ಬೆಂಗಳೂರು: ದೇಶದಲ್ಲಿ 2014ರಲ್ಲಿ ನಿರುದ್ಯೋಗದ ಪ್ರಮಾಣವು ಶೇಕಡಾ 4.9ರಷ್ಟು ಇತ್ತು. ಆದರೆ ಕಳೆದ ಏಳು ವರ್ಷಗಳ ದೇಶದ ಬಿಜೆಪಿ ಆಡಳಿತಾವಧಿಯಲ್ಲಿ ಶೇಕಡಾ 11.8ರಷ್ಟು ತಲುಪಿದೆ. ಅಲ್ಲದೆ, ದೇಶದ ಸಾಲದ ಪ್ರಮಾಣ ರೂ.135.8 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
2014 ರಲ್ಲಿ ದೇಶದ ಒಟ್ಟು ಸಾಲ ರೂ.53.1 ಲಕ್ಷ ಕೋಟಿ ಇತ್ತು. ಬಿಜೆಪಿ ಪಕ್ಷದ ನರೇಂದ್ರ ಮೋದಿ ಅವರ ಏಳು ವರ್ಷಗಳ ದುರಾಡಳಿತದ ಫಲದಿಂದಾಗಿ ದೇಶದಲ್ಲಿ ಇಂದಿನ ಸಾಲದ ಪ್ರಮಾಣ ರೂ. 135.8 ಲಕ್ಷ ಕೋಟಿಗೆ ತಲುಪಿದೆ. ಒಂದೆಡೆ ದೇಶದ ಸಾಲ ಹೆಚ್ಚುತ್ತಿದೆ, ಇನ್ನೊಂದೆಡೆ ದೇಶ ಅಭಿವೃದ್ಧಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿದೆ. ಹಾಗಾದರೆ ಈ ಸಾಲದ ಹಣ ಯಾರ ಪಾಲಾಗುತ್ತಿದೆ? ಎಂದು ಕೇಳಿದರು.
ಕೇಂದ್ರದಲ್ಲಿ ಆಳುತ್ತಿರುವ ಬಿಜೆಪಿ ಸರಕಾರದ ಸಾಧನೆ ಶೂನ್ಯವಾಗಿದೆ. ಅವರ ಪಕ್ಷದ ಶಾಸಕರು, ಸಂಸದರು, ಸಚಿವರು ಖಾಲಿ ಡಬ್ಬಿಯನ್ನೇ ತಲೆಮೇಲಿಟ್ಟುಕೊಂಡು ಓಡಾಡುತ್ತಾ ತಾವೇನೋ ಸಾಧನೆ ಮಾಡಿದ್ದೇವೆ ಎಂದು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಪ್ರಕಟಿಸಿದ್ದಾರೆ.
ಇದನ್ನು ಓದಿ: ವಿಧ್ವಂಸದ ಎರಡು ಯಾತನಾಮಯ ವರ್ಷಗಳು
ಜನ ವಿರೋಧಿ ಆರ್ಥಿಕ ನೀತಿಗಳು, ದುರುದ್ದೇಶಿತ ಕಾನೂನುಗಳು ಹಾಗೂ ದುರಾಡಳಿತದಿಂದಾಗಿ ದೇಶದಲ್ಲಿ ಪ್ರಧಾನಿ ನರೇಂದ್ರಮೋದಿ ವರ್ಚಸ್ಸು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹತಾಶ ಪ್ರಧಾನಿಗಳು ಜನರ ತೆರಿಗೆ ಹಣ ದುರ್ಬಳಕೆ ಮಾಡಿ ಪತ್ರಿಕೆಗಳಲ್ಲಿ ಸುಳ್ಳಿನ ಕಂತೆಗಳ ಜಾಹೀರಾತು ನೀಡಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾದ ವೇಳೆ ದೇಶದ 8 ರಾಜ್ಯಗಳು ಮಾತ್ರ ವಿತ್ತೀಯ ಕೊರತೆ ಎದುರಿಸುತ್ತಿದ್ದವು, ಇಂದು ದೇಶದ ಪ್ರತಿ ರಾಜ್ಯವು ಗಂಭೀರ ಸ್ವರೂಪದ ವಿತ್ತೀಯ ಕೊರತೆಗೆ ಒಳಗಾಗಿದೆ. ಬಿಜೆಪಿಯ ಡಬ್ಬಲ್ ಎಂಜಿನ್ ಸರ್ಕಾರದ ಸಾಧನೆಯೆಂದರೆ ಕರ್ನಾಟಕ ಮೊದಲ ಬಾರಿಗೆ ವಿತ್ತೀಯ ಕೊರತೆ ಎದುರಿಸುವಂತೆ ಮಾಡಿದ್ದು. ಪ್ರಧಾನಿ ನರೇಂದ್ರಮೋದಿ ಅವರ 7 ವರ್ಷಗಳ ಆಡಳಿತದಲ್ಲಿ ಹಲವು ಸರ್ಕಾರಿ ಕಾರ್ಖಾನೆಗಳು, ಸಂಸ್ಥೆಗಳು, ಸೇವಾ ವಲಯಗಳು ಖಾಸಗಿಯವರ ಪಾಲಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿರುವುದರಿಂದ ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ದೇಶ ಹಿಂದೆಂದಿಗಿಂತಲೂ ಕನಿಷ್ಠ ಮಟ್ಟ ತಲುಪಿದೆ ಎಂದು ವಿವರಿಸಿದ್ದಾರೆ.
70 ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ. ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದು ಹಿಂದಕ್ಕೆ ಕುಸಿದು ಹೋಗುತ್ತಿದೆ. ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಇದನ್ನು ಓದಿ: ಭಾರತವನ್ನು ಅಭಿವೃದ್ಧಿಶೀಲ ಪಟ್ಟಿಯಿಂದ ಹೊರಬೀಳುವಂತೆ ಮಾಡಿದ್ದು ಮೋದಿ ಸಾಧನೆ
ರೈತ ವಿರೋಧಿ, ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ, ರೈತರ ಬದುಕು ಕಸಿದುಕೊಂಡಿದ್ದು ಕೂಡ ಪ್ರಧಾನಿಯವರ ಸಾಧನೆಯಾಗಿದೆ. ಕಳೆದ ಆರು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿಗಳು ಒಮ್ಮೆಯೂ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಿ ರೈತರ ಬೇಡಿಕೆಗಳನ್ನು ಆಲಿಸಿದ್ದಾರೆಯೇ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಬೆಲೆಯೇರಿಕೆ ದೇಶದ ಗಂಭೀರ ಸಮಸ್ಯೆಗಳಲ್ಲಿ ಒಂದು. 2014 ರಲ್ಲಿ ಸಾಮಾನ್ಯವಾಗಿ 4 ಜನರ ಕುಟುಂಬವೊಂದು ಜೀವನ ನಿರ್ವಹಣೆಗೆ ತಿಂಗಳಿಗೆ ರೂ.5,000 ಖರ್ಚು ಮಾಡುತ್ತಿದ್ದರೆ, ಇಂದು ಅದೇ ಕುಟುಂಬದ ಜೀವನ ನಿರ್ವಹಣೆಗೆ ಕನಿಷ್ಟ ರೂ.11,000 ಬೇಕಿದೆ. ಅಗತ್ಯ ವಸ್ತುಗಳು, ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿರುವುದು ಇದಕ್ಕೆ ಕಾರಣ ಬಿಜೆಪಿ ಸರಕಾರದ್ದಾಗಿದೆ ಎಂದಿದ್ದಾರೆ. ಭಾರತೀಯರ ತಲಾ ಆದಾಯ ಬಾಂಗ್ಲಾದೇಶಕ್ಕಿಂತ ಕಡಿಮೆಯಾಗಿದೆ. ಆದರೆ ಅದಾನಿ ಆಸ್ತಿ 2014 ರಲ್ಲಿ 7.1 ಬಿಲಿಯನ್ ಡಾಲರ್ ಇದ್ದದ್ದು ಈಗ 67.6 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಇಡೀ ದೇಶದ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಅದಾನಿ, ಅಂಬಾನಿಯಂತವರ ಆಸ್ತಿ ಹತ್ತಾರು ಪಟ್ಟು ಹೆಚ್ಚಾಗಲು ಹೇಗೆ ಸಾಧ್ಯ? ಎಂದು ಕೇಳಿದ್ದಾರೆ.
ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ಬುಲೆಟ್ ಟ್ರೈನ್ ಬಿಡುತ್ತೇವೆ, ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರಮೋದಿ ಅವರು ಜನರ ಬಳಿ ಇದ್ದ ಉದ್ಯೋಗವನ್ನು ಕಸಿದುಕೊಂಡಿದ್ದಲ್ಲದೇ, ಸರ್ಕಾರಿ ಸಂಸ್ಥೆಗಳನ್ನು ತಮ್ಮ ಗೆಳೆಯರಿಗೆ ಮಾರಾಟ ಮಾಡಿ, ದೇಶವನ್ನು ವಿನಾಶದ ಅಂಚಿಗೆ ತಳ್ಳಿದ್ದಾರೆ.
ಇದನ್ನು ಓದಿ: ಲಕ್ಷದ್ವೀಪದಲ್ಲಿ ಗುಜರಾತ ಮಾದರಿ
ರಾಜ್ಯದಲ್ಲಿ ನನ್ನ 5 ವರ್ಷಗಳ ಆಡಳಿತದಲ್ಲಿ ಮಾಡಿದ ಒಟ್ಟು ಸಾಲ 1.25 ಲಕ್ಷ ಕೋಟಿ. ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೇ ವರ್ಷದಲ್ಲಿ 1.41 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಮ್ಮ ಸರ್ಕಾರ ಸಾಲ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ, ಸರ್ಕಾರ ಸಾಲ ಮಾಡಿ ನೌಕರರ ಸಂಬಳ ಕೊಡುವ ದುಸ್ಥಿತಿಗೆ ತಲುಪಿದೆ.
ತಜ್ಞರ ವರದಿ ಆಧರಿಸಿ ಲಾಕ್ ಡೌನ್ ಮುಂದುವರೆಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಲಾಕ್ ಡೌನ್ ವಿಸ್ತರಣೆ ಮಾಡುವ ಸನ್ನಿವೇಶ ಎದುರಾದರೆ ಅದಕ್ಕೂ ಮೊದಲು ರಾಜ್ಯದ ಎಲ್ಲಾ ಬಿ.ಪಿ.ಎಲ್ ಕುಟುಂಬಗಳಿಗೂ ಕನಿಷ್ಠ ರೂ. 10,000 ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರ ನೋಟು ರದ್ದತಿಯಿಂದ ಕಪ್ಪು ಹಣ ಹೊರಬಂದಿಲ್ಲ, ಭ್ರಷ್ಟಾಚಾರ ಕಡಿಮೆಯಾಗಿಲ್ಲ, ನಕಲಿ ನೋಟಿನ ಚಲಾವಣೆ ನಿಂತಿಲ್ಲ, ಬದಲಾಗಿ ದೇಶ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು, ಜನರ ಕೈ ಖಾಲಿಯಾಯಿತು.
ಯುಪಿಎ ಸರ್ಕಾರ ಇದ್ದಾಗ ಜಿ.ಎಸ್.ಟಿ ಜಾರಿಗೆ ವಿರೋಧ ಮಾಡಿದ್ದ ನರೇಂದ್ರ ಮೋದಿ ಅವರು, ತಾವು ಪ್ರಧಾನಿ ಆದ ಮೇಲೆ ಜಾರಿಗೆ ತಂದರು. ಅಸಮರ್ಪಕ ಜಿ.ಎಸ್.ಟಿ ಜಾರಿಯ ಫಲವಾಗಿ ಕೈಗಾರಿಕೆಗಳು, ಉದ್ದಿಮೆಗಳು ನಷ್ಟದ ಹಾದಿಯಲ್ಲಿ ಸಾಗಿದವು. ಇಂದಿಗೂ ಜಿ.ಎಸ್.ಟಿ ಇಂದಾದ ನಷ್ಟವನ್ನು ದೇಶದ ಜನ ಭರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
ನಾವು ಕೊರೊನಾ ವಿರುದ್ಧ ಗೆದ್ದಿದ್ದೇವೆ ಎಂಬ ನರೇಂದ್ರಮೋದಿ ಅವರ ಹೇಳಿಕೆ ದೇಶದ ಇಂದಿನ ದುಸ್ಥಿತಿಗೆ ಕಾರಣ. ಪ್ರಧಾನಿಯವರ ಮಾತಿನಿಂದ ಜನ ಕೊರೊನಾ ಕಥೆ ಮುಗಿಯಿತು ಎಂದು ಭಾವಿಸಿ ಮೈಮರೆತರು. ಮೋದಿ ಅವರು ಜವಾಬ್ದಾರಿಯುತ ಪ್ರಧಾನಿಯಾಗಿ ನಡೆದುಕೊಂಡು ಎರಡನೇ ಅಲೆಯ ಬಗ್ಗೆ ಎಚ್ಚರಿಕೆ ನೀಡಿದ್ದರೆ ಇಂದು ಲಕ್ಷಾಂತರ ಜನ ಸಾಯುತ್ತಿರಲಿಲ್ಲ. ಕೊರೊನಾ 2ನೇ ಅಲೆಯಿಂದ ಜನ ಸಾಯಲು ಅಗತ್ಯ ಪ್ರಮಾಣದ ಆಕ್ಸಿಜನ್, ವೆಂಟಿಲೇಟರ್, ಆಂಬುಲೆನ್ಸ್, ಔಷಧಗಳನ್ನು ಪೂರೈಸಲು ಕೇಂದ್ರದ ಬಿಜೆಪಿ ಸರಕಾರ ವಿಫಲವಾಗಿದ್ದೇ ಕಾರಣ. ಪ್ರಧಾನಿ ಮೋದಿ ಅವರ ಸ್ವಂತ ಕ್ಷೇತ್ರದಲ್ಲಿಯೇ ಗಂಗಾ ನದಿಯಲ್ಲಿ ರಾಶಿ ರಾಶಿ ಹೆಣಗಳು ತೇಲಿಬಂದವು. ಇದನ್ನು ಕೊಲೆಗಡುಕ ಸರ್ಕಾರ ಎನ್ನದೆ ಬೇರೇನು ಹೇಳಲು ಸಾಧ್ಯ? ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.