ಬೆಂಗಳೂರು: ಬೆಳಗ್ಗೆ 8.30ರ ನಂತರ ಶಾಲಾ ಬಸ್‌ಗಳು ನಗರದ ರಸ್ತೆಗಳಲ್ಲಿ ಸಂಚರಿಸದಂತೆ ಬೆಂಗಳೂರು ಸಂಚಾರಿ ಪೊಲೀಸರು ನೀಡಿರುವ ಸಲಹೆಗೆ ಪೋಷಕರು, ಶಾಲೆಗಳು ಮತ್ತು ಶಿಕ್ಷಣ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 8.30ರ ನಂತರ ಶಾಲೆಗಳಿಗೆ ತೆರಳುವ ಬಸ್‌ಗಳಿಗೆ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ರಸ್ತೆಗಳಲ್ಲಿ ಶಾಲಾ ಬಸ್‌ಗಳನ್ನು ನಿಲ್ಲಿಸದಂತೆ ಶಾಲೆಗಳಿಗೆ ಸೂಚಿಸಲಾಗಿತ್ತು. ಬೆಳಗ್ಗೆ 8.15 ರ ನಂತರ ಶಾಲೆಗಳ ಸಮೀಪವೇ ವಿದ್ಯಾರ್ಥಿಗಳನ್ನು ಇಳಿಸಿ ಮತ್ತು ಅಲ್ಲೇ ನಿಲುಗಡೆ ಮಾಡುವ ಶಾಲಾ ಬಸ್‌ಗಳಿಗೆ ದಂಡ ವಿಧಿಸಲು ಅವರು ಸಿಬ್ಬಂದಿಗೆ ನಿರ್ದೇಶನ ನೀಡಿದ್ದಾರೆ. ಬೆಳಗ್ಗೆ 8.30 ರ ನಂತರ ಯಾವುದೇ ಶಾಲಾ ವಾಹನಗಳನ್ನು ಶಾಲೆಗಳ ಬಳಿ ನಿಲ್ಲಿಸಲು ಅನುಮತಿ ಇಲ್ಲ. ನಿಲ್ಲಿಸಿದರೆ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ವಿಶೇಷ ಪೊಲೀಸ್ ಆಯುಕ್ತ(ಸಂಚಾರ) ಡಾ.ಎಂ.ಎ.ಸಲೀಂ ತಿಳಿಸಿದ್ದರು.
ಸಂಚಾರಿ ಆಯುಕ್ತರ ಈ ನಡೆಗೆ ಪೋಷಕರು ಹಾಗೂ ಶಾಲೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಆಂಗ್ಲ ಮಾಧ್ಯಮ ಶಾಲೆಗಳ (ಕೆಎಎಂಎಸ್) ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಅವರು, ಸಂಚಾರಿ ಪೊಲೀಸರ ಈ ಕ್ರಮವನ್ನು ಟೀಕಿಸಿದ್ದು, ಇದು ಕೇವಲ ದಟ್ಟಣೆಯನ್ನು ಕಡಿಮೆ ಮಾಡಲು ಮಾತ್ರ ಗಮನಹರಿಸಿದೆ ಎಂದು ಹೇಳಿದ್ದಾರೆ. ಶಾಲೆಯ ಸಮಯವನ್ನು ಬದಲಾಯಿಸಿದರೆ ಶಿಕ್ಷಕರು, ಮಕ್ಕಳು ಮತ್ತು ಪೋಷಕರು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳು ಸಹ ತಮ್ಮ ದಿನವನ್ನು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರಾರಂಭಿಸಬೇಕಾಗಿರುವುದರಿಂದ ಅನಾನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿದ ಕೆಲವು ಶಾಲೆಗಳು, ತಾವು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಬಸ್ ಸೇವೆ ಹಿಂಪಡೆದು ಖಾಸಗಿ ವಾಹನಗಳ ಮೇಲೆ ಅವಲಂಬಿತವಾಗಿರುವುದಾಗಿ ತಿಳಿಸಿವೆ. ಈ ಸಮಸ್ಯೆ ಮಕ್ಕಳ ಮೇಲೆ ಪರೀಣಾಮ ಬೀರದಂತೆ ಬಗೆ ಹರಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.