ಬೆಂಗಳೂರು : ಪೊಲಿಸರ ಭ್ರಷ್ಟಾಚಾರದ ಬಗ್ಗೆ ಗೃಹ ಸಚಿವರು ನೀಡಿದ “ನೀವು ಪೊಲೀಸರು ನಾಯಿಗಳಿದ್ದಂತೆ” ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಹಣವಿಲ್ಲದೇ ಯಾವ ಗೃಹ ಸಚಿವರು ವರ್ಗಾವಣೆ ಮಾಡಿದ್ದಾರೆ? ಪೊಲೀಸರಿಂದ ಎಂಜಿಲು ಪಡೆಯುವರ ಬಗ್ಗೆಯೂ ಗೃಹ ಸಚಿವರು ಮಾತನಾಡಲಿ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದರ ಮೊದಲ ಭಾಗವಾಗಿ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ್ ಈ ಕುರಿತು ಬಹಿರಂಗ ಪ್ರಸ್ತಾಪ ಮಾಡಿದ್ದಾರೆ ಅಷ್ಟೆ ಅಲ್ಲದೆ ಕೋಲಾರದಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ.
ಪೊಲೀಸರನ್ನು ಎಂಜಿಲು ಕಾಸು ತಿನ್ನುವ ನಾಯಿಗಳು ಎಂದು ಗೃಹ ಸಚಿವರು ವಾಖ್ಯಾನಿಸಿದ್ದಾರೆ. ಅದೇ ರೀತಿ ಪೊಲೀಸರಿಂದಲೂ ಎಂಜಿಲು ಕಾಸು ತಿನ್ನುವ ದಲ್ಲಾಳಿಗಳ ಬಗ್ಗೆ ಗೃಹ ಸಚಿವರು ಮಾತನಾಡಲಿ, ಯಾವ ವರ್ಗಾವಣೆ ಹಣವಿಲ್ಲದೇ ಮಾಡುತ್ತಿದ್ದಾರೆ ? ವರ್ಗಾವಣೆ ಎಂಜಿಲು ದಂಧೆ ಗೃಹ ಸಚಿವರಿಗೆ ಗೊತ್ತಿಲ್ಲವೇ? ಪ್ರತಿಷ್ಠಿತ ಠಾಣೆಗಳಿಗೆ ಇಂತಿಷ್ಟು ಕೊಟ್ಟೆ ಪೊಲೀಸ್ ಅಧಿಕಾರಿಗಳು ವರ್ಗಾವಣೆಯಾಗಬೇಕು ಎಂದು ಮಟ್ಟಣ್ಣನವರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಶಾಸಕರು, ಇಲ್ಲದಿದ್ದರೆ ಸಚಿವರು, ಇಬ್ಬರೂ ಇಲ್ಲ ಎಂದರೆ ಕೇಂದ್ರ ಕಚೇರಿ, ಇದರ ಜತೆಗೆ ದಲ್ಲಾಳಿಗಳು, ಈ ಬಗ್ಗೆಯೂ ಗೃಹ ಸಚಿವರು ಮಾತನಾಡಬೇಕು. ಹಣವಿಲ್ಲದೇ ವರ್ಗಾವಣೆ ಎಂದರೆ ಅದು ಶಿಕ್ಷೆ. ಈ ಬಗ್ಗೆಯೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಲಿ ಎಂದು ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಗಿರಿಶ್ ಮಟ್ಟೆಣ್ಣನವರ್ ಸುದ್ದಿ ಸಂಸ್ಥೆಗಳಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ.
ಕೋಲಾರದಲ್ಲಿ ಪ್ರತಿಭಟನೆ : ಪೊಲೀಸರನ್ನು ನಾಯಿಗಳಿಗೆ ಹೊಲಿಕೆ ಮಾಡಿರುವ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ರೈತ ಸಂಘ ದಿಂದ ಗಾಂಧಿ ಪ್ರತಿಮೆ ಮುಂದೆ ಸಚಿವರ ಭೂತದಹನ ಮಾಡುವ ಮುಖಾಂತರ ಒತ್ತಾಯಿಸಲಾಗಿದೆ.
ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಕೆಲಸ ಮಾಡಬೇಕಾದ ಜನ ಪ್ರತಿನಿಧಿಗಳು ಅಧಿಕಾರಿಗಳನ್ನು ಸಾರ್ವಜನಿಕವಾಗಿ ಮಾನ ಮರ್ಯಾದೆ ಕಳಿಯುವ ಮುಖಾಂತರ ಪ್ರಜಾ ಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆ. ರಾಜ್ಯದ ಜವಾಬ್ದಾರಿ ಸ್ಥಾನದಲ್ಲಿರುವ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ರವರು ಸಾರ್ವಜನಿಕವಾಗಿ ತಮ್ಮ ಎಲುಬಿಲ್ಲದೆ ನಾಲಿಗೆಯನ್ನು ಪೊಲೀಸ್ ಇಲಾಖೆ ಮೇಲೆ ತೋರಿಸುವ ಮುಖಾಂತರ ಪೊಲೀಸರು ಎಂಜಲು ನಾಯಿಗಳು ಎಂದು ತಮ್ಮ ಸಚಿವಸ್ಥಾನದ ಘನತೆಯನ್ನು ಕಳೆದುಕೊಳ್ಳುವ ಜೊತೆಗೆ ದಿನದ 24 ಗಂಟೆ ಸಾರ್ವಜನಿಕರಿಗಾಗಿ ದುಡಿಯುವ ಪೊಲೀಸರನ್ನು ಮಾನಸಿಕವಾಗಿ ಕುಗ್ಗಿಸುವಂತಾಗಿದೆ ಎಂದು ಗೃಹ ಸಚಿವರ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.