ನವದೆಹಲಿ : ರಿಝರ್ವ್ ಬ್ಯಾಂಕ್ ರೂ.2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಮೂಲಕ 2016ರಲ್ಲಿ ಮೋದಿಯವರು ಅದ್ದೂರಿಯಾಗಿ ಪ್ರಕಟಿಸಿದ 2016 ರ ನೋಟು ರದ್ಧತಿಯ ಕ್ರಮ ತಲೆಕೆಳಗಾದಂತಾಗಿದೆ ಎಂಬುದು ಸ್ಪಷ್ಟ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.
ಮೋದಿಯವರ ನೋಟುರದ್ಧತಿ ಒಂದು ವಿನಾಶಕಾರಿ ಕ್ರಮವಾಗಿತ್ತು ಎಂಬುದನ್ನು ಇದೀಗ ಸಾಬೀತು ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಪ್ಪುಹಣ, ಭ್ರಷ್ಟಾಚಾರ, ಭಯೋತ್ಪಾದಕರಿಗೆ ನಿಧಿ ಮತ್ತು ಡಿಜಿಟಲ್ ಆರ್ಥಿಕತೆಗೆ ಉತ್ತೇಜನೆಯ ಪ್ರಶ್ನೆಗಳಿಗೆ ಉತ್ತರವೆಂದು ಸಾರಲಾದ ಈ ನೋಟುರದ್ಧತಿ ಎಲ್ಲ ರೀತಿಯಲ್ಲೂ ಒಂದು ಶೋಚನೀಯ ವೈಫಲ್ಯ. ಹಿಂದಿನ ಅನುಭವದ ಆಧಾರದ ಮೇಲೆ ಹೇಳುವುದಾದರೆ, 2000 ರೂಪಾಯಿ ಕರೆನ್ಸಿ ನೋಟುಗಳಲ್ಲಿ ಸಂಗ್ರಹಿಸಿರುವ ಕಪ್ಪು ಹಣವನ್ನು ಸ್ವಚ್ಛಗೊಳಿಸುವ ಬದಲು, ಈ ಕ್ರಮವು ಅದನ್ನು ಕಾನೂನುಬದ್ಧಗೊಳಿಸುವ ಮತ್ತಷ್ಟು ಸಾಧ್ಯತೆಯನ್ನು ಹೊಂದಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಮೋದಿ ನಿರ್ಮಿತ ನೋಟುರದ್ಧತಿ ದುರಂತ ಕೋಟಿಗಟ್ಟಲೆ ಜನಗಳ ಜೀವನೋಪಾಯಗಳನ್ನು ಊನಗೊಳಿಸುವ ಕ್ರಿಮಿನಲ್ ಕೃತ್ಯ ಎಸಗಿದೆ, ನೂರಾರು ಜೀವಗಳನ್ನು ಬಲಿತೆಗೆದುಕೊಂಡಿದೆ, ಉದ್ಯೋಗ ಸೃಷ್ಟಿ ಮತ್ತು ಜಿಡಿಪಿ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುವ ಅನೌಪಚಾರಿಕ ಆರ್ಥವ್ಯವಸ್ಥೆಯನ್ನು ಮತ್ತು ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳನ್ನು ಧ್ವಂಸಗೊಳಿಸಿದೆ. ಈ ದುರಂತದ ನಂತರ ಚಲಾವಣೆಯಲ್ಲಿರುವ ನಗದು ಈಗ 83% ಹೆಚ್ಚಾಗಿದೆ. ಭ್ರಷ್ಟಾಚಾರವನ್ನು ಕಾನೂನು ಬದ್ಧಗೊಳಿಸಲಾಗಿದೆ, ಅದು ಹಲವು ಪಟ್ಟು ಹೆಚ್ಚಿದೆ. ಭಯೋತ್ಪಾದಕ ದಾಳಿಗಳು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇವೆ.
ಮೋದಿ ನಮ್ಮ ಆರ್ಥಿಕತೆಗೆ ತಂದ ವಿನಾಶ ಮತ್ತು ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು ಪ್ರತಿರೋಧಿಸಬೇಕು ಮತ್ತು ಸೋಲಿಸಬೇಕು. ಬಂಟ ಕಾರ್ಪೊರೇಟ್ -ಕೋಮುವಾದಿ ನಂಟನ್ನು ತಿರಸ್ಕರಿಸಬೇಕು ಎಂದಿರುವ ಪೊಲಿಟ್ ಬ್ಯುರೊ ಇಂತಹ ನಿರಂಕುಶ ಏಕಪಕ್ಷೀಯ ಜನವಿರೋಧಿ ಕ್ರಮಗಳಿಂದ ನಮ್ಮ ಅರ್ಥವ್ಯವಸ್ಥೆಯನ್ನು ರಕ್ಷಿಸಲು ಒಂದಾಗಬೇಕೆಂದು ಜನರಿಗೆ ಮನವಿ ಮಾಡಿದೆ