ಹಾಸನ: ಎಲ್ಲಿಯವರೆಗೆ ಭಾರತದ ಜನಗಳಲ್ಲಿ ಕಂದಾಚಾರ ಹಾಗೂ ಮೂಢನಂಬಿಕೆಗಳು ಮೇಲುಗೈ ಸಾಧಿಸಿರುತ್ತದೋ ಅಲ್ಲಿಯವರೆಗೆ ದೇಶ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು. ಅವರು ಇತ್ತೀಚೆಗೆ ಜಿಲ್ಲೆಯ ಪುಷ್ಪಗಿರಿ ಸಂಸ್ಥಾನದ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆಯೋಜಿಸಿದ್ದ ವಿಜ್ಞಾನ ಕಾರ್ಯಕರ್ತರ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.
“ಜನರಲ್ಲಿ ದೇವರು, ಧರ್ಮ ಹಾಗೂ ಅದನ್ನು ಆವರಿಸಿರುವ ಮೂಢನಂಬಿಕೆ ಮೇಲಿರುವ ನಂಬಿಕೆ ವಿಜ್ಞಾನದ ಮೇಲಿಲ್ಲ. ಹಾಗೆಯೇ ಸಂವಿಧಾನದ ಮೇಲೂ ಇಲ್ಲದಿರುವುದು ಅತ್ಯಂತ ಅಪಾಯಕಾರಿ ಮನೋವೃತ್ತಿ. ಜನರಲ್ಲಿನ ಮೌಢ್ಯವನ್ನು ದೂರಮಾಡಿ ವೈಜ್ಞಾನಿಕವಾಗಿ ಆಲೋಚಿಸಿ ಸಂವಿಧಾನ ಬದ್ಧವಾಗಿ ಬದುಕುವ ಚಿಂತನೆಯನ್ನು ನಮ್ಮ ಶೈಕ್ಷಣಿಕ ವ್ಯವಸ್ಥೆ ಮಾಡಬೇಕಿತ್ತು. ಆದರೆ ಈ ವಿಷಯದಲ್ಲಿ ಅದು ತನ್ನ ಹೊಣೆಗಾರಿಕೆ ಮರೆತಿದೆ” ಎಂದು ಟಿ.ಎ. ಪ್ರಶಾಂತಬಾಬು ಹೇಳಿದರು.
ಇದನ್ನೂ ಓದಿ: ಒಕ್ಕಲಿಗರ ಪರ ಮಾತನಾಡಿದ್ದಕ್ಕೆ ಸಿಎಂ ಸ್ಥಾನ ಕಿತ್ತುಕೊಳ್ಳಲಾಗಿತ್ತು – ಬಿಜೆಪಿ ಸಂಸದ ಸದಾನಂದ ಗೌಡ
“ಅಷ್ಟೆ ಅಲ್ಲದೆ, ಮಾಧ್ಯಮಗಳು ಕೂಡ ಮೌಢ್ಯವನ್ನು ಅತಿರೇಕದದಿಂದ ಬಿತ್ತರಿಸುತ್ತಿದೆ. ಇದು ಭಾರತವನ್ನು ಇನ್ನು ಮೌಢ್ಯದ ಕೂಪದಲ್ಲೇ ಕೊಳೆಯುವಂತೆ ಮಾಡಿದೆ. ಭಾರತದ ಜನಗಳಲ್ಲಿರುವ ಮೌಢ್ಯಗಳನ್ನು ದೂರೀಕರಿಸಿ ವೈಜ್ಞಾನಿಕ ತಳಹದಿಯಲ್ಲಿ ತಮ್ಮ ಜೀವನವನ್ನು ಕಂಡುಕೊಳ್ಳಲು ಪ್ರೇರೇಪಿಸಲು ಬಿಜಿವಿಎಸ್ ಕಳೆದ 33ವರ್ಷಗಳಿಂದ ಬಹುಮುಖಿ ನೆಲೆಯಲ್ಲಿ ಶ್ರಮಿಸುತ್ತಿದೆ. ಪರಿಸರ, ಜನಾರೋಗ್ಯ, ಸಂವಿಧಾನ ಅರಿವು, ಸಂತಸ ಕಲಿಕೆ ಹಾಗೂ ಮಹಿಳಾ ಬಲವರ್ಧನೆಗೆ ಕುರಿತು ವಿಜ್ಞಾನ ಕಾರ್ಯಕರ್ತರು ಸಂವಹನ ಮಾಡುವ ತಂತ್ರಗಾರಿಕೆ ಹಾಗೂ ಚಟುವಟಿಕೆಗಳ ವಿಧಾನ ರೂಪಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ” ಎಂದರು. ಮೂಢನಂಬಿಕೆ
ಕಾರ್ಯಕ್ರಮವನ್ನು ಮಾನವ ಪ್ರತಿಕೃತಿಯ ತಲೆಬುರುಡೆಗೆ ಮಾನವತ್ವ, ವೈಜ್ಞಾನಿಕ ಚಿಂತನೆ, ಮಹಿಳಾ ಸಮಾನತೆ ಪರಿಸರ ಕಾಳಜಿ, ಇತ್ಯಾದಿ ಚಿಂತನಾ ಫಲಕಗಳನ್ನು ಚುಚ್ಚುವ ಮೂಲಕ ಪುಷ್ಪಗಿರಿ ಸಂಸ್ಥಾನದ ಮಠಾಧೀಶ ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ವಿನೂತನವಾಗಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, “ಕಣ್ಣಿಗೆ ಗೋಚರಿಸಿದ, ಮನಸಿಗೆ ನಿಲುಕದ ನಿಸರ್ಗದ ನಿಗೂಢಗಳನ್ನು ಸಂಶೋಧಿಸಿ ಜಗದ ಮುಂದೆ ಗೋಚರಿಸುವಂತೆಮಾಡುವುದೇ ವಿಜ್ಞಾನ, ವಿಜ್ಞಾನಿಗಳು. ಅವರು ಮಾಡಿದ ಈ ಸಂಶೋಧನೆಗಳಿಂದಲೇ ನಾವು ನಮ್ಮ ಹುಟ್ಟಿನ ಮೂಲ ತಿಳಿದುಕೊಳ್ಳಲು ಸಾಧ್ಯವಾಯಿತು. ಕೋಟ್ಯಾಂತರ ಪರಿಕರಗಳನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಜಗತ್ತಿನಲ್ಲಿ ಎರಡು ಮಾದರಿಯ ವಿಜ್ಞಾನಿಗಳು ಇದ್ದಾರೆ. ಒಬ್ಬರು ಈ ಸೃಷ್ಠಿ ಹೇಗಾಯಿತು ಎಂದು ಚಿಂತಿಸಿ ಜ್ಞಾನವನ್ನು ಸೃಷ್ಟಿ ಮಾಡಿದರೆ, ಈ ಜ್ಞಾನವನ್ನು ಬಳಸಿ ತಂತ್ರಜ್ಞಾನ ರೂಪಿಸಿ ಪರಿಕರ ಸೃಷ್ಠಿಸುವ ವಿಜ್ಞಾನಿಗಳು ಮತ್ತೊಂದೆಡೆ. ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ಜನರ ಬದುಕು ಉತ್ತಮಗೊಂಡಿದೆ” ಎಂದರು. ಮೂಢನಂಬಿಕೆ
ಇದನ್ನೂ ಓದಿ: ಶಿವಮೊಗ್ಗ | ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ವರನ ಕುಟುಂಬಕ್ಕೆ ಬಹಿಷ್ಕಾರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜಿವಿಎಸ್ ಹಳೇಬೀಡು ಘಟಕದ ಗೌರವಾಧ್ಯಕ್ಷ ದ್ಯಾವಪ್ಪನ ಹಳ್ಳಿ ಸೋಮಣ್ಣ ಅವರು ಮಾತನಾಡಿ, “ಎಲ್ಲಿಯವರೆಗೆ ಜನ ಮೂಢಾಚರಣೆಗಳ ಗುಲಾಮರಾಗಿರುತ್ತಾರೋ ಅಲ್ಲಿಯವರೆಗೆ ಜನರ ಬದುಕಿನಲ್ಲಿ ಭಯ, ಗೊಂದಲಗಳೇ ತುಂಬಿಕೊಂಡಿರುತ್ತವೆ. ಜನರಲ್ಲಿ ಸಂವಿಧಾನ ಬದ್ಧವಾಗಿ ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆ ಮೂಡಿಸುವ ಕೆಲಸ ಸರಕಾರಗಳು ಮಾಡಬೇಕಾದ ಕೆಲಸ ಆದರೆ ಈ ಕೆಲಸವನ್ನು ಬಿಜಿವಿಎಸ್ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಬೇಲೂರು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷ ಚೇಗರೆಡ್ಡಿ, ಬೇಲೂರು ತಾಲೂಕು ಬಿಜಿವಿಎಸ್ ಅಧ್ಯಕ್ಷ ಡಿ ಅಂತೋನಿಸ್ವಾಮಿ, ವೈದ್ಯಾಧಿಕಾರಿ ಡಾ.ಮಂಜುನಾಥ್, ಬಿಜಿವಿಎಸ್ ರಾಜ್ಯ ಉಪಾಧ್ಯಕ್ಷೆ ಸೌಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ವಿಜ್ಞಾನ ಚಳವಳಿ ಕಟ್ಟಿದ ಹಿರಿಯರೊಂದಿಗೆ ಸಂಘಟನಾ ಸಂವಾದ “ಹಳೆಬೇರು ಹೊಸಚಿಗುರು” ಭಾವನಾತ್ಮಕವಾಗಿ ನಡೆಯಿತು. ಸಂಜೆ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಳೇಬೀಡಿನಲ್ಲಿ ಸಾರ್ವಜನಿಕರಿಗೆ ಆಕಾಶ ವೀಕ್ಷಣೆ ಚಟುವಟಿಕೆ ನಡೆಸಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಬಿರ ಸಂಚಾಲಕಿ ಸಿ.ಸೌಭಾಗ್ಯ ನಡೆಸಿದರು. ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಪ್ರಮೀಳಾ ಸ್ವಾಗತಿಸಿ, ಬಿಜಿವಿಎಸ್ ತಾಲ್ಲೂಕು ಕಾರ್ಯದರ್ಶಿ ಶೇಷಪ್ಪ ವಂದಿಸಿದರು. ಹಿರೇಮಠ ತಂಡ ವಿಜ್ಞಾನ ಗೀತೆಗಳನ್ನು ಹಾಡಿದರು.
ವಿಡಿಯೊ ನೋಡಿ: ಘನತೆಯ ಬದುಕು, ಹೋರಾಟದ ಹಾದಿ, ಕಲೆಯ ದಾರಿ – ಕಲಾವಿದರು ಹೋರಾಟಗಾರರ ಮಾತುಕತೆ Janashakthi Media