ಮಾಲ್ಡೀವ್ಸ್‌: ಭೀಕರ ಅಗ್ನಿ ದುರಂತ -9 ಮಂದಿ ಭಾರತೀಯರು ಸೇರಿ 10 ಮಂದಿ ಸಾವು

ಮಾಲೆ: ಪ್ರಸಿದ್ಧ ಪ್ರವಾಸಿ ತಾಣ ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 10 ಮಂದಿ ಸಜೀವ ದಹನವಾಗಿದ್ದು, ಅದರಲ್ಲಿ 9 ಮಂದಿ ಭಾರತೀಯ ಕಾರ್ಮಿಕರು ಸೇರಿದ್ದಾರೆ. ದುರಂತದಿಂದಾಗಿ ಇನ್ನೂ ಹಲವು ಮಂದಿ ಗಾಯಗೊಂಡಿದ್ದಾರೆ.

ಬೇರೆ ಬೇರೆ ದೇಶಗಳಿಂದ ಕೆಲಸಕ್ಕಾಗಿ ಆಗಮಿಸುವ ಮಂದಿ ಮಾಲೆಯಲ್ಲಿ ಅತ್ಯಂತ ಇಕ್ಕಟ್ಟಾದ ವಸತಿಗೃಹಗಳಲ್ಲಿ ವಾಸವಾಗಿರುವ ಪ್ರದೇಶದಲ್ಲಿ ಅಗ್ನಿ ದುರಂತ ಸಂಭವಿಸಿದೆ. ನೆಲ ಮಹಡಿಯಲ್ಲಿ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಮಾಹಿತಿ ಪ್ರಕಾರ, ಗ್ಯಾರೇಜ್‌ ಬಹಳ ಇಕ್ಕಟ್ಟಾದ ಪ್ರದೇಶದಲ್ಲಿತ್ತು. ಮಾವೆಯೊ ಮಸೀದಿ ಬಳಿಯ ಎಂ. ನಿರುಫೆಹಿ ಎಂಬ ಪ್ರದೇಶದಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಳಗಿನ ಜಾವ 4:34ಕ್ಕೆ ಬೆಂಕಿ ನಂದಿಸಲಾಗಿದೆ. ಬೆಂಕಿ ನಂದಿಸಲು ಸುಮಾರು ನಾಲ್ಕು ಗಂಟೆಗಳ ಕಾಲ ಬೇಕಾಯಿತು.

ಘಟನೆ ಕುರಿತಂತೆ ಮಾಲ್ಡೀವ್ಸ್‍ ನಲ್ಲಿನ ಭಾರತದ ಹೈಕಮಿಷನ್ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದೆ. ಮಾಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಮ್ಮ ಭಾರತೀಯ ಮೂಲದ ಪ್ರಜೆಗಳು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ. ನಾವು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

ಬೆಂಕಿಯ ಜ್ವಾಲೆಗಳಿಂದ ಸುಟ್ಟು ಕರಕಲಾಗಿರುವ ಕಟ್ಟಡದ ಮೇಲಿನ ಮಹಡಿಯಿಂದ ಹತ್ತು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದಿರುವ ಅಧಿಕಾರಿಗಳು ಕಟ್ಟಡದ ಕೆಳಭಾಗದಲ್ಲಿದ್ದ ವಾಹನ ದುರಸ್ತಿ ಗ್ಯಾರೇಜ್‌ನಲ್ಲಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಮೃತಪಟ್ಟವರಲ್ಲಿ 9 ಮಂದಿ ಭಾರತ ಮೂಲದ ಕಾರ್ಮಿಕರಾಗಿದ್ದು, ಮತ್ತೊಬ್ಬರು ಬಾಂಗ್ಲಾದೇಶದ ಪ್ರಜೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಸವಾಗಿದ್ದ ಉದ್ಯೋಗಿಗಳು ಈ ಕಟ್ಟಡದಲ್ಲಿ ಅರ್ಧದಷ್ಟು ಜನ ಇದ್ದರು ಮತ್ತು ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಹೇಳಲಾಗುತ್ತದೆ. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ, ಅಗ್ನಿಶಾಮಕ ದಳ ಈಗಾಗಲೇ 28ಕ್ಕೂ ಹೆಚ್ಚು ಜನರನ್ನು ಕಟ್ಟಡದಿಂದ ಸ್ಥಳಾಂತರಿಸಿದೆ.

ದ್ವೀಪಗಳ ರಾಜಧಾನಿ, ರಜೆಯನ್ನು ಕಳೆಯಲು ಮತ್ತು ಉನ್ನತ ಮಾರುಕಟ್ಟೆಯನ್ನು ಹೊಂದಿರುವ ಮಾಲ್ಡೀವ್ಸ್ ಪ್ರಸಿದ್ಧ ತಾಣವಾಗಿದ್ದು, ಇದು ವಿಶ್ವದ ಅತ್ಯಂತ ಜನನಿಬೀಡ ನಗರಗಳಲ್ಲಿ ಒಂದಾಗಿದೆ.

Donate Janashakthi Media

Leave a Reply

Your email address will not be published. Required fields are marked *