ದೇವದುರ್ಗ : ಕೃಷ್ಣಾನದಿಯ ನೆರೆ ಪ್ರವಾಹದಿಂದ ನದಿ ಪಾತ್ರದ ಹಳ್ಳಿಗಳು ಹಾಗೂ ರೈತರ ಭೂಮಿಗಳು ಮುಳುಗಡೆಯಾಗಿ ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನದಿಪಾತ್ರದ ಹಳ್ಳಿಯ ಜನರಿಗೆ ಕುಡಿಯುವ ನೀರು ಸಿಗದೇ ತೊಂದರೆಯಾಗಿದೆ ರೈತರ ಭೂಮಿ ಮತ್ತು ಬೆಳೆಗಳು ರಸ್ತೆಗಳು ಕೊಚ್ಚಿಹೋಗಿವೆ, ಇದರಿಂದಾಗಿ ಅನೇಕ ಜನರು ಸಂಕಷ್ಟ ಅನುಭವಿಸುವಂತಾಗಿದೆ ಕೂಡಲೇ ಆ ಜನರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕ ಅಧ್ಯಕ್ಷ ನರಸಣ್ಣ ನಾಯಕ್ ಆಗ್ರಹಿಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಈ ಹಿಂದೆ 2019 ನೇ ಸಾಲಿನಲ್ಲಿ ಬಂದ ಪ್ರವಾಹದಲ್ಲಿ ಹಾಳಾದ ಬೆಳೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಮತ್ತೊಮ್ಮೆ ರೈತರಿಗೆ ಸಂಕಷ್ಟ ಎದುರಾಗಿದೆ ಪ್ರವಾಹ ಒಂದುಕಡೆಯಾದರೆ ಸರ್ಕಾರದ ಹಾಗೂ ನೀರಾವರಿ ಇಲಾಖೆಯ ಬೇಜವಾಬ್ದಾರಿಯಿಂದ ಎನ್‌ಆರ್‌ಬಿಸಿಯ ಕಾಲುವೆಗಳ ಪುನರ್ ನಿರ್ಮಾಣದ ಹೆಸರಿನಲ್ಲಿ ಎಲ್ಲಾ ಕಾಲುವೆಗಳನ್ನು ಒಡೆದು ಹಾಕಲಾಗಿದೆ. ಪ್ರತಿವರ್ಷ ವಾಡಿಕೆಯಂತೆ ಜುಲೈ 25ರಂದು ಕಾಲುವೆಗೆ ನೀರು ಹರಿಸಲಾಗುತ್ತಿತ್ತು ಅದರಂತೆ ರೈತರು ಮುಂಗಾರು ಬಿತ್ತನೆಗಾಗಿ ಮೆಣಸಿನ ನಾರು ಭತ್ತದ ಸಸಿಮಡಿ ಹಾಕಿದ್ದಾರೆ. ಇದಕ್ಕಾಗಿ ರೈತರು ಹಣ ಖರ್ಚು ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಕಾಲುವೆಗೆ ನೀರು ಹರಿಸದೇ ಇರುವುದರಿಂದ ರೈತರು ಮಾಡಿದ ಖರ್ಚು ನಷ್ಟವಾಗಲಿದೆ. ಮುಂಗಾರು ಬಿತ್ತನೆ ಸಮಯದಲ್ಲಿ ಕಾಲುವೆಗಳನ್ನು ಒಡೆದು ಹಾಕಿದ್ದು ಇದಕ್ಕೆ ಸರ್ಕಾರವೇ ನೇರ ಹೊಣೆಯಾಗಿರುತ್ತದೆ. ರೈತರ ನಷ್ಟದ ಪರಿಹಾರವನ್ನು ಸರ್ಕಾರವೇ ನೀಡಬೇಕು ರೈತರು ಇಂತಹ ಗಂಭೀರ ಸಮಸ್ಯೆಯನ್ನು ಎದುರಿಸುವಾಗ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದ ಕಚ್ಚಾಟದಲ್ಲಿ ಮುಳುಗಿ ರೈತರ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನರಸಣ್ಣ ನಾಯಕ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ
ಇನ್ನೊಬ್ಬ ರೈತ ಮುಖಂಡ ಶಬ್ಬೀರ್ ಜಾಲಹಳ್ಳಿ ಮಾತನಾಡಿ, ತಾಲೂಕಿನ ಶಾಸಕರು ಕೆ ಶಿವನಗೌಡ ನಾಯಕರು ಸಚಿವ ಸ್ಥಾನದ ಅಧಿಕಾರ ಪಡೆಯುವ ಭರದಲ್ಲಿ ರೈತರ ಸಮಸ್ಯೆಗಳನ್ನು ಮರೆತಿದ್ದಾರೆ. ಅಧಿಕಾರದ ಲಾಲಸೆಗಾಗಿ ಚುನಾವಣೆ ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿ ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳ ಸಮಾಧಿ ಮೇಲೆ ರಾಜ್ಯಭಾರ ಮಾಡಲು ಹೊರಟಿವೆ. ಪ್ರವಾಹದ ಎಲ್ಲಾ ಸಮಸ್ಯೆಗಳನ್ನು ತಾಲೂಕು ಆಡಳಿತ ಗಂಭೀರವಾಗಿ ತೆಗೆದುಕೊಂಡು ಯುದ್ಧೋಪಾದಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎನ್ನಾರ್ ಬಿಸಿ ಕಾಲುವೆಗಳಿಗೆ ನೀರು ಹರಿಸಲು ವಿಫಲವಾಗಿರುವ ಸರ್ಕಾರ ರೈತರ ಮುಂಗಾರು ಬೆಳೆಯ ಬೆಳೆ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದರು.
ಬೆಳೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಳಂಬ ಮಾಡಿದರೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸಂಘಟಿಕರು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠೀಯಲ್ಲಿ ರೈತ ಸಂಘದ ಮುಖಂಡರಾದ ಹನುಮಂತ, ದುರಗಪ್ಪ, ಗುರು ನಾಯಕ, ಮಕ್ತುಂಪಾಷ ಮುಂತಾದವರು ಇದ್ದರು.