲವರು ಈ ನಾಲ್ಕು ಮಂದಿಯನ್ನು ಹೆಗಲ ಮೇಲೆ ಹೊತ್ತು ಕೇರಿಯ ತುಂಬೆಲ್ಲ ಮೆರವಣಿಗೆ ಮಾಡಿದರು.
ಹೀಗೆ ಒಂದು ಗಂಟೆಗಳ ಕಾಲ ಹಲಗೆ ಸದ್ದು, ಕುಣಿತ, ದೇವ್ಯಾ, ಮಲ್ಯಾ, ಭರ್ಮವ್ವ, ದೇವವ್ವರ ನೋವನ್ನು ಮರೆಯಿಸಿತು, ಅವರ ಕಣ್ಣಲ್ಲಿ ಅವರಿಗೆ ಅರಿವಿಲ್ಲದೆ ಕಣ್ಣಂಚಲ್ಲಿ ನೀರು ಹರಿಯುತ್ತಿತ್ತು…
ಬರ್ರಪ್ಪೋ… ಬರ್ರೀ… ಬಾಡೂಟ ರೆಡಿ ಆಗೈತಿ ಬರ್ರಪ್ಪೋ ಬರ್ರೀ… ಎಂದು ಹಲಗೆ ಬಾರಿಸುತ್ತಿದ್ದ ಹುಡುಗರು ಧಣಿಯ ಮನೆಯವರೆಗೂ ಕೇಳುವಂತೆ!!! ಗಟ್ಟಿಯಾಗಿ!!! ಕೂಗ ತೊಡಗಿದರು.
ದುರ್ಗಮ್ಮನ ಗುಡಿಯಲ್ಲಿದ್ದ ಗಂಗಾಳವನ್ನು (ತಟ್ಟೆ) ತಂದು ಸಾಲಾಗಿ ಇಡಲಾಯಿತು. ಎಲ್ಲರೂ ಇನ್ನೇನು… ಊಟಕ್ಕೆ ಕೂಡಬೇಕು ಎನ್ನುವಷ್ಟರಲ್ಲಿ ಪಟ ಪಟಿಯ ಸದ್ದು ಕೇಳಿತು.
ಬುಡು ……ಬುಡು….. ಎಂದು ಪಟಪಟಿಯ ಸದ್ದು ಹತ್ತಿರದಲ್ಲಿಯೇ ಕೇಳುತ್ತಿದ್ದರೆ, ಇವರ ಎದೆ ಡಬ್… ಡಬ್… ಎಂದು ಹೊಡೆದುಕೊಳ್ಳುತ್ತಿತ್ತು. ಹಲಗೆಯ ಸದ್ದು ಸಂಪೂರ್ಣವಾಗಿ ಸ್ತಬ್ದವಾಯಿತು. ಹಿರಿಯನ ಸುತ್ತ ಎಲ್ಲರೂ ಸೇರಿದರು.
ಹೆದರ ಬ್ಯಾಡ್ರೀ… ಹೆದರ ಬ್ಯಾಡ್ರೀ ಈಗಲೇ ಇನ್ನೂ ಧೈರ್ಯದಿಂದ ಬದುಕು ಸಾಗಿಸೋಣ ಅಂತ ತೀರ್ಮಾನ ಮಾಡೀವಿ… ಬರ್ಲೀ… ಅದ್ಯಾರು ಬರ್ತಾರೋ… ನೋಡೋಣ… ಎಂದು ಹಿರಿಯ ಧೈರ್ಯ ನೀಡಿದ.
ಪಟಪಟಿ ಲೈಟ್ ಗಮನಿಸಿದಾಗ, ಗಾಡಿ ಕೇರಿಯ ಕಡೆ ಬರುತ್ತಿದೆ ಎಂಬುದು ಅವರಿಗೆ ಖಚಿತವಾಯಿತು. ಹಾಗೇ ಹೆದರಿಕೆಯೂ ಹೆಚ್ಚಾಗ!!!! ತೊಡಗಿತು. ಆ ಪಟಪಟಿ ಇವರಿದ್ದ ಜಾಗಕ್ಕೆ ಬಂದು ನಿಂತಿತು. ಗಾಯ
ಅಯ್ಯ!!! ರಾಜಣ್ಣರ ನೀವು!!! ಎಂದು ಮಲ್ಯಾ… ಆಶ್ಚರ್ಯ ವ್ಯಕ್ತಪಡಿಸಿದ.
ನಾವು ಪೊಲೀಸ್ರು… ಬಂದ್ರು… ಅಂತ ಹೆದರಿ ಬಿಟ್ಟಿದ್ವಲ್ರೀ… ರಾಜಣ್ಣರ… ಹೇ!!!! ಹೊಡಿರ್ಲೇ ಹಲಗಿನಾ ಎಂದ ದೇವ್ಯಾ…
ಹುಡುಗರು ಹಲಗಿ ಬಾರಿಸುತ್ತಿದ್ದಂತೆ ದೇವ್ಯಾ ಮತ್ತು ಮಲ್ಯಾ ರಾಜಣ್ಣನನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು.
ರಾಜಣ್ಣ ನೀವು ಬಂದಿದ್ದು ಚಲೋ ಆತು ನೋಡ್ರಿ!!! ನಿಮ್ಮನ್ನ ಈ ವಾರದಾಗ ಕರಿಸಿ ನಮ್ಮ ಹುಡುಗರಿಗೆ ಧೈರ್ಯ ಕೊಡಿಸಬೇಕು ಅಂತಾ ಯೋಚ್ನಿ ಮಾಡಿದ್ವಿ… ಎಂದ ಹಿರಿಯ.
ಹೌದ್ರಿ ಅಜ್ಜಾರಾ… ನಿಮಗ ಬಹಿಷ್ಕಾರ ಹಾಕಿದ್ದು ಗೊತ್ತಾತ್ರಿ… ನಿಮಗೆ ಧೈರ್ಯ ಕೊಡೋಣ ಅಂತ ಬಂದೆ ನೋಡ್ರೀ… ಎಂದ ರಾಜಣ್ಣ.
ರೋಗಿ ಬಯಸಿದ್ದು ಅದನ್ನ, ಡಾಕ್ಟರ್ ಹೇಳಿದ್ದು ಅದನ್ನ ಅಂದಗ ಆತ ನೋಡ್ರೀ… ಇದು ಎಂದ ಮಲ್ಯಾ.
ರಾಜಣ್ಣರ ಎರಡು ಕುರಿ ಕಡಿದೀವ್ರೀ… ಬಾಡೂಟ ರೆಡಿ … ಬರ್ರೀ… ಉಣ್ಣೋಣ ಎಂದ ದೇವ್ಯಾ.
ಬಾಡೂಟ, ಬಾಳ ಚಲೋ ಕೆಲ್ಸ ಮಾಡಿರಲ್ರೋ… ಊಟ ಮಾಡಕ್ಕಿಂತ ಮುಂಚೆ ನಮಗ ಮಾರ್ಗದರ್ಶನ ಮಾಡೋ ಗುರುನ ನೆನಸ್ಕೋಬೇಕು. ಇಬ್ಬರು ಗುರುಗಳ ಫೋಟೋ ತಂದೀನಿ, ಅವರಿಗೆ ಮೇಣದ ಬತ್ತಿ ಹಚ್ಚಿ, ಆಮ್ಯಾಲೆ ಉಣ್ಣೋಣ ಎಂದ ರಾಜಣ್ಣ. ಎಲ್ಲರೂ ಆತು… ಆತು… ಎಂದರು.
ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ 13 – ನೆಮ್ಮದಿಯ ನಾಳೆಗಾಗಿ ಬದುಕೋಣ
ಪಟಪಟಿಯಲ್ಲಿದ್ದ ಎರಡು ಪೋಟೋಗಳನ್ನು ರಾಜಣ್ಣ ತೆಗೆದು ಪಕ್ಕದಲ್ಲಿಯೇ ಇದ್ದ ಕಲ್ಲಿನ ಕಟ್ಟಿಯ ಮೇಲೆ ಇಟ್ಟ. ಮೇಣದ ಬತ್ತಿನ ಇವರ ಸುತ್ತ ಎಲ್ಲರೂ ಹಚ್ಚ್ರೀ… ಅಂದ.
ಎಲ್ಲರೂ ಆ ಫೋಟೋದ ಸುತ್ತ ಮೇಣದ ಬತ್ತಿ ಹಚ್ಚಿದರು.
ಇವರು ಯಾರ್ರೀ? ಎಂದು ಮಲ್ಯಾ… ದೇವ್ಯಾ… ಆಶ್ಚರ್ಯದಿಂದ ಕೇಳಿದರು.
ಹೇಳ್ತಿನಿ… ಎಲ್ಲರೂ ನಿಮ್ಮ ನಿಮ್ಮ ಗಂಗಾಳ ಇರೋ ಜಾಗದಾಗ ಕುತ್ಕೋರಿ… ಎಂದ ರಾಜಣ್ಣ.
ಎಲ್ಲರೂ ಗಂಗಾಳ ಇದ್ದ ಜಾಗಕ್ಕೆ ಹೋಗಿ ಕುಳಿತರು.
ಇವರು ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಅಂತ. ಇವರಿಬ್ಬರು ಶೋಷಿತರ ಪರವಾಗಿ ಹೋರಾಟ ನಡೆಸಿದವರು. ಬಡವರ ಬದುಕಿನ ಆಶಾದೀಪಗಳು. ಇವರು ಹಾಕಿಕೊಟ್ಟ ದಾರಿಯನ್ನು ಮುಂದೆ ನಡ್ಸಕೊಂಡು ಹೋಗೋದು ನಮ್ಮೆಲ್ಲರ ಕರ್ತವ್ಯ ಐತಿ ಎಂದ ರಾಜಣ್ಣ.
ಸುಮ್ನೆ ಇರಿ ರಾಜಣ್ಣ, ಜೊತೆಗೆ ಇದ್ದ ಮಂದಿ ಊರ ಜನ ನಮ್ಮ ಮ್ಯಾಲೆ ಇನ್ನೂ ದಬ್ಬಾಳಿಕೆ ನಡ್ಸಕತ್ತಾರ. ಅಂತದ್ರಾಗ ಈ ಫೋಟೊದಾಗ ಇರೋರು ಹೆಂಗ್ ನಮ್ಮ ಬದುಕು ಸರಿ ಮಾಡ್ತಾರೆ ಎಂದು ಸಣಕಲು ದೇಹದ ಸಣ್ಯಾ ಪ್ರಶ್ನಿಸಿದ. ಗಾಯ
ಹೌದ್ರಿ ರಾಜಣ್ಣ, ನೀವು ಹೇಳೋದ್ನ ಹೆಂಗ ನಂಬಬೇಕ್ರಿ ಎಂದು ಸಣ್ಣ್ಯಾನ ಜೊತೆ ಮಂಜ ಧ್ವನಿ ಗೂಡಿಸಿದ.
ನೀವು ಹೇಳೋದು ಖರೆ ಐತಿ, ಹೊಡ್ತ, ಬಡ್ತ, ದೌರ್ಜನ್ಯ, ದಬ್ಬಾಳಿಕೆ. ಅಕ್ಷರ ಜ್ಞಾನ ಇಲ್ಲದೆ ಇರೋದರಿಂದ ಮತ್ತು ಯಾವಾಗ್ಲೂ ನಿಮ್ಮ ಕಣ್ಣುಗಳು ಹಿಂಸೆ ನೋಡಿದ್ರಿಂದ ನೀಮಗ ಹಿಂಗ ಪ್ರಶ್ನೆ ಹುಟ್ಟಕತ್ತಾವ. ಮನುಷ್ಯ ಪ್ರಶ್ನೆ ಮಾಡೋದ್ನ ಕಲಿಬೇಕು. ಆಗ್ಲೆ ನಮ್ಮ ಜೀವನ ಅರ್ದ ಬದಲಾವಣೆ ಅಕ್ಕೈತಿ ಎಂದ ರಾಜಣ್ಣ,
ಒಬ್ಬಾತ ನೀಲಿ ಕೋಟು ಹಾಕನ್ರಿ, ಇನ್ನೊಬ್ಬಾತ ಕೆಂಪು ಕೋಟು ಹಾಕಾನ್ರಿ, ಇವರ್ನ ನೋಡಿದ್ರ ಹಂಗೆ ಕಾಣವಲ್ದು ನೋಡ್ರಿ ಎಂದು ಯಲ್ಲವ್ವ ಮರು ಪ್ರಶ್ನೆ ಹಾಕಿದಳು, ಬಸ್ಸವ್ವನು ಹೌದ್ರಿ ಎಂದು ಅದಕ್ಕೆ ಧ್ವನಿ ಗೂಡಿಸಿದಳು ಗಾಯ
ಆತ… ಆತ…ಇವರ ನಮಗೆ ಹೆಂಗ ಬದುಕು ರೂಪ್ಸಿದ್ರು!!! ಅನ್ನೋ!!! ಕತಿನಾ… ಊಟ ಆದ ಮೇಲೆ ಹೇಳ್ತಿನಿ. ಈಗ ಊಟ ಮಾಡೋಕ್ಕಿಂತ ಮುಂಚೆ ಪ್ರತಿಜ್ಞೆ ತಗೋಬೇಕು ಎಂದ ರಾಜಣ್ಣ.
ಎಲ್ಲರೂ ಕುಳಿತ ಜಾಗದಲ್ಲಿಯೇ ಆ ಫೊಟೊಗೆ ಕೈ ಮುಗಿದು,ಆತ್ರೀ… ರಾಜಣ್ಣರ ನೀವು ಹೆಂಗ ಹೇಳ್ತಿರೀ… ಹಂಗ ಕೇಳ್ತಿವ್ರಿ ಎಂದು ಒಕ್ಕೋರಲ ಧ್ವನಿಯಲ್ಲಿ ಹೇಳಿದರು.
ಇದಕ್ಕಿಂತ ಖುಷಿ ವಿಚಾರ ಮತ್ತೇನೈದೆ?, ಈಗ ನಾನು ಹೇಳಿಕೊಡೋದನ್ನ ದಿನಕ್ಕ ಒಂದು ಸಾರಿ ಆದ್ರು ಹೇಳ್ರಿ…, ಇದು ನಿಮಗ ಧೈರ್ಯ, ಬಲ, ಗಟ್ಟಿತನ, ಜಾಗೃತಿ ತಂದು ಕೊಡತ್ತೈತಿ ಎಂದ ರಾಜಣ್ಣ, ಎಲ್ಲರೂ ತಲೆ ಅಲ್ಲಾಡಿಸಿ ಹುಂ… ಎಂದರು.
ಎಲ್ಲರೂ ಕೈ ಮುಂದ ಮಾಡ್ರಿ… ಎಂದ ರಾಜಣ್ಣ, ಎಲ್ಲರೂ ತಮಗಿಷ್ಟ ಬಂದ ಕೈಯನ್ನು ಮುಂದೆ ಚಾಚಿದರು..
ರಾಜಣ್ಣ ಪ್ರತಿಜ್ಞೆ ಹೇಳಲು ಆರಂಭಿಸಿದ…
ಇಂದಿನಿಂದ… ನಾವು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ನಮ್ಮ ಮಕ್ಕಳನ್ನು ಸಾಲಿಗೆ ಕಳಿಸುತ್ತೇವೆ. ನಮ್ಮ ಮೇಲೆ ಅನ್ಯಾಯ, ದೌರ್ಜನ್ಯ ನಡೆದರೆ ಧೈರ್ಯವಾಗಿ ಅದನ್ನು ಎದರಿಸುತ್ತೇವೆ ಮತ್ತು ಪ್ರಶ್ನಿಸುತ್ತೇವೆ. ತಲೆ ತಗ್ಗಿಸದೆ ತಲೆ ಎತ್ತಿ ನಡೆಯುತ್ತೇವೆ. ನಮ್ಮ ಹಕ್ಕಿನ ಜಾರಿಗಾಗಿ ಹೋರಾಡುತ್ತೇವೆ. ಅದಕ್ಕಾಗಿ ಶಿಕ್ಷಣ, ಸಂಘಟನೆ, ಹೋರಾಟ ನೆಡೆಸುತ್ತೇವೆ. ಎಂದು ಪ್ರತಿಜ್ಞಾ ಭೋಧನೆಯನ್ನು ರಾಜಣ್ಣ ಮಾಡಿದ.
ಎಲ್ಲರೂ ರಾಜಣ್ಣ ಹೇಳಿದಂತೆ ಹೇಳುತ್ತಾ… ಪ್ರತಿಜ್ಞೆಯನ್ನು ಸ್ವೀಕರಿಸಿ, ಮುಖದಲ್ಲಿ ಸಂತೋಷವನ್ನು ಮತ್ತಷ್ಟು… ಅರಳಿಸಿದರು.
ರಾಜಣ್ಣಾರ… ಮನಸ್ಸು ಹಗುರ ಆತ್ರಿ, ಮೆದುಳು ಈಗ ಚುರುಕಾತು ನೋಡ್ರೀ… ನಮ್ದು ಎಂದರು ಅಲ್ಲಿದ್ದ ಜನ.
ಆತು… ಆತು… ಎಲ್ಲರು ಕುಂದರ್ರಿ, ಊಟ ಮಾಡ್ರೀ… ನಂಗೂ ಇಲ್ಲೇ ಗಂಗಾಳ ಕೊಡ್ರೀ… ಇಲ್ಲೇ… ಕುಂದರ್ತೀನಿ… ಎಂದು ರಾಜಣ್ಣ ಕೆಳಗಡೆ ಕುಳಿತ.
ರಾಜಣ್ಣನಿಗೆ ಗಂಗಾಳದಲ್ಲಿ ಕಟಕ ರೊಟ್ಟಿ, ಬೇಯಿಸಿದ ಕುರಿ ಮಾಂಸವನ್ನು ನೀಡಿ ಕೊಟ್ಟರು. ಗಾಯ
ಒಂದು ತುತ್ತು ಬಾಯಿಗೆ ಇಡುತ್ತಿದ್ದಂತೆ, ಚಪ್ಪರಿಸುತ್ತಾ… ರುಚಿ ಅಂದ್ರ… ಹಿಂಗಿರ್ಬೇಕು ನೋಡ್ರೀ… ಇಂಥಾ… ಬಾಡೂಟನಾ… ನಾನು ಯಾವತ್ತು ತಿಂದಿಲ್ಲ ನೋಡ್ರೀ… ಎಂದು ರಾಜಣ್ಣ ಬಾಯಿ ಚಪ್ಪರಿಸಿದ.
ಎಲ್ಲರೂ ಬಾಡೂಟ ಸವಿದು ಸಂಭ್ರಮಿಸಿದರು.
(ಮುಂದುವರೆಯುವುದು………)
ಗಾಯ ಈ ವಿಡಿಯೋ ನೋಡಿ : ಮೃಣಾಲ್ ಸೆನ್ 100 ವೆಬಿನಾರ್ ಸರಣಿ : ಉಪನ್ಯಾಸ-4 | ಒಕ ಊರಿ ಕಥಾ ದಲ್ಲಿ ಕಾಣುವ ತೆಲಂಗಾಣ ಊಳಿಗಮಾನ್ಯ ವ್ಯವಸ್ಥೆ