ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ರಾತ್ರಿಯಿಂದ ಮಳೆ ಸುರಿಯುತ್ತಲೇ ಇದೆ. ಬುಧವಾರ ಬೆಳಗ್ಗೆ ಮಳೆಯಿಂದಾಗಿ ವಾಹನ, ಜನರ ಸಂಚಾರ ವಿರಳವಾಗಿದೆ. ಇತರೆ ಜಿಲ್ಲೆಗಳಲ್ಲೂ ಮಳೆ ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದು ಮೂವರು ಸಾವನ್ನಪಿದ್ದಾರೆ.
ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಆರ್. ಆರ್. ನಗರ, ಸದಾಶಿವ ನಗರ, ವಿಜಯನಗರ, ಹಲಸೂರು, ಕೆ. ಆರ್. ಪುರ, ಹೆಬ್ಬಾಳ, ಬಸವನಗುಡಿ, ಜಯನಗರ, ಹೊಸಕೆರೆ ಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಹಲವು ಕಡೆ ರಸ್ತೆಗಳು ಜಲಾವೃತಗೊಂಡಿವೆ.
ಅಕ್ಟೋಬರ್ 7 ರ ವರೆಗೆ ಮಳೆ : ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಅಂತ್ಯಗೊಂಡಿದೆ. ಆದರೆ ಶಾಹೀನ್ ಚಂಡಮಾರುತದ ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅಕ್ಟೋಬರ್ 7ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಕ್ಟೋಬರ್ 7ರ ತನಕ ಮಳೆ ಸುರಿಯಲಿದೆ. ಹಾಗಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದಲ್ಲಿ ಮುಂಗಾರು ಅವಧಿಯಲ್ಲಿ 852 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 787 ಮಿ. ಮೀ. ಮಳೆಯಾಗಿದೆ. ಈಗ ಮುಂಗಾರು ಅಂತ್ಯಗೊಂಡಿದ್ದರೂ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ.
ಭೀತಿಯಲ್ಲಿ ಬೆಂಗಳೂರಿಗರು : ಬೆಂಗಳೂರಿನಲ್ಲಿ ರಾತ್ರಿಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ಇದರಿಂದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನದಿಯಂತಾದ ರಸ್ತೆಗಳಲ್ಲಿ ಸಂಚರಿಸಲಾಗದೆ ವಾಹನ ಸವಾರರು ಕಂಗಾಲಾಗಿದ್ದಾರೆ. ಇಂದು ಬೆಳಗ್ಗೆಯಿಂದ ಮತ್ತೆ ಮಳೆಯಾಗುತ್ತಿದ್ದು, ಹಲವು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ಸುತ್ತಮುತ್ತ ಇಂದು ಮೋಡ ಕವಿದ ವಾತಾವರಣವಿರಲಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಷಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಷಿಯಸ್ ದಾಖಲಾಗಲಿದೆ. ಮಳೆಯಿಂದ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಮರಗಳು ಬಿದ್ದಿದ್ದು, ಇನ್ನು ಕೆಲವೆಡೆ ಮನೆ, ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದೆ. ಇಂದು ಸಂಜೆಯವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಮಳೆ ಹೆಚ್ಚಾದರೆ ಪ್ರವಾಹಕ್ಕೆ ತುತ್ತಾಗುವ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನು ಬಿಬಿಎಂಪಿ ಗುರುತಿಸಿದೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಪೂರ್ವ ವಲಯದಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಪೂರ್ವ ವಲಯವೊಂದರಲ್ಲೇ 38 ಸೂಕ್ಷ್ಮ ಪ್ರದೇಶಗಳಿದ್ದು ದಾಸರಹಳ್ಳಿ 37 ಮತ್ತು ರಾಜರಾಜೇಶ್ವರಿ ನಗರ ವಲಯದಲ್ಲಿ 32 ಸೂಕ್ಷ್ಮ ಪ್ರದೇಶಗಳಿವೆ. ಮಹದೇವಪುರ 29, ದಕ್ಷಿಣ 20, ಯಲಹಂಕ 19, ಕೇಂದ್ರ ಕಚೇರಿ 13, ಬೊಮ್ಮನಹಳ್ಳಿ 11, ಪಶ್ಚಿಮ 10 ಸ್ಥಳಗಳಿವೆ.
ಮಳೆಗೆ ಬೆಳೆ ಹಾನಿ : ರಾಜ್ಯದಲ್ಲಿ ಸೋಮವಾರ, ಮಂಗಳವಾರ ಮತ್ತು ಇಂದು ಬೆಳಗ್ಗೆ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಅನೇಕ ಕಡೆ ರೈತರು ಬೆಳದ ಬೆಳೆಗಳು ಹಾನಿಯಾಗಿವೆ.
ಶಿವಮೊಗ್ಗದಲ್ಲಿ ಕಳೆದ ಮೂರು ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಸೋಮವಾರ ಅರ್ಧಗಂಟೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಿಕ್ರೆ ಹಳ್ಳದ ಸೇತುವೆ ಮೇಲೆ ನೀರು ನಿಂತು, ಸಂಚಾರಕ್ಕೆ ಅಡ್ಡಿಯಾಗಿತ್ತು.
ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಸೋಮವಾರ ಸುರಿದ ಮಳೆ ನೆಮ್ಮದಿ ತಂದಿದೆ. ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ತೀವ್ರ ಬಿಸಿಲು ಇತ್ತು. ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮುಂಗಾರು ಅವಧಿಯಲ್ಲಿ ರೈತರು ಬೆಳೆದಿದ್ದ ಹತ್ತಿ, ಮೆಣಸಿನಕಾಯಿ, ಜೋಳ ಭತ್ತದ ಬೆಳೆಗಳು ನೀರಿನ ಅಭಾವದ ಕಾರಣ ಸೊರಗಿದ್ದವು. ಬಿಸಿಲು ಚೆನ್ನಾಗಿ ಇದ್ದ ಕಾರಣ ರೈತರು ಶೇಂಗಾ ಬೆಳೆದಿದ್ದರು. ಸೋಮವಾರ ಸುರಿದ ಮಳೆಯಿಂದ ಎಪಿಎಂಸಿ ಆವರಣದಲ್ಲಿ ಒಣಗಲು ಹಾಕಿದ್ದ ಶೇಂಗಾ ನೀರಿನಲ್ಲಿ ಒದ್ದೆಯಾಗಿದೆ.
ಸಿಡಿಲು ಬಡಿದು ಮೂವರ ಸಾವು : ಕಲಬುರಗಿಯಲ್ಲಿ ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ರಾಜ ಅಹ್ಮದ್ ಹಾಜಿ ಸಾಬ (42), ಜಬ್ಬರ್ ಮುನ್ಸಿಸಾಬ್ (55) ಮೃತಪಟ್ಟವರು. ಇವರೊಂದಿಗೆ ಕೆಲಸ ಮಾಡುತ್ತಿದ್ದ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳಿಯಲ್ಲೂ ರೈತರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಶಾಹೀನ್ ಚಂಡಮಾರುತದ ಪರಿಣಾಮ ಮಳೆ ವ್ಯಾಪಕಗೊಂಡಿದ್ದು, ಸಾಕಷ್ಟು ಸಂಕಷ್ಟಗಳನ್ನು ಸೃಷ್ಟಿಸಿದೆ. ಕೂಡಲೆ ರಾಜ್ಯ ಸರಕಾರ ಜಾಗೃತಿ ವಹಿಸಬೇಕಿದೆ. ಬೆಳೆಹಾನಿಯಾದ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕಿದೆ.