ಬೆಂಗಳೂರು : ಖ್ಯಾತ ವೈದ್ಯ ಸಾಹಿತಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಗಿರಿಜಮ್ಮ (70) ಇಂದು ದಾವಣಗೆರೆಯಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸರಳ ಕನ್ನಡದಲ್ಲಿ ವೈದ್ಯಕೀಯ ಮಾಹಿತಿಯನ್ನು ಒದಗಿಸಬೇಕು ಎನ್ನುವ ಧ್ಯೇಯದಿಂದ ಹತ್ತಾರು ಕೃತಿಗಳನ್ನು ರಚಿಸಿದ್ದ ಡಾ.ಗಿರಿಜಮ್ಮ ವೈದ್ಯಕೀಯ ಸಾಹಿತಿಯಾಗಿ ಜನಪ್ರಿಯರಾಗಿದ್ದರು. ಬೆಂಗಳೂರಿನಲ್ಲಿ 20 ವರ್ಷಗಳ ಸುದೀರ್ಘ ಅವಧಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು.
ಡಾ. ಎಚ್. ಗಿರಿಜಮ್ಮ ಅವರು ಹರಿಹರದಲ್ಲಿ ಹುಟ್ಟಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದರು. ಅವರ ತಾಯಿಯ ಆಸೆಯಂತೆ ಗಿರಿಜಮ್ಮ ಯಶಸ್ವಿ ವೈದ್ಯರಾದರು.
ಇದಲ್ಲದೆ ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ, ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿದ್ದಾರೆ.
ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಸೇರಿದಂತೆ ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ಸಂಪಾದಿಸಿದ್ದಾರೆ.
ಇವರ ಈ ಸಾಧನೆಗೆ ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪುರಸ್ಕಾರ ಹಾಗು ಬಿ.ಸರೋಜಾದೇವಿ ಪ್ರಶಸ್ತಿ, ಅನುಪಮಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.