ಬೆಂಗಳೂರು: ಬಿಬಿಎಂಪಿ ಕಾಮಗಾರಿ ಮಾಡಿ 26 ತಿಂಗಳಾದರೂ ಬಿಲ್ ಪಾವತಿಯಾಗದೇ ಸಾಲದ ಸುಳಿಗೆ ಸಿಲುಕಿದ್ದು, ತಮಗೆ ದಯಾಮರಣ ಕೊಡಿ ಎಂದು ಬಿಬಿಎಂಪಿ ಗುತ್ತಿಗೆದಾರರು ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಬೃಹತ್ ಬೆಂಗಳೂರು ಮಹನಾಗರ ಪಾಲಿಕೆಗೆ 2023-24ನೇ ಸಾಲಿನಲ್ಲಿ ಈಗಾಗಲೇ ಸುಮಾರು ರೂ. 2000 ಕೋಟಿ ರೂ. ಹಣ ತೆರಿಗೆ ಮೂಲಕ ಆದಾಯ ಬಂದಿದೆ. ಇಷ್ಟೊಂದು ಹಣ ಲಭ್ಯವಿದ್ದರೂ, ಬಿಬಿಎಂಪಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಕಳೆದ 26 ತಿಂಗಳುಗಳಿಂದ ಬಿಲ್ ಪಾವತಿಯನ್ನೇ ಮಾಡಿಲ್ಲ. ಇದರ ಹಿಂದಿರುವ ದುರುದ್ದೇಶವಾದರೂ ಏನಂಬುದು ತಿಳಿಯುತ್ತಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಲೇ ನಮಗೆ ಹಣ ಬಿಡುಗಡೆ ಮಾಡಬೇಕು. ಇಲ್ಲವಾದರೆ 500 ಮಂದಿ ಬಿಬಿಎಂಪಿ ಗುತ್ತಿಗೆದಾರರು ದಯಾಮರಣ ಕರುಣಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆಯುತ್ತೇವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಗುತ್ತಿಗೆದಾರರ ಬಾಕಿ ಮೊತ್ತ ನೀಡಲು ರಾಜ್ಯ ಸರ್ಕಾರಕ್ಕೆ 600 ರೂ.ಕೋಟಿ ಸಾಲ ಕೋರಿ ಬಿಬಿಎಂಪಿ ಪ್ರಸ್ತಾವನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘದ ವತಿಯಿಂದ ಕಾಮಗಾರಿ ಬಿಲ್ಲು ಬಿಡುಗಡೆ ಮಾಡುವ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯ ಆಯುಕ್ತರು ಮಾಧ್ಯಮದ ಮುಖಾಂತರ ತಿಳಿಸುವಂತೆ ಮನವಿ ಮಾಡಿದ್ದೇವೆ. ಆದರೆ, ಬಿಬಿಎಂಪಿಯ ಹಲವು ಕಾಮಗಾರಿಗಳನ್ನು ಮಾಡಿದರೂ ನಮಗೆ ಕಳೆದ 26 ತಿಂಗಳಿಂದ ಬಿಲ್ಲುಗಳನ್ನು ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಪದೇ ಪದೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಪ್ರಸ್ತುತ ಬಿಬಿಎಂಪಿಗೆ ಸಾರ್ವಜನಿಕರಿಂದ 2000 ಕೊಟಿ ರೂ. ತೆರಿಗೆ ಹಣ ಪಾವತಿಯಾಗಿದೆ. ಈ ಹಣದಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಯಾಕೆ ಹಣ ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತದೆ ತಿಳಿಯುತ್ತಿಲ್ಲ. ಅಧಿಕಾರಿಗಳ ಉದ್ದೇಶ ಏನಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹಲವು ಬಿಬಿಎಂಪಿ ಗುತ್ತಿಗೆದಾರರು ತಾವು ನಿರ್ವಹಿಸಿದ ಕಾಮಗಾರಿಗಳಿಗೆ ಸಕಾಲದಲ್ಲಿ ಬಿಲ್ ಪಾವತಿಯಾಗದೆ ಸಾಲದ ಸುಳಿಗೆ ಸಿಲುಕಿದ್ದು, ದಯಾಮರಣ ಕೋರಿ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ಬರೆದಿದ್ದಾರೆ. ಇನ್ನು ಕೆಲವರು ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡಿದರೂ ನ್ಯಾಯ ಸಿಗಲಾರದೇ ಮಮನೊಂದು ತಮ್ಮ ಸ್ವ-ಇಚ್ಚೆಯಿಂದ ಗುತ್ತಿಗೆದಾರರ ಸಂಘದೊಂದಿಗೆ ದಯಾಮರಣ ಪತ್ರ ನೀಡುವುದಾಗಿ ದೂರವಾಣಿ ಮುಖಾಂತರ ತಿಳಿಸಿದ್ದಾರೆ. ಈ ಎಲ್ಲರ ದಯಾಮರಣ ಮನವಿ ಪತ್ರಗಳನ್ನು ಗೌರವಾನ್ವಿತ ರಾಷ್ಟ್ರಪತಿಯವರಿಗೆ ಸಲ್ಲಿಸಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಬಿಬಿಎಂಪಿ ಗುತ್ತಿಗೆದಾರರ ಎಲ್ಲಾ ಬೇಡಿಕೆಗಳಿಗೆ ತಕ್ಷಣ ಮುಖ್ಯ ಆಯುಕ್ತರಿಂದ ಪರಿಹಾರ ದೊರಕದೆ ಹೋದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಆಗಲೂ ನ್ಯಾಯ ದೊರಕದೆ ಹೋದಲ್ಲಿ ಅನ್ಯಮಾರ್ಗವಿಲ್ಲದೆ ಕಾನೂನಾತ್ಮಕ ಹೋರಾಟಕ್ಕೆ ಚಿಂತಿಸಲಾಗುವುದು. ಇದಕ್ಕೆ ಆಸ್ಪದ ನೀಡದೆ ಮುಖ್ಯ ಆಯುಕ್ತರು ನಮ್ಮ ಬೇಡಿಕೆ ಈಡೇರಿಸಿ ಕೊಡುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಗೆ ಹಣಕಾಸು ಮುಗ್ಗಟ್ಟಿನಿಂದ ಅನಾಹುತ ಸಂಭವಿಸಿದ್ದಲ್ಲಿ ಇದರ ಜವಾಬ್ದಾರಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು.
ಈ ಮಾಧ್ಯಮಗೋಷ್ಠಿಯಲ್ಲಿ ಗೌರವ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಜಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಟಿ.ವೆಂಕಟೇಶ್ ಮತ್ತು ತಾಂತ್ರಿಕ ಸಲಹೆಗಾರರಾದ ಮಂಜುನಾಥ ಭಾಗವಹಿಸಿದ್ದರು.