ಬೆಂಗಳೂರು: ಕಳವು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ 75 ಲಕ್ಷ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಿಡದಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಅವರನ್ನು ಕರ್ನಾಟಕ ಪೊಲೀಸ್ ಇಲಾಖೆ ಗುರುವಾರ ಅಮಾನತುಗೊಳಿಸಿದೆ. ಐಜಿಪಿ (ಕೇಂದ್ರ ವ್ಯಾಪ್ತಿ) ರವಿಕಾಂತೇಗೌಡ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.
ವಶಕ್ಕೆ ಪಡೆದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪಗಳು ಹೊರಬಿದ್ದಿದ್ದು, ಆರೋಪಿಗಳ ವಿರುದ್ಧ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆದರೆ ಎಫ್‌ಐಆರ್ ದಾಖಲಾದ ನಂತರ ಆರೋಪಿ ಇನ್ಸ್‌ಪೆಕ್ಟರ್ ಶಂಕರ್ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ಬಿಡದಿ
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ | ಯಾರು ಈ 6 ಆರೋಪಿಗಳು?
2022ರಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಶಂಕರ್ ಅವರು ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಕಳ್ಳತನ ಪ್ರಕರಣದಲ್ಲಿ 75 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತರು ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಿದ್ದು, ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ಆರೋಪಿ ಇನ್ಸ್ ಪೆಕ್ಟರ್ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಅಮಾನತು ಆದೇಶ ಹೊರಡಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಶೇಷ ವಿಭಾಗ ಮಧ್ಯವರ್ತಿ ಲೋಕನಾಥ್ ಎಂಬಾತನನ್ನು ಬಂಧಿಸಿದೆ. ಘಟನೆಯ ಬಗ್ಗೆ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಲಾಗಿತ್ತು.
ವಿಡಿಯೊ ನೋಡಿ: ಸರ್ಕಾರಕ್ಕೆ ನಾವು ಕೊಡುವ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಬಳಕೆಯಾಗಬೇಕು – ಮೀನಾಕ್ಷಿ ಸುಂದರಂ Janashakthi Media