ನವದೆಹಲಿ: ದಿನದಿಂದ ದಿನಕ್ಕೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದರಿಂದ ಬಹುತೇಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಿರುವಾಗ, 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲಕಿಯೊಬ್ಬಳು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ‘ಸಂಕಷ್ಟ’ದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಬಾಲಕಿ ಕೃತಿ ದುಬೆ ಈ ಪತ್ರ ಬರೆದಿರುವ ಬಾಲಕಿ, ಪತ್ರದಲ್ಲಿ ‘ನನ್ನ ಹೆಸರು ಕೃತಿ ದುಬೆ. ನಾನು 1 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದಿರಿ. ನನ್ನ ಪೆನ್ಸಿಲ್ ಮತ್ತು ರಬ್ಬರ್ (ಎರೇಸರ್) ಸಹ ದುಬಾರಿಯಾಗಿದೆ ಮತ್ತು ಮ್ಯಾಗಿಯ ಬೆಲೆಯೂ ಹೆಚ್ಚಾಗಿದೆ. ಈಗ ನನ್ನ ತಾಯಿ ಪೆನ್ಸಿಲ್ ಕೇಳಿದ್ದಕ್ಕಾಗಿ ನನ್ನನ್ನು ಹೊಡೆಯುತ್ತಾರೆ. ನಾನೇನು ಮಾಡಲಿ? ಶಾಲೆಯಲ್ಲಿ ಇತರ ಮಕ್ಕಳು ನನ್ನ ಪೆನ್ಸಿಲ್‌ಅನ್ನು ಕದಿಯುತ್ತಾರೆ’ ಎಂದು ಬಾಲಕಿ ದೂರಿದ್ದಾಳೆ. ಹಿಂದಿಯಲ್ಲಿ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಕೀಲರಾಗಿರುವ ಬಾಲಕಿಯ ತಂದೆ ವಿಶಾಲ್ ದುಬೆ, ಇದು ನನ್ನ ಮಗಳ ‘ಮನ್ ಕಿ ಬಾತ್’ ಆಗಿದೆ. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ತಾಯಿ ಅವಳನ್ನು ಗದರಿಸಿದಾಗ ಅವಳು ಸಿಟ್ಟಾಗಿ ಈ ರೀತಿಯ ಪತ್ರ ಬರೆದಿದ್ದಾಳೆ ಎಂದಿದ್ದಾರೆ.
ಈ ಪತ್ರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೋಡಿದಾಗಲೇ ನನ್ನ ಗಮನಕ್ಕೆ ಬಂದಿದೆ. ನಾನು ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಸಿದ್ಧನಿದ್ದೇನೆ ಮತ್ತು ಆಕೆಯ ಪತ್ರವು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಛಿಬ್ರಾಮೌ ಎಸ್‌ಡಿಎಂ ಅಶೋಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.