ನವದೆಹಲಿ: ಐಎಎಸ್, ಐಪಿಎಸ್ ನೇಮಕಗಳಲ್ಲಿ 75ಶೇ.ದಷ್ಟಿರುವ ಸಮುದಾಯಗಳ ಪ್ರಾತಿನಿಧ್ಯ ಕೇವಲ 25% ದಷ್ಟು ಇದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ(ಪಿಎಂಒ)ಯು ಸಲ್ಲಿಸಿದ ವರದಿಯನ್ನು ರಾಜ್ಯಮಂತ್ರಿಗಳು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಈ ಕೆಳಗಿನ ವಿವರಗಳನ್ನು ನೀಡಬೇಕೆಂದು ಪ್ರಧಾನ ಮಂತ್ರಿಗಳಿಂದ ಕೇಳಿದ್ದರು:
(ಅ) ಅಖಿಲ ಭಾರತ ಸೇವೆಗಳಿಗೆ ಕಳೆದ ಐದು ವರ್ಷಗಳಲ್ಲಿ ಮಾಡಿರುವ ನೇಮಕಾತಿಗಳ ವರ್ಷವಾರು ವಿವರಗಳು ಮತ್ತು ಸಂಖ್ಯೆ.
(ಆ) ಕಳೆದ ಐದು ವರ್ಷಗಳಲ್ಲಿ ಅಖಿಲ ಬಾರತ ಸೇವೆಗಳಲ್ಲಿ ನೇಮಕಗೊಂಡ ಎಸ್‍ಸಿ , ಎಸ್‍ಟಿ ಮತ್ತು ಒಬಿಸಿ ವಿಭಾಗಗಳಿಗೆ ಸೇರಿದ ವ್ಯಕ್ತಿಗಳ ವರ್ಷವಾರು ಮತ್ತು ವಿಭಾಗವಾರು ಸಂಖ್ಯೆ ಮತ್ತು ವಿವರಗಳು.
ಇದಕ್ಕೆ ಉತ್ತರವಾಗಿ ಪಿಎಂಒ ರಾಜ್ಯಮಂತ್ರಿಗಳು ನೀಡಿರುವ ವಿವರಗಳ ಪ್ರಕಾರ, 2018ರಿಂದ 2022ರ 5ವರ್ಷಗಳಲ್ಲಿ ಐಎಎಸ್(ಭಾರತೀಯ ಆಡಳಿತ ಸೇವೆ), ಐಪಿಎಸ್(ಭಾರತೀಯ ಪೋಲೀಸ್ ಸೇವೆ) ಮತ್ತು ಐಎಫ್‍ಒಎಸ್(ಭಾರತೀಯ ಅರಣ್ಯ ಸೇವೆ)ಯ ಅಧಿಕಾರಿಗಳ ಒಟ್ಟು 4365 ಹುದ್ದೆಗಳಿಗೆ ನೇಮಕ ನಡೆದಿದ್ದು, ಇದರಲ್ಲಿ ಒಬಿಸಿ ಗೆ ಸೇರಿದವರ ಸಂಖ್ಯೆ 695, ಪರಿಶಿಷ್ಟ ಜಾತಿಗಳಿಗೆ ಸೇರಿದವರ ಸಂಖ್ಯೆ 334 ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಸೇರಿದವರ ಸಂಖ್ಯೆ 166, ಅಂದರೆ ಅನುಕ್ರಮವಾಗಿ 15.92%, 7.65% ಮತ್ತು 3.80%, 2011ರ ಜನಗಣತಿಯ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿಗಳ ಪ್ರಮಾಣ 41ರಿಂದ 52%, ಪರಿಶಿಷ್ಟ ಜಾತಿಗಳ ಜನಸಂಖ್ಯೆ 16.6% ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನಸಂಖ್ಯೆ 8.6%.
ಈ ಬಗ್ಗೆ ಟಿಪ್ಪಣಿ ಮಾಡುತ್ತ , ಅಖಿಲ ಭಾರತ ಸೇವೆಗಳಲ್ಲಿ ದೇಶದ ಜನಸಂಖ್ಯೆಯಲ್ಲಿ 75%ದಷ್ಟು ಇರುವ ಸಮುದಾಯಗಳಿಗೆ ಇಂತಹ ಗಾಬರಿಗೊಳಿಸುವಷ್ಟು ಕೆಳಮಟ್ದದ ಪ್ರಾತಿನಿಧ್ಯ ವ್ಯವಸ್ಥಿತ ತಾರತಮ್ಯದ ಒಂದು ಸ್ಪಷ್ಟ ಸಂಕೇತ ಎಂದು ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ. ಇದನ್ನು ಸರಿಪಡಿಸುವ ಕ್ರಮಗಳು ಅತ್ಯಗತ್ಯ ಎಂದಿರುವ ಅವರು ಇದನ್ನು ಕೇಂದ್ರ ಸರಕಾರ ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ, ವಿಶೇಷವಾಗಿ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ, ತಾನು ಎಲ್ಲರಿಗಿಂತ ಹೆಚ್ಚಾಗಿ ಒಬಿಸಿ-ಪರ ಎಂದು ಬಹಳಷ್ಟು ಮಾತನಾಡುತ್ತಿರುವಾಗ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧ ಸೂರತ್ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವ ರದ್ಧತಿಯನ್ನು ಸಮರ್ಥಿಸಿಕೊಳ್ಳಲು ಅವರು ಒಬಿಸಿ-ವಿರೋಧಿ ಎಂದು ಭರದ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲೇ , ಒಬಿಸಿ ಬಗ್ಗೆ ಆಳುವ ಪಕ್ಷದ ನಿಜವಾದ ನಿಲುವನ್ನು ಸರಕಾರವೇ ನೀಡಿರುವ ಈ ಮಾಹಿತಿ ಬಿಂಬಿಸುತ್ತಿದೆ ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.
ಕೇಂದ್ರ ಸರಕಾರ ಐಎಎಸ್ ಮತ್ತು ಐಪಿಎಸ್ ನೇರ ನೇಮಕಾತಿಗಳ ಬಗ್ಗೆ ಕೊಟ್ಟಿರುವ ವಿವರಗಳು ಹೀಗಿವೆ:
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ