ರೈತರ ಮೇಲೆ ಲಾಠಿ ಪ್ರಹಾರ: ಕುಪಿತ ರೈತ ಸಂಘಟನೆಗಳಿಂದ ಹೆದ್ದಾರಿ ತಡೆ

  • ಲಾಠಿ ಚಾರ್ಜ್ ವೇಳೆ ಅನೇಕ ರೈತರಿಗೆ ವಿಪರೀತ ಗಾಯ
  • ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಗೆ ರೈತ ಸಂಘಟನೆಗಳು ಕರೆ

ಹೊಸದಿಲ್ಲಿ: ಹರ್ಯಾಣದ ಕರ್ನಾಲ್ ಜಿಲ್ಲೆಯಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ   ನಡೆಸಿದ್ದನ್ನು ವಿರೋಧಿಸಿ ಶನಿವಾರ ರಾಜ್ಯದ ಅನೇಕ ಭಾಗಗಳಲ್ಲಿ ರೈತರು  ವಿವಿಧ ರಸ್ತೆಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ಮುಂಬರುವ ಪಾಲಿಕೆ ಚುನಾವಣೆಗಳ ಕುರಿತಾದ ಸಭೆ ಆಯೋಜಿಸಲಾಗಿತ್ತು. ಇದರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎನ್ನಲಾಗಿದೆ.
ಕುಪಿತ ರೈತರು ರಾಷ್ಟ್ರೀಯ ಹೆದ್ದಾರಿ 3 ಮತ್ತು ದಿಲ್ಲಿ-ಅಮೃತಸರ ಹೆದ್ದಾರಿ ಸೇರಿದಂತೆ ಅನೇಕ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳಿಗೆ ತಡೆಯೊಡ್ಡಿದ್ದರಿಂದ ಭಾರಿ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅನೇಕ ಟೋಲ್ ಪ್ಲಾಜಾಗಳಲ್ಲಿ ರೈತರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಸಂಜೆ ಐದು ಗಂಟೆಯವರೆಗೂ ರಸ್ತೆ ತಡೆ ಮುಂದುವರಿಸುವುದಾಗಿ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದರು.

‘ಇಂದಿನ ಘಟನೆಯು ಹರ್ಯಾಣದ ಪ್ರತಿ ಜನರಿಗೂ ಗಾಸಿಯುಂಟುಮಾಡಿದೆ. ಬಿಜೆಪಿ ಸರ್ಕಾರವು ರಕ್ತಪಾತ ಮಾಡುತ್ತಿದೆ. ಈ ಘಟನೆಯನ್ನು ಜನರು ಸುಲಭವಾಗಿ ಮರೆಯುವುದಿಲ್ಲ.

– ರಣದೀಪ್ ಸುರ್ಜೇವಾಲ,  ಕಾಂಗ್ರೆಸ್ ಮುಖ್ಯ ವಕ್ತಾರ  

ಬಿದಿರಿನಿಂದ ಮಾಡಿದ ಹಾಸಿಗೆಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಿದ್ದ ರೈತರು ಅದರ ಮೇಲೆ ಮಲಗಿ, ಕುಳಿತು ಪ್ರತಿಭಟನೆ ನಡೆಸಿದರು. ಕೆಲವರು ರಸ್ತೆಗಳಲ್ಲಿ ಗುಂಪಾಗಿ ಕುಳಿತಿದ್ದರು. ಇದರಿಂದ ಮೂರು ನಾಲ್ಕು ಕಿಮೀ ದೂರವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಲಾಠಿ ಚಾರ್ಜ್ ವೇಳೆ ಅನೇಕ ರೈತರಿಗೆ ವಿಪರೀತ ಗಾಯಗಳಾಗಿದ್ದು, ಅವರ ಬಟ್ಟೆಗಳೆಲ್ಲ ರಕ್ತದಿಂದ ತೋಯ್ದುಹೋಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರೈತರ ಮೇಲೆ ದೌರ್ಜನ್ಯ ಪ್ರದರ್ಶಿಸಿರುವ ಪೊಲೀಸರು, ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.   ಕೃಷಿ ಕಾಯ್ದೆ ವಿರುದ್ಧ ರೈತರ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

https://twitter.com/i/status/1431580472447012874

ಶನಿವಾರ ಆಯೋಜಿಸಿದ್ದ ಸಭೆ ವಿರುದ್ಧ ಕರ್ನಾಲ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಹೆದ್ದಾರಿಗಳನ್ನು ತಡೆದಿದ್ದರು. ಆಗ ಪೊಲೀಸರು ಅವರನ್ನು ಚೆದುರಿಸಲು ಪೊಲೀಸರು ಬಲ ಪ್ರಯೋಗಿಸಿದ್ದಾರೆ. ಬಸ್ತಾರಾ ಟೋಲ್ ಪ್ಲಾಜಾ ಬಳಿ ತೀವ್ರ ಸಂಘರ್ಷ ನಡೆದಿದೆ. ಅನೇಕರಿಗೆ ಗಾಯಗಳಾಗಿವೆ. ಇದರಿಂದ ಆಕ್ರೋಶಗೊಂಡ ರೈತ ಸಂಘಟನೆಗಳು ರಾಜ್ಯಾದ್ಯಂತ ರಸ್ತೆ ತಡೆ ಪ್ರತಿಭಟನೆಗೆ ಕರೆ ನೀಡಿವೆ.
ಸಭೆಗೆ ಆಗಮಿಸಿದ್ದ ಬಿಜೆಪಿಯ ಹಿರಿಯ ನಾಯಕರಿಗೆ ರೈತರು ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದ್ದರು. ಆದರೆ ಭಾರಿ ಬಿಗಿ ಭದ್ರತೆಯ ಕಾರಣ ಅವರಿಗೆ ವಾಹನಗಳನ್ನು ಅಡ್ಡಗಟ್ಟಲು ಸಾಧ್ಯವಾಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ನೀಡಿದ್ದ ತಡೆಯನ್ನು ತೆರವುಗೊಳಿಸಲು ರೈತರು ನಿರಾಕರಿಸಿದ್ದರಿಂದ ಪೊಲೀಸರು ಬಲಪ್ರಯೋಗ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *