ಹಿಂದುತ್ವದ ಗುರುಕುಲ (ವಿಶ್ವವಿದ್ಯಾಲಯ)ವಾದ ಆರೆಸ್ಸೆಸ್ ಸುಳ್ಳು ಹೇಳುವ, ಇತಿಹಾಸವನ್ನು ತಿರುಚಿ ಹೊಸ ಸುಳ್ಳು ಇತಿಹಾಸವನ್ನು ನಿರ್ಮಿಸುವ ಪಡೆಗಳನ್ನು ತರಬೇತುಗೊಳಿಸುವಲ್ಲಿ ನಿಸ್ಸೀಮವಾದುದು. ಇದಕ್ಕೆ ಇತ್ತೀಚಿನ ಪುರಾವೆಯೆಂದರೆ, ತುರ್ತುಪರಿಸ್ಥಿತಿಯ 50ನೇ ವಾರ್ಷಿಕ ದಿನದಂದು ಕಂಡಕಂಡವರೆಲ್ಲಾ ತುರ್ತುಪರಿಸ್ಥಿತಿಯನ್ನು ಆರೆಸ್ಸೆಸ್ ಎಷ್ಟೆಲ್ಲಾ ದ್ವೇಷಿಸಿತ್ತು, ಅದರ ಪಡೆಗಳು ಎಷ್ಟು ಶೌರ್ಯದಿಂದ ಇಂದಿರಾಗಾಂಧಿಯವರ ಸರ್ವಾಧಿಕಾರವನ್ನು ಎದುರಿಸಿದ್ದರು, ತುರ್ತುಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಎಷ್ಟೆಲ್ಲಾ ತ್ಯಾಗ, ಬಲಿದಾನ ಮಾಡಿದ್ದರು ಎಂಬುದಾಗಿ ಈಗ ನಮಗೆ ಪಾಠ ಮಾಡುತ್ತಾರೆ.!
-ಶಂಸುಲ್ ಇಸ್ಲಾಂ
ಆರೆಸ್ಸೆಸ್ ನ ಆಂಗ್ಲ ಪತ್ರಿಕೆ ಆರ್ಗನೖಸರ್ ನ ಇತ್ತೀಚಿನ ಆವೃತ್ತಿ (24 ಜೂನ್ 2025)ಯಲ್ಲಿ ಪ್ರದಾನ ಮಂತ್ರಿಗಳನ್ನು ತುರ್ತುಪರಿಸ್ಥಿತಿ ವಿರೋಧಿ ಆಂದೋಲನದ ಏಕಮೇವ ರೂಪಕವಾಗಿ ಬಿಂಬಿಸುತ್ತಾ “ಸಾರ್ವಜನಿಕ ಸ್ಮೃತಿ ಯಲ್ಲಿ ತುರ್ತುಪರಿಸ್ಥಿತಿ ಕಲಿಸಿದ ಪಾಠ ಆಳವಾಗಿ ಇಳಿದಿದೆ. ಅದೊಂದು ಇತಿಹಾಸದ ಅಧ್ಯಾಯ ಮಾತ್ರವಲ್ಲ, ಎಚ್ಚರಿಕೆ ಕೂಡಾ ಆಗಿದೆ. ನರೇಂದ್ರ ಮೋದಿಯವರಿಗೆ ಅದೊಂದು ಆಗಿಹೋದ ಘಟನೆ ಅಲ್ಲ. ಅವರ ಜೀವನ ಪ್ರಯಾಣದ ಭಾಗವೇ ಆಗಿದೆ. ಪ್ರದಾನ ಮಂತ್ರಿಗಳಾಗಿ ಅವರು ಹಲವು ಬಾರಿ ದೇಶವನ್ನು ಆ ಕರಾಳ ದಿನಗಳ ಬಗ್ಗೆ ಎಚ್ಚರಿಸಿದ್ದಾರೆ. ಅದು ಮುಕ್ತ ಆಲೋಚನೆ, ಕಲೆ ಮತ್ತು ಅಭಿವ್ಯಕ್ತಿಯ ದಮನವಾಗಿತ್ತು. ಆ ಕಾಲ ಬರೀ ಗಾಯಗಳನ್ನು ಉಳಿಸಿಲ್ಲ ಬದಲು ಘೋರ ನೆನಪುಗಳನ್ನು ಉಳಿಸಿದೆ. ಸ್ವಾತಂತ್ರ್ಯ ನಾವು ಗಳಿಸಿದ್ದೇ ವಿನಃ ಉಡುಗೊರೆಯಾಗಿ ಸ್ವೀಕರಿಸಿದ್ಧಲ್ಲ ಎಂಬ ಪಾಠವನ್ನು ತುರ್ತುಪರಿಸ್ಥಿತಿ ಕಲಿಸಿದೆ.” ಮುಂತಾಗಿ ಹೇಳುತ್ತದೆ.
ಮೊದಲನೆಯದಾಗಿ, ಆರೆಸ್ಸೆಸ್-ಬಿಜೆಪಿ ಆಡಳಿತಗಾರರು ಹಿಂದಿನಿಂದಲೂ ಮತ್ತು ಈಗ ಕೂಡ ಉದಾರ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ನಿಷ್ಟರಾಗಿಯೇ ಇದ್ದೆವೆನ್ನುವ ಅವರ ಹೇಳಿಕೆಯನ್ನು ಪರಿಶೀಲಿಸೋಣ.
ಇದನ್ನೂ ಓದಿ: ಜುಲೈ 3 ರಿಂದ ರಾಜ್ಯದಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಪ್ರಮುಖ ಆರೆಸ್ಸೆಸ್ ಸಿದ್ಧಾಂತವಾದಿಯಾದ, ದ್ವೇಷಗುರು ಎಂತಲೂ ಕರೆಯಿಸಿಕೊಳ್ಳುತ್ತಿದ್ದ (ಪ್ರದಾನ ಮಂತ್ರಿಗಳು ತಮ್ಮನ್ನು ರಾಜಕೀಯ ನಾಯಕನನ್ನಾಗಿ ರೂಪಿಸಿದ ಗುರು ಎಂದು ಹೇಳಿಕೊಳ್ಳುವ) ಎಂ ಎಸ್ ಗೋಲ್ವಾಲ್ಕರ್ ರು 1940ರಲ್ಲಿ 1350 ಜನ ಪ್ರಮುಖ ಆರೆಸ್ಸೆಸ್ ಕಾಡರ್ ಗಳನ್ನುದ್ದೇಶಿಸಿ ಹೇಳಿದ್ದು ಹೀಗೆ “ಏಕ ಧ್ವಜ, ಏಕನಾಯಕ, ಏಕತತ್ವದಿಂದ ಪ್ರೇರಿತವಾದ ಆರೆಸ್ಸೆಸ್ ಈ ಮಹಾನ್ ದೇಶದ ಮೂಲೆಮೂಲೆಯಲ್ಲೂ ಹಿಂದುತ್ವದ ಕಿಡಿಯನ್ನು ಹೊತ್ತಿಸುತ್ತಿದೆ”
ನಿರಂಕುಶ ಪ್ರಭುತ್ವದ ಬಗ್ಗೆ ಇಂಥಾ ತಾತ್ವಿಕ ಒಲವು ಇರಿಸಿಕೊಂಡ ಆರೆಸ್ಸೆಸ್ ಅಧಿಕಾರ ಹಂಚಿಕೆಯನ್ನು ದ್ವೇಷಿಸುತ್ತಿತ್ತು. ಅದರ ಸಂಯುಕ್ತ ವ್ಯವಸ್ಥೆ ವಿರೋಧಿ ನಿಲುವೇ ಇದನ್ನು ಸ್ಪಷ್ಟಪಡಿಸುತ್ತದೆ. ಯಾಕೆಂದರೆ ಭಾರತದ ಸಂವಿಧಾನ, ಭಾರತದ ರಾಜ್ಯವ್ಯವಸ್ಥೆಯ ಮೂಲಧಾತುವೇ ಸಂಯುಕ್ತ ವ್ಯವಸ್ಥೆ. ಇದೇ ಗೋಲ್ವಲ್ಕರ್ 1961ರಲ್ಲಿ ಹೀಗೆಂದು ಘೋಷಿಸುತ್ತಾರೆ
“ಈಗಿನ ಸಂಯುಕ್ತ ವ್ಯವಸ್ಥೆ ಪ್ರತ್ಯೇಕತಾವಾದವನ್ನು ಹುಟ್ಟು ಹಾಕುತ್ತದೆ. ಮಾತ್ರವಲ್ಲ ಅದನ್ನು ಪೋಷಿಸಿ ಬೆಳಸತ್ತದೆ ಕೂಡಾ. ಹಾಗಾಗಿ ಅದನ್ನು ಬೇರುಸಮೇತ ಕಿತ್ತೊಗೆಯಬೇಕು. ಸಂವಿಧಾನವನ್ನು ಶುದ್ಧೀಕರಿಸಬೇಕು, ಏಕೀಕೃತ ಸರ್ಕಾರವನ್ನು ಸ್ಥಾಪಿಸಬೇಕು”
ತುರ್ತುಪರಿಸ್ಥಿತಿಗೆ ಸಂಬಂಧಿಸಿ ಆರೆಸ್ಸೆಸ್ ನ ಹೇಳಿಕೆ (ಆರೆಸ್ಸೆಸ್ ತುರ್ತುಪರಿಸ್ಥಿತಿಯನ್ನು ವಿರೋಧಿಸಿತ್ತು ಎಂಬುದು )ಯನ್ನು ಸಮಕಾಲೀನ ಆಖ್ಯಾನಗಳ ಮತ್ತು ಆರೆಸ್ಸೆಸ್ ದಾಖಲೆಗಳ ಮೂಲಕ ಪರಿಶೀಲಿಸಬೇಕು. ಈ ಸಂಬಂಧ ಎರೆಡು ಆಖ್ಯಾನಗಳು ಪ್ರಮುಖವಾದವು. ಒಂದು ಭಾರತದ ಹಿರಿಯ ಅನುಭವಿ ಪತ್ರಕರ್ತ, ಚಿಂತಕ ಪ್ರಭಾಶ್ ಜೋಶಿಯವರದು. ಇನ್ನೊಂದು ಗುಪ್ತಚರ ಇಲಾಖೆಯ(Intelligence beauro) ಮಾಜಿ ಮುಖ್ಯಸ್ಥ ಟಿ ವಿ ರಾಜೇಶ್ವರ್ ಅವರದು. ರಾಜೇಶ್ವರ್ ತುರ್ತುಪರಿಸ್ಥಿತಿ ಕಾಲದಲ್ಲಿ ಐಬಿ ಯ ಡೆಪ್ಯುಟಿ ಚೀಫ್ ಆಗಿದ್ದವರು.

ಇಬ್ಬರೂ ತುರ್ತುಪರಿಸ್ಥಿತಿ (ಭಯೋತ್ಪಾದಕ ಪ್ರಭುತ್ವ) ಕಾಲದ ವಿದ್ಯಮಾನಗಳನ್ನು ವಿವರಿಸುತ್ತಾ ಆರೆಸ್ಸೆಸ್ ಇಂದಿರಾಗಾಂಧಿಯವರ ದಮನಕಾರಿ ಆಳ್ವಿಕೆಗೆ ಶರಣಾಗತವಾಗಿದ್ದು, ಇಂದಿರಾರ ಮಗ ಸಂಜಯ್ ಗಾಂಧಿಯ 20 ಅಂಶದ ಭಯಂಕರ ಕ್ರೂರ ಕಾರ್ಯಕ್ರಮವನ್ನು ಅನುಮೋದಿಸಿದ್ದು ಎಲ್ಲವನ್ನೂ ವಿಶದವಾಗಿ ಬಿಚ್ಚಿಡುತ್ತಾರೆ. ತಪ್ಪೊಪ್ಪಿಗೆ ಪತ್ರ ಬರೆದು ಆರೆಸ್ಸೆಸ್ ನ ಬಹುದೊಡ್ಡ ಪಡೆ ಸೆರೆಮನೆಯಿಂದ ಹೊರಬರುತ್ತದೆ. ತುರ್ತು ಪರಿಸ್ಥಿತಿ ಯ 25ನೇ ವಾರ್ಷಿಕ ದಿನದಂದು ಪ್ರಭಾಶ್ ಜೋಶಿಯವರು ತೆಹೆಲ್ಕಾ ಪತ್ರಿಕೆಗೆ ಬರೆಯುತ್ತಾರೆ.
ಅವರ ಪ್ರಕಾರ ತುರ್ತು ಪರಿಸ್ಥಿತಿಯ ಕಾಲದಲ್ಲೂ ಆರೆಸ್ಸೆಸ್ ತುರ್ತು ಪರಿಸ್ಥಿತಿ ವಿರೋಧಿ ಆಂದೋಲನವನ್ನು ಸೇರುವ ಬಗ್ಗೆ ಅಪಾರ ಅನುಮಾನ, ಅಪನಂಬಿಕೆಗಳು ಇದ್ದವು. ಅವರು ಹೀಗೆ ಮುಂದುವರೆಸುತ್ತಾರೆ, “ಆಗಿನ ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಸಂಜಯ್ ಗಾಂಧಿಯ ಕುಖ್ಯಾತ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಲು ಸಹಾಯ ಮಾಡುವುದಾಗಿ ಇಂದಿರಾಗಾಂಧಿಗೆ ಪತ್ರ ಬರೆಯುತ್ತಾರೆ. ಇದು ಆರೆಸ್ಸೆಸ್ ನ ನಿಜವಾದ ಲಕ್ಷಣ. ಆರೆಸ್ಸೆಸ್ ನ ಈ ಗುಣವನ್ನು ಯಾರಾದರೂ ಸುಲಭವಾಗಿ ಗುರುತಿಸಬಹುದು. ತುರ್ತು ಪರಿಸ್ಥಿತಿ ಯ ಕಾಲದಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ಜನರು ಸೆರೆಮನೆಗಳಿಂದ ಹೊರಬಂದು ತಪ್ಪೊಪ್ಪಿಗೆ ಬರೆದುಕೊಡುತ್ತಾರೆ.
ಹೀಗೆ ಮಾಡುವವರಲ್ಲಿ ಆರೆಸ್ಸೆಸ್ ನವರೇ ಮೊದಲಿಗರು. ಅವರ ನಾಯಕರು ಮಾತ್ರ ಸೆರೆಮನೆಯಲ್ಲಿ ಉಳಿದರು. ಅಟಲ್ ಬಿಹಾರಿ ವಾಜಪೇಯಿ(ಹೆಚ್ಚಿನ ಸಮಯ ಆಸ್ಪತ್ರೆಯಲ್ಲೇ ಕಳೆದರು), ಎಲ್ ಕೆ ಅದ್ವಾನಿ, ಅರುಣ್ ಜೖಟ್ಲಿ ಕೂಡಾ. ಆದರೆ ಆರ್ ಎಸ್ ಎಸ್ ಎಂದೂ ತುರ್ತುಪರಿಸ್ಥಿತಿ ವಿರೋಧಿ ಆಗಿರಲಿಲ್ಲ. ಆದರೂ ಅದು ಯಾಕೆ ಅದರ ಸ್ಮರಣೆಯನ್ನು ತನ್ನದಾಗಿಸಿಕೊಳ್ಳುತ್ತದೆ? ಪ್ರಭಾಶ್ ಜೋಶಿ ಹೇಳುತ್ತಾರೆ, “ಅವರು ಎಂದೂ ಹೋರಾಟಗಾರರಲ್ಲ. ಹೋರಾಟದಲ್ಲಿ ಎಂದೂ ಆಸ್ಥೆ ತೋರಿದವರಲ್ಲ. ಮೂಲದಲ್ಲೇ ಹೊಂದಾಣಿಕೆ ಮಾಡಿಕೊಳ್ಳುವವರು. ಎಂದೂ ಪ್ರಾಮಾಣಿಕವಾಗಿ ಸರ್ಕಾರದ ವಿರುದ್ಧ ಇರುವವರಲ್ಲ.”.
ಉತ್ತರ ಪ್ರದೇಶ ಮತ್ತು ಸಿಕ್ಕಿಂ ಗಳಲ್ಲಿ ರಾಜ್ಯಪಾಲರಾಗಿದ್ದ ಟಿ ವಿ ರಾಜೇಶ್ವರ್ ಬರೆದ ಪುಸ್ತಕ “ಭಾರತ: ಸಂದಿಗ್ಧದ ವರ್ಷಗಳು’ ( India:The crucial years)ದಲ್ಲಿ ಈ ವಿಚಾರವನ್ನು ಒತ್ತಿ ಹೇಳುತ್ತಾರೆ. “ಆರ್ ಎಸ್ ಎಸ್ ನವರು ತುರ್ತು ಪರಿಸ್ಥಿತಿಯ ಪರವಾಗಿಯೇ ಇದ್ದರು ಮಾತ್ರವಲ್ಲ ಇಂದಿರಾಗಾಂಧಿ ಅಲ್ಲದೆ ಅವರ ಮಗ ಸಂಜಯ್ ಗಾಂಧಿ ಜೊತೆಗೂ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತಿದ್ದರು. ದೇವರಸ್ ಒಳಗೊಳಗೇ ಕಳ್ಳತನದಲ್ಲಿ ಮಾಡಿದ ಕೆಲಸವನ್ನು ಕರನ್ ಥಾಪರ್ ಜೊತೆಗಿನ ಸಂದರ್ಶನವೊಂದರಲ್ಲಿ ರಾಜೇಶ್ವರ್ ಬಹಿರಂಗಗೊಳಿಸುತ್ತಾರೆ.
“ಒಳಗಿಂದೊಳಗೇ ಪ್ರದಾನಮಂತ್ರಿಗಳ ಮನೆಗೆ ಸಂಪರ್ಕ ಸಾಧಿಸಿದ್ದಲ್ಲದೆ ಅವರು ದೇಶವನ್ನು ಶಿಸ್ತಿಗೆ ತರಲು ಅಳವಡಿಸಿದ ಎಲ್ಲಾ ನೀತಿಗಳನ್ನು ಬಲವಾಗಿ ಬೆಂಬಲಿಸಿದ್ದೂ ಅಲ್ಲದೆ ಇಂದಿರಾಗಾಂಧಿ ಮತ್ತು ಸಂಜಯ್ ಗಾಂಧಿಯವರನ್ನು ಭೇಟಿಯಾಗ ಬಯಸಿದ್ದರು. ಆದರೆ ಇಂದಿರಾಗಾಂಧಿ ಆಸ್ಪದ ಕೊಡಲಿಲ್ಲ. ”
ರಾಜೇಶ್ವರ್ ಅವರ ಪುಸ್ತಕದ ಪ್ರಕಾರ ” ಸಂಜಯ್ ಗಾಂಧಿ ಬಲವಂತವಾಗಿ ಅದರಲ್ಲೂ ಮುಸಲ್ಮಾನರ ಮೇಲೆ ಹೇರುತ್ತಿದ್ದ ಸಂತಾನ ನಿಯಂತ್ರಣ ಕಾರ್ಯಕ್ರಮಕ್ಕೆ ಅವರ ಸಂಪೂರ್ಣ ಬೆಂಬಲ ಇತ್ತು.ಅವರು ಇನ್ನೂ ಒಂದು ವಿಚಾರವನ್ನು ಹಂಚಿಕೊಳ್ಳುತ್ತಾರೆ “ಸಂಘ(ಆರ್ ಎಸ್ ಎಸ್ ) ತುರ್ತು ಪರಿಸ್ಥಿತಿ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತನ್ನ ಬೆಂಬಲ ಕೊಟ್ಟಿತ್ತು. ಕುತೂಹಲಕರವಾದ್ದು ಏನೆಂದರೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಹೇಳುವಂತೆ ತುರ್ತು ಪರಿಸ್ಥಿತಿಯ ಅವಧಿಯಲ್ಲೇ ಹೆಚ್ಚಿನ ಹಿರಿಯ ಆರೆಸ್ಸೆಸ್ ನಾಯಕರು ವಿರೋಧಿ ಹೋರಾಟಕ್ಕೆ ದ್ರೋಹ ಬಗೆದಿದ್ದರು.
ಸಮಕಾಲೀನ ಆರ್ ಎಸ್ ಎಸ್ ದಾಖಲೆಗಳೇ ಪ್ರಭಾಶ್ ಮತ್ತು ರಾಜೇಶ್ವರ್ ಹೇಳುವುದನ್ನು ಪ್ರಮಾಣೀಕರಿಸುತ್ತವೆ. ತುರ್ತು ಪರಿಸ್ಥಿತಿ ಜಾರಿಯಾಗಿ ಎರಡು ತಿಂಗಳೊಳಗೇ ಆರ್ ಎಸ್ ಎಸ್ ನ ಪ್ರಮುಖರಲ್ಲಿ ಮೂರನೆಯವರಾದ ಮಧುಕರ್ ದತ್ತಾತ್ರೇಯ ದೇವರಸ್ ಇಂದಿರಾ ಗಾಂಧಿಗೆ ಮೊದಲ ಪತ್ರ ಬರೆಯುತ್ತಾರೆ. ಅದು ಪ್ರಭುತ್ವದ ಭಯೋತ್ಪಾದನೆ ಹುಚ್ಚಾಪಟ್ಟೆ ಏರಿದ ಸಮಯ. 22 ಆಗಸ್ಟ್ 1975ರಂದು ಅವರು ಬರೆದ ಪತ್ರ ಇಂದಿರಾಗಾಂಧಿಯವರನ್ನು ಈ ರೀತಿ ಹೊಗಳುತ್ತಾ ಪ್ರಾರಂಭಗೊಳ್ಳುತ್ತದೆ.
” 15 ಆಗಸ್ಟ್ 1975ರಂದು ಕೆಂಪು ಕೋಟೆಯಿಂದ ತಾವು ದೇಶವನ್ನು ಕುರಿತು ಮಾಡಿದ ಭಾಷಣವನ್ನು ಯರವಾಡಾ ಜೖಲಿನಲ್ಲಿ ರೇಡಿಯೋ ಮೂಲಕ ಗಮನವಿಟ್ಟು ಆಲಿಸಿದೆ. ನಿಮ್ಮ ಮಾತುಗಳು ಸಕಾಲಿಕ ಮತ್ತು ಸಮತೋಲಿತವಾದವು. ಆ ಕಾರಣಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ”
ಇಂದಿರಾ ಗಾಂಧಿ ಈ ಪತ್ರಕ್ಕೆ ಪ್ರತಿಕ್ರಿಯಿಸಲಿಲ್ಲ. ದೇವರಸ್ ಇನ್ನೊಂದು ಪತ್ರವನ್ನು 10 ನವಂಬರ್ 1975ರಂದು ಬರೆದರು. ಅಲಹಾಬಾದ್ ಉನ್ನತ ನ್ಯಾಯಾಲಯ ಇಂದಿರಾಗಾಂಧಿ ಗೆ ವಿಧಿಸಿದ್ದ ಚುನಾವಣೆಯಲ್ಲಿ ಭಾಗವಹಿಸಲು ಅನರ್ಹಗೊಳಿಸಿದ ಶಿಕ್ಷೆಯನ್ನು ಪರಮೋಚ್ಛ ನ್ಯಾಯಾಲಯ ಖುಲಾಸೆ ಮಾಡಿತ್ತು. ಆ ತೀರ್ಪಿಗೆ ಇಂದಿರಾರವರನ್ನು ಅಭಿನಂದಿಸುತ್ತಾ ಪತ್ರವನ್ನು ಪ್ರಾರಂಭಿಸುತ್ತಾರೆ ದೇವರಸ್.
“ಎಲ್ಲಾ ಐದು ನ್ಯಾಯಮೂರ್ತಿಗಳು ತಾವು ನಡೆಸಿದ ಚುನಾವಣೆ ನ್ಯಾಯಯುತವಾದದ್ದೆಂದು ತೀರ್ಪು ಕೊಟ್ಟಿದ್ದಾರೆ. ಅದಕ್ಕಾಗಿ ನಾನು ತಮ್ಮನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ”
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಚುನಾವಣೆ ಕಾಂಗ್ರಸ್ಸಿನ ಕೖವಾಡದಿಂದ ನಡೆದಿದ್ದು ಎಂದು ಆಗಿನ ವಿರೋಧ ಪಕ್ಷ ಬಲವಾಗಿ ನಂಬಿತ್ತು.!! ದೇವರಸ್ ಇದನ್ನೂ ಬರೆಯುತ್ತಾರೆ “ಜಯಪ್ರಕಾಶ್ ನಾರಾಯಣರ ಆಂದೋಲನದಲ್ಲಿ ಆರ್ ಎಸ್ ಎಸ್ ಹೆಸರನ್ನು ಸೇರಿಸಲಾಗಿದೆ. ಗುಜರಾತ್ ಆಂದೋಲನದಲ್ಲೂ, ಬಿಹಾರ್ ಹೋರಾಟದಲ್ಲೂ ಆರೆಸ್ಸೆಸ್ ಹೆಸರನ್ನು ಸರ್ಕಾರ ಜೋಡಿಸಿದೆ. ಆದರೆ ಇದಕ್ಕೆ ಕಾರಣಗಳೇ ಇಲ್ಲ. ಸಂಘ ಈ ಯಾವ ಹೋರಾಟಗಳಲ್ಲೂ ಸಂಬಂಧ ಹೊಂದಿಲ್ಲ. ”
ಈ ಪತ್ರಕ್ಕೂ ಇಂದಿರಾ ಪ್ರತಿಕ್ರಿಯಿಸದ ಕಾರಣ ಅವರು ವಿನೋಬಾ ಭಾವೆಯವರನ್ನು ಹಿಡಿದುಕೊಳ್ಳುತ್ತಾರೆ. ವಿನೋಬಾ ಭಾವೆ ತುರ್ತು ಪರಿಸ್ಥಿತಿಯನ್ನು ಶ್ರದ್ಧೆಯಿಂದ ಬೆಂಬಲಿಸಿದವರು. ಮೇಲಾಗಿ ಇಂದಿರಾರಿಗೆ ಆಪ್ತರಾಗಿದ್ದವರು ಕೂಡಾ. 12 ಜನವರಿ 1976 ರಂದು ಭಾವೆಯವರಿಗೆ ದೇವರಸ್ ಬರೆದ ಪತ್ರದಲ್ಲಿ ಆರೆಸ್ಸೆಸ್ ಮೇಲೆ ವಿಧಿಸಿದ ನಿಷೇಧವನ್ನು ತೆರವುಗೊಳಿಸಲು ಭಾವೆಯವರು ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಭಾವೆಯವರೂ ಪ್ರತಿಕ್ರಿಯಿಸದ ಕಾರಣ ಬಹಳಾ ಬೇಸರದಿಂದ ತಾರೀಖು ನಮೂದಾಗದ ಇನ್ನೊಂದು ಪತ್ರದಲ್ಲಿ ಹೀಗೆ ಬರೆಯುತ್ತಾರೆ

” ಗೌರವಾನ್ವಿತ ಪ್ರದಾನ ಮಂತ್ರಿಗಳು (ಇಂದಿರಾಗಾಂಧಿ )ತಮ್ಮನ್ನು ಪನ್ವಾರ್ ಆಶ್ರಮದಲ್ಲಿ ಜನವರಿ 24 ರಂದು ಭೇಟಿಯಾಗಲಿದ್ದಾರೆ ಎಂದು ಪತ್ರಿಕಾ ವರದಿಗಳಿಂದ ತಿಳಿದುಬಂದಿದೆ. ಆ ಸಮಯದಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತದೆ. ದಯವಿಟ್ಟು ತಾವು ಪ್ರದಾನ ಮಂತ್ರಿಗಳಿಗೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ತಿಳುವಳಿಕೆ ಹೋಗಲಾಡಿಸಲು ಪ್ರಯತ್ನ ಮಾಡಿ ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ. ಅದರಿಂದ ಆರೆಸ್ಸೆಸ್ ಮೇಲೆ ವಿಧಿಸಿದ ನಿಷೇಧಾಜ್ಞೆ ತೆರವುಗೊಂಡು ಕಾರ್ಯಕರ್ತರು ಸೆರೆಮನೆಯಿಂದ ಬಿಡುಗಡೆಯಾಗುವಂತಾಗಲಿ. ಪ್ರದಾನ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಯೋಜನೆಗಳಿಗೆ ಆರೆಸ್ಸೆಸ್ ಸದಸ್ಯರು ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇವೆ.”
(ಹಿಂದಿಯಲ್ಲಿರುವ ಈ ಎಲ್ಲಾ ಪತ್ರಗಳನ್ನು ಆರೆಸ್ಸೆಸ್ ಪ್ರಕಾಶನದಿಂದಲೇ ಪಡೆದು ಲೇಖನದ ಕೊನೆಯಲ್ಲಿ ಕೊಡಲಾಗಿದೆ) ಆರೆಸ್ಸೆಸ್ ನ ಪ್ರಮುಖ ಸಿದ್ಧಾಂತವಾದಿಯಾಗಿದ್ದ ಆರೆಸ್ಸೆಸ್ ನ ನಿರ್ದೇಶನದ ಮೇರೆಗೆ ಜನಸಂಘವನ್ನು ಹುಟ್ಟುಹಾಕಿದ ಬಾಲ್ರಾಜ್ ಮಧೋಕ್ ಕೂಡಾ ಈ ಕೆಳಗಿನಂತೆ ನಿವೇದಿಸಿಕೊಂಡದ್ದಿದೆ.
“ಸಂಘದ ಸರಸಂಗಚಾಲಕರಾದ ಬಾಳಾಸಾಹೇಬ್ ದೇವರಸ್ ಮೀಸಾ ಬಂಧಿಯಾಗಿ ಪುಣೆಯ ಯರವಾಡಾ ಜೖಲಿನಲ್ಲಿ ಸಂಪೂರ್ಣ ಸವಲತ್ತು ಅನುಭವಿಸಿದವರು. ಹಾಗಾಗಿಯೇ ಬಂಧನಕ್ಕೊಳಗಾದ ಇಂದಿರಾರವರಿಗೆ ಎರಡು ಪತ್ರಗಳನ್ನು 22-08-1975 ಮತ್ತು 10-11-1975 ರಂದು ಬರೆದರು. ಸಂಘದ ಬಗ್ಗೆ ಅವರಿಗಿದ್ದ ತಪ್ಪು ತಿಳುವಳಿಕೆ ನಿವಾರಿಸಲು ಮತ್ತು ನಿಷೇಧ ತೆರವುಗೊಳಿಸಲು. ಶ್ರೀ ವಿನೋಬಾ ಭಾವೆಯವರಿಗೂ ಪತ್ರ ಬರೆದ ಅವರು ಇಂದಿರಾರ ಮನಸ್ಸಿನಲ್ಲಿದ್ದ ಸಂಘ ವಿರೋಧಿ ಭಾವನೆಗಳನ್ನು ಹೋಗಲಾಡಿಸುವಂತೆ ಪ್ರಯತ್ನ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ಪತ್ರಗಳು ಸರ್ಕಾರದಿಂದ ಮಾಹಿತಿ ಸೋರಿಕೆಯಾಗಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಹಜವಾಗಿ ಈ ವಿದ್ಯಮಾನ ಸಂಘದ ಕಾರ್ಯಕರ್ತರ ನೖತಿಕ ನಿಷ್ಟೆಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಸತ್ಯಾಗ್ರಹ ಆಂದೋಲನ ಸತ್ತೇ ಹೋದಂತಾಯಿತು.
( Madhok Balraj, zindagi ka safar-3: )
ಗಮನಿಸಬೇಕಾದ ವಿಷಯ ಏನೆಂದರೆ ಭಾರತ ಗಣರಾಜ್ಯದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತರು ಕಾರ್ಯಕರ್ತರ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಮಂತ್ರಿಸಿದ್ದು, ಇದು ಭಾರತವನ್ನು ಸಂಘ ಹಿಂದೂರಾಷ್ಟ್ರವನ್ನಾಗಿ ಮಾಡಲು ಅನವರತ ಶ್ರಮಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ತುರ್ತು ಪರಿಸ್ಥಿತಿಯ ಅತಿರೇಕದ ಸಮಯದಲ್ಲಿ ಅತಿ ಮುಖ್ಯ ನಾಯಕರಲ್ಲಿ ಪ್ರಣವ್ ಮುಖರ್ಜಿಯವರೂ ಒಬ್ಬರಾಗಿದ್ದರೆಂದು ಹೇಳಲಾಗಿದೆ!!.
ಈ ಎಲ್ಲಾ ವಿಷಯಗಳು ಇಷ್ಟು ನಿಚ್ಚಳವಾಗಿ ಇರುವಾಗಲೂ ಆರೆಸ್ಸೆಸ್ ಕಾಡರ್ ಗಳು ಮಾಸಿಕ ಪಿಂಚಣಿಯನ್ನು ಪಡೆಯುತ್ತಿರುವುದು ನಾಚಿಕೆಗೇಡು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು, ಉದಾಹರಣೆಗೆ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಮಹಾರಾಷ್ಟ್ರ ಗಳು ಈ ಪಿಂಚಣಿಗಳನ್ನು ನಿಗದಿಪಡಿಸಿಕೊಂಡಿವೆ. ಒಂದು ತಿಂಗಳಿಗಿಂತ ಹೆಚ್ಚು ಅವಧಿ ಸೆರೆಮನೆಯಲ್ಲಿದ್ದವರಿಗೆ ಮಾಸಿಕ 20000 ರೂಪಾಯಿಗಳು, ಒಂದು ತಿಂಗಳಿಗಿಂತ ಕಡಿಮೆ ಅವಧಿಯವರಿಗೆ ಮಾಸಿಕ 10000 ರೂಪಾಯಿ!! ತುರ್ತು ಪರಿಸ್ಥಿತಿ ಯ ಅವಧಿಯುದ್ದಕ್ಕೂ ಸೆರೆವಾಸದಲ್ಲಿರಬೇಕೆಂಬ ನಿಯಮ ಇಲ್ಲ. ಹಾಗಾಗಿ ಒಂದು ತಿಂಗಳೋ ಅಥವಾ ಅದಕ್ಕಿಂತ ಕಡಿಮೆ, ಅಥವಾ ಎರಡು ತಿಂಗಳೋ ಸೆರೆವಾಸದಲ್ಲಿದ್ದು ತಪ್ಪೊಪ್ಪಿಗೆ ಬರೆದುಕೊಟ್ಟು ಹೊರಬಂದವರ ಆರ್ಥಿಕ ಭದ್ರತೆಯ ಬಗ್ಗೆ ಬಿಜೆಪಿ ಕಾಳಜಿವಹಿಸುತ್ತದೆ ಎಂದಾಯಿತು.
ಇದರ ಜೊತೆಗೆ ಇನ್ನೊಂದು ಕೌತುಕ ಏನೆಂದರೆ ಯಾವೊಬ್ಬ ಸಂಘಪಡೆಯವನೂ ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಭಾಗವಹಿಸಿ ಪಿಂಚಣಿ ಪಡೆಯುತ್ತಿಲ್ಲ. ಆದರೆ ತುರ್ತು ಪರಿಸ್ಥಿತಿ ಅವಧಿಯಲ್ಲಿ ನೂರಾರು ಯುವ ಕಮ್ಯುನಿಸ್ಟ್ ಕಾರ್ಯಕರ್ತರು ನಕ್ಸಲೖಟ್ಸ್ ಎನಿಸಿಕೊಂಡು ಹುಸಿ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆಗೊಳಗಾಗಿದ್ದನ್ನು ಯಾರೂ ನೆನಸದಿದವುದು. ಆರೆಸ್ಸೆಸ್ ನ ಜೊತೆಗಾರ ಶಿವಸೇನಾ ಬಹಿರಂಗವಾಗಿ ತುರ್ತು ಪರಿಸ್ಥಿತಿಯನ್ನು ಬೆಂಬ ಅಧಕಾ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವದಂದು ತವ್ಲೀನ್ ಸಿಂಗ್ ಎನ್ನುವ ಹಿರಿಯ ಪತ್ರಕರ್ತರು ಭಾರತೀಯ ಪ್ರಜಾಪ್ರಭುತ್ವವನ್ನು ಪದಗಳನ್ನು ಮೖದುಗೊಳಿಸದೆ ನೇರವಾಗಿ ವಿಮರ್ಶಿಸುತ್ತಾರೆ. ಇವರು 2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರುವುದನ್ನು ಸಂಭ್ರಮಿಸಿದವರು.
“ಪ್ರಜಾಪ್ರಭುತ್ವದ ಹಕ್ಕುಗಳ ಬರ್ಬರ ದಮನ ತುರ್ತು ಪರಿಸ್ಥಿತಿ ಅವಧಿಯಲ್ಲಿ ಮಾತ್ರ ಅಲ್ಲ, ಈಗಲೂ ಮತ್ತೆ ಸಂಭವಿಸಬಹುದು. ಇನ್ನೂ ಅಪಾಯಕಾರಿಯಾಗಿ ಮತ್ತು ಜಟಿಲವಾಗಿ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆ ಥರದ ಬೀಸು ಹೇಳಿಕೆ ಕೊಡಲು ನಾನು ತಯಾರಿಲ್ಲ. ಆದರೆ ಏನಾಗಿದೆ ಎಂದರೆ ಕೆಲವು ಸಹಜ ಎಂದರಿತ, ಹೆಚ್ಚು ಕಾಳಜಿವಹಿಸದ ಸ್ವಾತಂತ್ರ್ಯಗಳು ಅಪಾಯಕಾರಿ ರೀತಿಯಲ್ಲಿ ಮಾಯವಾಗಿವೆ. ಇದು ವಿರೋಧ ಪಕ್ಷದ ನಾಯಕರು, ಪತ್ರಕರ್ತರು, ಪ್ರಭುತ್ವ ವಿರೋಧಿಗಳನ್ನು ಕಾರಾಗ್ರಹಕ್ಕೆ ಕಳುಹಿಸುವುದರಿಂದ ಆದದ್ದಲ್ಲ, ಬದಲು ಕಾನೂನುಗಳನ್ನು ತಿರುಚಿ ದಮನವನ್ನು ಕಾನೂನುಬದ್ಧಗೊಳಿಸಿರುವುದರಿಂದ ಆದದ್ದು!!
ರಾಷ್ಟ್ರದ್ರೋಹವನ್ನು ತಡೆಯಲು ಮಾಡಿಕೊಂಡ ಕಾನೂನನ್ನು ತಿರುಚಿ ಅದರ ಅರ್ಥವ್ಯಾಪ್ತಿಯನ್ನು ಹಿಗ್ಗಿಸಲು ಪ್ರಯತ್ನಿಸಲಾಗಿದೆ. ಕಪ್ಪು ಹಣ ತಡೆಯಲು ಇರುವ ಕಾನೂನನ್ನೂ ತಿರುಚಲಾಗಿದೆ. ಹಾಗಾಗಿ ಯಾವುದೇ ಪ್ರಭುತ್ವ ವಿರೋಧಿ ರಾಷ್ಟ್ರದ್ರೋಹ ಕಾನೂನಿನಡಿ ಜೖಲಿಗೆ ಹೋಗದಿದ್ದರೆ ಕಾನೂನು ಜಾರಿ ನಿರ್ದೇಶನ ಅವರ ಮೇಲೆ ಹಣ ದುರುಪಯೋಗದ ಕೇಸ್ ಹಾಕಿ, ಹೆಸರೇ ಇಲ್ಲದ ಸೆರೆಮನೆಯಲ್ಲಿ ಕೊಳೆಯುವಂತೆ ಮಾಡುತ್ತದೆ. ವಿರೋಧ ಪಕ್ಷದ ನಾಯಕರು ಇಂಥಾ ಸಂದರ್ಭಗನ್ನು ಧೖರ್ಯವಾಗಿ ಎದುರಿಸುತ್ತಾರೆ. ಏಕೆಂದರೆ ಅವರ ಹಿಂದೆ ರಾಜಕೀಯ ಪಕ್ಷವಿರುತ್ತದೆ. ಆದರೆ ಭಿನ್ನಮತೀಯರು ಮತ್ತು ಪತ್ರಕರ್ತರು? ಮೌನವಾಗಿರಲು ಕಲಿತಿದ್ದಾರೆ. ಅದು ಒಳ್ಳೆಯದಾ? ಇದು ಪ್ರಜಾಪ್ರಭುತ್ವ ವಾ?”
(On the 50th anniversary of Emergency, need to think what should be done——–)
ಹಾಗಾಗಿ ಇದು ಗೋಡೆ ಬರಹದಷ್ಟು ಸ್ಪಷ್ಟ. ಭಾರತ ಸಂವಿಧಾನದ ಕೆಲವು ಕಲಮುಗಳನ್ನು ಬಳಸಿಕೊಂಡು ತುರ್ತು ಪರಿಸ್ಥಿತಿ ಯನ್ನು ಹೇರಲಾಗಿತ್ತು.ಮತ್ತು ನಂತರ ಅದನ್ನು ರದ್ದುಗೊಳಿಸಲಾಗಿತ್ತು.
ಆದರೆ ಈಗ?
ಇಂದಿರಾ ಗಾಂಧಿ ಇಲ್ಲ ಕಾಂಗ್ರೆಸ್ ಸರ್ಕಾರವೂ ಇಲ್ಲ. ಆದರೆ ಮೋದಿ ಅಧಿಕಾರದಡಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಯನ್ನು ನಿರಂತರವಾಗಿ ಅನುಭವಿಸುತ್ತಿದ್ದೇವೆ. ಇದನ್ನು ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಘೋಷಣೆಯೇ ಆಗಿಲ್ಲ.
ಇದನ್ನೂ ನೋಡಿ: ಒತ್ತಡ ನಿವಾರಿಸಿ, ಹೃದಯದ ಆರೋಗ್ಯ ಹೆಚ್ಚಿಸಿ – ಡಾ ಭಾನು ಪ್ರಕಾಶ್ | Janashakthi Media
