ಹೊಸದಿಲ್ಲಿ : ಕಳೆದ 2 ತಿಂಗಳಿಂದ ನಡೆಯುತ್ತಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು (ಭಾನುವಾರ) ಪ್ರಕಟವಾಗಲಿದೆ.
ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸೋಲು-ಗೆಲುವಿನ ಸ್ಪಷ್ಟಚಿತ್ರಣ ಲಭ್ಯವಾಗಲಿದೆ.
ದೇಶದ ಮುಂದಿನ ರಾಜಕೀಯ ದಿಕ್ಸೂಚಿ ಎಂದೇ ಪರಿಗಣಿತವಾಗಿರುವ ಈ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮತ ಎಣಿಕೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಫಲಿತಾಂಶ ಪ್ರಕಟದ ಬಳಿಕ ಎಲ್ಲಾ ರೀತಿಯ ಸಂಭ್ರಮಾಚರಣೆ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಅಲ್ಲದೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಅಭ್ಯರ್ಥಿಗಳು ಮತ್ತು ಏಜೆಂಟ್ಗಳಿಗೆ ಕೊರೋನಾ ನೆಗೆಟಿವ್ ವರದಿ ಅಥವಾ ಕೊರೋನಾ 2 ಡೋಸ್ ಲಸಿಕೆ ಪಡೆದ ದಾಖಲೆ ಹಾಜರಿ ಕಡ್ಡಾಯ ಮಾಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ. ಇವರಿಬ್ಬರಿಗೂ ಅಧಿಕಾರ ಸಿಗದಂತೆ ಎಡರಂಗ-ಕಾಂಗ್ರೆಸ್ ಮೈತ್ರಿ ಸಾಕಷ್ಟು ಹೋರಾಟ ನಡೆಸಿದೆ.
ಹಲವು ಚುನಾವಣೋತ್ತರ ಸಮೀಕ್ಷೆಗಳು ಮಮತಾ ಗೆಲ್ಲುತ್ತಾರೆ ಎಂದು ಹೇಳಿದರೆ ಕೆಲ ಸಮೀಕ್ಷೆಗಳು ಬಿಜೆಪಿ ಪರ ಒಲವು ವ್ಯಕ್ತಪಡಿಸಿವೆ.
ಕೇರಳದಲ್ಲಿ 140 ಕ್ಷೇತ್ರಗಳಿಗೆ 597 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸಮೀಕ್ಷೆಗಳಲ್ಲಿ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಮತ್ತೆ ಜಯಗಳಿಸಲಿದೆ, ಕಾಂಗ್ರೆಸ್ ಸೋಲಲಿದೆ, ಬಿಜೆಪಿ ನಿರೀಕ್ಷಿತ ಸ್ಥಾನ ಪಡೆಯುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ನುಡಿದಿವೆ.
ತಮಿಳುನಾಡಿನ 234 ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಾಗೂ ಕನ್ಯಾಕುಮಾರಿ ಲೋಕಸಭೆ ಕ್ಷೇತ್ರಕೆ ಉಪಚುನಾವಣೆ ನಡೆದಿತ್ತು. ಸಮೀಕ್ಷೆಗಳ ಪ್ರಕಾರ ಇಲ್ಲಿ ಡಿಎಂಕೆ ಗೆಲ್ಲಲಿದ್ದು, ಅಣ್ಣಾಡಿಎಂಕೆ-ಬಿಜೆಪಿ ಕೂಟ ಭಾರೀ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು. ಕಾಂಗ್ರೆಸ್ ಸೋಲಬಹುದು ಎಂದು ಸಮೀಕ್ಷೆಗಳು ನುಡಿದಿವೆ. 126 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ
ಪುದುಚೇರಿಯಲ್ಲಿ ಎನ್ಆರ್ ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಸ್ಪರ್ಧಿಸಿದ್ದು, ಡಿಎಂಕೆ-ಕಾಂಗ್ರೆಸ್ಸನ್ನು ಮಣಿಸಿ ಜಯಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ. ಇದು ಸಾಕಾರವಾದರೆ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿ ಬಿಜೆಪಿ ಗೆದ್ದಾಂತಾಗುತ್ತದೆ. ಇಲ್ಲಿ 30 ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಪಂಚರಾಜ್ಯ ಚುನಾವಣೆ ಫಲಿತಾಂಶ
ಕ್ಷಣ ಕ್ಷಣದ ಮಾಹಿತಿಗಾಗಿ http://www.Janashakthimedia.com ಗೆ ಭೇಟಿ ಕೊಡಿ.
ಪಂಚರಾಜ್ಯ ಚುನಾವಣೆ : ಮತದಾರನ ತೀರ್ಪೇನು? ಸಂಜೆ 6 ಕ್ಕೆ ಪ್ರೈಮ್ ಡಿಬೆಟ್
ಜನಶಕ್ತಿ ಮೀಡಿಯಾ Facebook & YouTube ನಲ್ಲಿ ತಪ್ಪದೆ ವೀಕ್ಷಿಸಿ.