ಬೆಂಗಳೂರು : ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಧರಣಿ 5 ನೇ ದಿನಕ್ಕೆ ಕಾಲಿಟ್ಟಿದೆ. ಇಂದಿನ ಧರಣಿಯಲ್ಲಿ ಎಡ ವಿದ್ಯಾರ್ಥಿ – ಯುವಜನ ಸಂಘಟನೆಗಳು ಬೆಂಬಲ ನೀಡಿದ್ದು ವಿಶೇಷವಾಗಿತ್ತು.
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ SFI ರಾಜ್ಯ ಕಾರ್ಯದರ್ಶಿ ಕೆ ವಾಸುದೇವರೆಡ್ಡಿ ಮಾತನಾಡುತ್ತಾ,ಈ ಕೃಷಿ ಮಸೂದೆಗಳು ರೈತರ ಪಾಲಿಗೆ ಮರಣ ಶಾಸನಗಳಾಗಿವೆ. ದೆಹಲಿಯಲ್ಲಿ 24 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಮೋದಿ ಸರಕಾರ ರೈತರ ಜೊತೆ ಮಾತನಾಡದೆ ಕಾಲಹರಣ ಮಾಡುತ್ತಿದೆ. ಅನ್ನದಾತನನ್ನು ಬೀದಿಗೆ ತಂದ ಮೋದಿ ಸರಕಾರಕ್ಕೆ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರೆ ನೀಡಿದರು.
AIDSO ನ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, AISFI ರಾಜ್ಯಾಧ್ಯಕ್ಷೆ ಜ್ಯೋತಿ, KVS ರಾಜ್ಯ ಸಮಿತಿ ಸದಸ್ಯೆ ಪುಷ್ಪ ಧರಣಿ ಉದ್ದೇಶಿಸಿ ಮಾತನಾಡಿದರು. ಧರಣಿಯಲ್ಲಿ AIYF ನ ಹರೀಶ್ ವಿದ್ಯಾರ್ಥಿ ಮುಖಂಡರಾದ ಸೀತಾರಾ, ಗಾಯತ್ರಿ, ಸಾಗರ, ಸಂಗಮೇಶ್, ಬೆಂಗಳೂರು ಸುತ್ತಮುತ್ತ ವಾಸವಾಗಿರುವ ಪಂಜಾಬ್ ನ ರೈತರ ಮಕ್ಕಳು ಸೇರಿದಂತೆ ನೂರಕ್ಕು ಹೆಚ್ಚುಜನ ಇದ್ದರು. ಧರಣಿ ಆರಂಭಕ್ಕೂ ಮುನ್ನ ದೆಹಲಿ ಹೋರಾಟದಲ್ಲಿ ಹುತಾತ್ಮರಾದ 30 ಕ್ಕೂ ಹೆಚ್ಚು ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.