ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ. 62.84 ರಷ್ಟು ಮತದಾನ

ನವದೆಹಲಿ: ಲೋಕಸಭೆ ಚುನಾವಣೆ 2024 ರ ಹಂತ 4 ರಲ್ಲಿ 96 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾಗಿದೆ. ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಲೋಕಸಭಾ

ಆಂಧ್ರ ಪ್ರದೇಶದ 25, ಬಿಹಾರ 5, ಜಮ್ಮು ಮತ್ತು ಕಾಶ್ಮೀರ 1, ಜಾರ್ಖಂಡ್ 4, ಮಧ್ಯ ಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಮತ್ತು ಪಶ್ಚಿಮ ಬಂಗಾಳದ 8 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಆಂಧ್ರ ಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿಯೂ ಮತದಾನ ಮುಕ್ತಾಯವಾಗಿದೆ.

ನಾಲ್ಕನೇ ಹಂತದಲ್ಲಿ 10 ರಾಜ್ಯಗಳ 96 ಸ್ಥಾನಗಳಿಗೆ ಮತದಾನ ನಡೆದಿದೆ. ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ. 66. 14 ರಷ್ಟು ಮತದಾನವಾಗಿತ್ತು. ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ ಶೇ. 66. 71, ಮೂರನೇ ಹಂತದಲ್ಲಿ ಶೇ. 65. 68 ರಷ್ಟು ಮತದಾನವಾಗಿತ್ತು. ಚುನಾವಣಾ ಪತ್ರಗಳ ಪರಿಶೀಲನೆಯು ಮತದಾನ ದಿನದ ನಂತರ ಒಂದು ದಿನದ ನಂತರ ಅಭ್ಯರ್ಥಿಗಳು ಅಥವಾ ಅವರ ಅಧಿಕೃತ ಪೋಲಿಂಗ್ ಏಜೆಂಟರ ಸಮ್ಮುಖದಲ್ಲಿ ನಡೆಯುತ್ತದೆ. ಯಾವುದೇ ಕ್ಷೇತ್ರದಲ್ಲಿ ಮರು ಮತದಾನ ನಡೆಸುವ ನಿರ್ಧಾರವನ್ನು ಸಹ ನಂತರ ತೆಗೆದುಕೊಳ್ಳಲಾಗುತ್ತದೆ ಎಂದು ಚುನಾವಣಾ ಸಮಿತಿ ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ 8 ಕ್ಷೇತ್ರಗಳಿಗೆ ಅತ್ಯಧಿಕ ಶೇ. 76ರಷ್ಟು ಮತದಾನವಾಗಿದೆ. ಉಳಿದಂತೆ ಆಂಧ್ರ ಪ್ರದೇಶ (25) ಶೇ. 68, ಬಿಹಾರ (5) ಶೇ. 56, ಜಮ್ಮು ಮತ್ತು ಕಾಶ್ಮೀರ (1) ಶೇ. 36, ಜಾರ್ಖಂಡ್‌ (4) ಶೇ. 63, ಮಧ್ಯಪ್ರದೇಶ (8) ಶೇ. 68, ಮಹಾರಾಷ್ಟ್ರ (11) ಶೇ. 52, ಒಡಿಶಾ (4) ಶೇ. 64, ತೆಲಂಗಾಣ (17) ಶೇ. 61, ಉತ್ತರ ಪ್ರದೇಶ (13)ದಲ್ಲಿ ಶೇ. 58ರಷ್ಟು ಮತದಾನವಾಗಿದೆ.

ಈ ನಡುವೆ ಆಂಧ್ರ ಪ್ರದೇಶ ವಿಧಾನಸಭೆಯ 175 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಶೇ. 68ರಷ್ಟು ಮತದಾನವಾಗಿದೆ. ವೈಎಸ್‌ಆರ್‌ಸಿಪಿ ಹಾಗೂ ಎನ್‌ಡಿಎ ನಡುವೆ ಪೈಪೋಟಿ ನಡೆದಿದೆ. 2ನೇ ಬಾರಿ ಅಧಿಕಾರ ಹಿಡಿಯಲು ಸಿಎಂ ಜಗನ್‌ಮೋಹನ್‌ ರೆಡ್ಡಿ ಪ್ರಯತ್ನಿಸಿದ್ದಾರೆ. ಮರಳಿ ಗದ್ದುಗೆ ಏರಲು ಟಿಡಿಪಿಯ ಚಂದ್ರಬಾಬು ನಾಯ್ಡು ಅವರು ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಜತೆಗೆ ಹೋರಾಟ ನಡೆಸಿದ್ದಾರೆ.

ಒಡಿಶಾದ 28 ವಿಧಾನಸಭಾ ಕ್ಷೇತ್ರಗಳಿಗೂ ಸೋಮವಾರ ಮತದಾನ ನಡೆದಿದ್ದು, ಶೇ. 63ರಷ್ಟು ಮಂದಿ ಮತ ಚಲಾಯಿಸಿದರು. ಬಿಜೆಪಿ, ಬಿಜೆಡಿ, ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ನಡೆದಿದೆ. ಹಾಲಿ ಸಿಎಂ ನವೀನ್‌ ಪಟ್ನಾಯಕ್‌ ಐದನೇ ಬಾರಿಗೆ ಅಧಿಕಾರ ಹಿಡಿಯುವ ಕನಸಲ್ಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *