ಮಡಿಕೇರಿ : ಮೇಕೆದಾಟು ಅಣೆಕಟ್ಟು ಕಾಮಗಾರಿ ವಿಚಾರದ ಕುರಿತು ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿದ್ದು, ಮೇಕೆದಾಟು ನಮ್ಮ ರಾಜ್ಯದ ಸಂಪತ್ತು ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಪ್ಪಚ್ಚು ರಂಜನ್, ಮೇಕೆದಾಟುವಿನಲ್ಲಿ ಏನು ಮಾಡಬೇಕು ಅಂತ ತಮಿಳುನಾಡನ್ನು ಕೇಳಬೇಕಿಲ್ಲ. ಈ ವಿಚಾರವಾಗಿ ತಮಿಳುನಾಡು ಮೂಗು ತೂರಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಮೇಕೆದಾಟು ಯೋಜನೆ ಆಗದಿದ್ರೆ ಕರ್ನಾಟಕಕ್ಕೆ ತೊಂದರೆ ಆಗುತ್ತದೆ. ಮೇಕೆದಾಟುವಿನಿಂದ ಅನೇಕ ಜಿಲ್ಲೆಗಳಿಗೆ ಅನುಕೂಲ ಇದೆ. 60 ಸಾವಿರಕ್ಕೂ ಅಧಿಕ ಎಕರೆ ಜಮೀನಿಗೆ ನೀರು ಸಿಗುತ್ತೆ ಮೇಕೆದಾಟು ಯೋಜನೆಯಿಂದ ಜನರಿಗೆ, ಕೃಷಿ ಚಟುವಟಿಕೆಗೆ ಅನುಕೂಲವಾಗಲಿದ್ದು ಕೂಡಲೆ ರಾಜ್ಯ ಸರಕಾರ ಕಾಮಗಾರಿ ಆರಂಭಿಸಬೇಕು ಎಂದು ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.
ಮೇಕೆದಾಟು ರಾಷ್ಟ್ರೀಯ ಸಂಪತ್ತು ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದ್ದು, ಕಾವೇರಿ ಕೂಡ ರಾಷ್ಟ್ರೀಯ ಸಂಪತ್ತು. ಆದರೆ ಕಾವೇರಿ ನೀರನ್ನು ನಾವು ಎಷ್ಟನ್ನು ಬಳಸಿಕೊಂಡು ಎಷ್ಟನ್ನು ತಮಿಳುನಾಡಿಗೆ ಕೊಡಬೇಕೆಂದು ನಿರ್ಧಾರವಾಗಿಲ್ಲವೆ. ಕೇಂದ್ರವೇ ಅದನ್ನು ನಿರ್ಧರಿಸಿರುವಾಗ ಮೇಕೆದಾಟು ವಿಚಾರದಲ್ಲೂ ಅದೇ ರೀತಿ ಆಗುತ್ತದೆ. ಕೇಂದ್ರ ನೀರಾವರಿ ಸಲಹಾ ಸಮಿತಿಯ ನಿರ್ದೇಶನದಂತೆ ಮೇಕೆದಾಟು ಯೋಜನೆ ಕಾಮಗಾರಿ ಆರಂಭ ಆಗಲಿ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ವಿಚಾರವಾಗಿ ರಾಜ್ಯ ಸರಕಾರ ತನ್ನ ಪ್ರಭಲವಾದ ನಿಲುವು ಮಂಡಿಸಿದ್ದು, ತಮಿಳುನಾಡು ಬಿಜೆಪಿ ಮಾತ್ರ ವಿಭಿನ್ನ ರಾಗ ಹಾಡುತ್ತಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರವರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಬಿಜೆಪಿ ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.