ಪಾವಗಡ ಬಳಿ ಖಾಸಗಿ ಬಸ್ಸು ಉರುಳಿ 5 ಮಂದಿ ಸಾವು-50ಕ್ಕೂ ಹೆಚ್ಚು ಮಂದಿಗೆ ಗಾಯ

ತುಮಕೂರು: ಜಿಲ್ಲೆಯ ಪಾವಗಡ ಬಳಿ ಖಾಸಗಿ ಬಸ್ಸೊಂದು ಉರುಳಿಬಿದ್ದು, ಐದು ಮಂದಿ ಧಾರುಣವಾಗಿ ಸಾವನ್ನಪ್ಪಿದ್ದು, ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಕೆರೆಕಟ್ಟೆ ಬಳಿ ಇಂದು ಬೆಳಿಗ್ಗೆ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದರೆ 30ಕ್ಕೂ ಅಧಿಕ ಮಂದಿ ಬಸ್ಸಿನ ಮೇಲೆ ಕುಳಿತು ಸಾಗುತ್ತಿದ್ದರು. ಬೆಳಗ್ಗೆ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು, ಆಫೀಸಿಗೆ ಜನರು ಹೋಗುವ ಹೊತ್ತು. ಈ ದಾರಿಯಲ್ಲಿ ಸಂಚಾರಕ್ಕೆ ಬೇರೆ ಸಾರಿಗೆ ಸೌಕರ್ಯಗಳಿಲ್ಲದ ಕಾರಣ ಸಿಕ್ಕಿದ್ದ ಬಸ್ಸಿನಲ್ಲಿ ಸಾಧ್ಯವಾದಷ್ಟು ಜನ ಹತ್ತಿದ್ದರು.

ಮೃತರನ್ನು ವೈ.ಎನ್.ಹೊಸಕೋಟೆಯ ಕಲ್ಯಾಣ್ (19), ಪೋತಗಾನಹಳ್ಳಿಯ ಅಮೂಲ್ಯ (16), ಬೆಸ್ತರಹಳ್ಳಿಯ ಶಹನಾಜ್ (20), ಶೂಲನಾಯಕನಹಳ್ಳಿ ಗ್ರಾಮದ ಅಜಿತ್ (27) ಎಂದು ಗುರುತಿಸಲಾಗಿದ್ದು, ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ನೀಲಮ್ಮನಹಳ್ಳಿಯ ನಿವಾಸಿ ದಾದೂ ಬೆಂಗಳೂರಿಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀನಿವಾಸ್ ಮೂರ್ತಿ ಒಡೆತನದ ಎಸ್‌ವಿಟಿ ಖಾಸಗಿ ಬಸ್ ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಹೋಗುತ್ತಿತ್ತು. ಬಸ್ಸಿನ ಮೇಲ್ಭಾಗದಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಕುಳಿತಿದ್ದರು. ಆದರೆ ಬಸ್ ಓವರ್ ಲೋಡ್ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಕೆರೆ ಏರಿ ಮೇಲೆ ಬಸ್ಸು ಉರುಳಿತ್ತು. ಅಪಘಾತ ಸ್ಥಳದಿಂದ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಪಳವಳ್ಳಿ ಕೆರೆ ಕಟ್ಟೆ ಮೇಲೆ ಅತಿ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯುತ್ತಿದ್ದಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕಿರುಚಾಟ ಮುಗಿಲು ಮುಟ್ಟಿದೆ. ಬಸ್ ಕೆಳಗೆ ಬಿದ್ದ ರಭಸ ಕೇಳಿಸಿಕೊಂಡ ಸ್ಥಳೀಯರ ಸ್ಥಳಕ್ಕೆ ದೌಡಾಯಿಸಿ ಬಂದು ಬಸ್ ಒಳಗೆ ಸಿಲುಕ್ಕಿದ್ದ ಗಾಯಾಳುಗಳು ಹಾಗೂ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ತಂತೆ ಸ್ಥಳಕ್ಕೆ ಧಾವಿಸಿದ ಪಾವಗಡ ಪೊಲೀಸರು, ಆಂಬ್ಯುಲೆನ್ಸ್ ಚಾಲಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಹಾಗೂ ಶವಗಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದರು.

ಈ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಗಂಭೀರ ಸ್ಥಿತಿಯಲ್ಲಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಯಿತು.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ವೆಂಕಟರಮಣಪ್ಪ, ಮಾನಂ ವೆಂಕಟಸ್ವಾಮಿ, ಹೆಚ್.ವಿ. ವೆಂಕಟೇಶ್, ಸೊಗಡು ವೆಂಕಟೇಶ್, ರೊಪ್ಪ ಗ್ರಾ.ಪಂ. ಅಧ್ಯಕ್ಷ ಓ. ರಾಮಾಂಜನೇಯಲು ಭೇಟಿ ನೀಡಿ ಮೃತಪಟ್ಟ ಪ್ರಯಾಣಿಕರ ಕುಟುಂಬದವರಿಗೆ ಸಾಂತ್ವನ ಹೇಳಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಬಸ್ಸು ಅಪಘಾತದಿಂದಾಗಿ ಪಳ್ಳವಳ್ಳಿ ಕೆರೆ ಕಟ್ಟೆಯಿಂದ ಪಾವಗಡದ ಕಡೆ 3 ಕಿಲೋ ಮೀಟರ್ ಹಾಗೂ ವೈ.ಎನ್. ಹೊಸಕೋಟೆ ಕಡೆಯ 3 ಕಿಲೋ ಮೀಟರ್‌ ದೂರ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು.  ಪಳವಳ್ಳಿ ಕೆರೆ ಕಟ್ಟೆ ಮೇಲಿನ ರಸ್ತೆಯು 6 ತಿರುವುಗಳನ್ನು ಹೊಂದಿದ್ದು, ಈ ಮಾರ್ಗದಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುತ್ತವೆ. ಈ ತಿರುವುಗಳನ್ನು ತಪ್ಪಿಸಿ ನೇರ ರಸ್ತೆ ಮಾಡುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟವರು ಇತ್ತಕಡೆ ಗಮನ ಹರಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಅಗಲೀಕರಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪರಿಹಾರ ಘೋಷಣೆ

ಖಾಸಗಿ ಬಸ್ ಅಪಘಾತದಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ಸಾರಿಗೆ ಸಚಿವ ಬಿ. ಶ್ರೀರಾಮುಲು ಘೋಷಿಸಿದ್ದಾರೆ. ಖಾಸಗಿ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯೆ ನೀಡಿದ್ದು, ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಸ್ ಫಿಟ್‌ನೆಟ್ ಸೇರಿದಂತೆ ಎಲ್ಲ ದಾಖಲೆಗಳ ಪರಿಶೀಲಿಸಲಾಗುತ್ತದೆ. ಮೃತರ ಕುಟುಂಬಸ್ಥರು, ಗಾಯಾಳುಗಳಿಗೆ ಆರ್ಥಿಕ ಸಹಾಯ ಮಾಡುತ್ತೇವೆ. ಆರ್‌ಟಿಓ ಅಧಿಕಾರಿಗಳ ತಪ್ಪಿದ್ದರೂ ಕೂಡಲೇ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *