ಹಾವೇರಿ : ಶಾಲೆಯ ಅಭಿವೃದ್ಧಿ ಶುಲ್ಕ ಕಟ್ಟಿಲ್ಲವೆಂಬುದನ್ನು ಮರೆಮಾಚಿ ವಿದ್ಯಾರ್ಥಿಗಳಿಗೆ ನೀವು ದಡ್ಡರಿದ್ದಿರಿ ನಿಮ್ಗೆ ಪರೀಕ್ಷೆ ಬರೆಸಿದ್ರೆ ಶಾಲೆಯ ಫಲಿತಾಂಶ ಕಡಿಮೆಯಾಗಿ, ಶಾಲೆಯ ಪ್ರತಿಷ್ಠೆ ಕಮ್ಮಿಯಾಗುತ್ತೆಂದು ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಅವಕಾಶವನ್ನು ಕಸಿದುಕೊಂಡ ಘಟನೆ ನಡೆದಿದೆ.
ಇಂದು ನಡೆದ ಎಸ್.ಎಸ್.ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಚಿಕ್ಕೇರೂರಿನ ಮಹಾತ್ಮ ಗಾಂಧಿ ಅನುದಾನಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅ್ಯಂಡ್ ಪಟಾಲಂ ನ ದುಷ್ಟ ಕ್ರಮವನ್ನು ಖಂಡಿಸಿ ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿಂದು ಅವಕಾಶ ವಂಚಿತ ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಹಾವೇರಿ ಜಿಲ್ಲಾಡಳಿತ ಕಛೇರಿ ಎದುರು ಪ್ರತಿಭಟನೆ ನಡೆಸಿದರು
30 ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ತುಂಬಿದ್ದರೂ ಅವರ ದಾಖಲೆಗಳನ್ನು ಎಸ್ಎಸ್ಎಲ್ ಸಿ ಬೋರ್ಡ್ ಗೆ ಕಳುಹಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡದೇ, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚಲ್ಲಾಟವಾಡಿದ ಶಾಲೆಯ ಮ್ಯಾನೇಜ್ಮೆಂಟ್ ಹಾಗೂ ಸಿಬ್ಬಂದಿ ವರ್ಗದ ಕ್ರೌರ್ಯವನ್ನು ಯಾರೂ ಕೂಡ ಸಹಿಸಬಾರದು. ಮತ್ತೆ ಇಷ್ಟೆಲ್ಲ ಅನಾಹುತ ಸಂಭವಿಸಲು ಬಿಇಓ, ಡಿಡಿಪಿಐ ಸೇರಿದಂತೆ ಶಿಜ್ಷಣ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಪರಿಣಾಮ ಪ್ರಮುಖ ಕಾರಣ. ಹಾಗಾಗಿ ಇವರೂ ಸಹ ಇದರ ಹೊಣೆಗಾರರು ಎಂದು ಎಸ್.ಎಫ್ ಐ ಹಾವೇರಿ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಆರೋಪಿಸಿದರು.
DYFI ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಎಸ್ಎಫ್ಐ ಮದ್ಯೆಪ್ರವೇಶ ಮಾಡಿ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಪರಿಣಾಮ ಮುಖ್ಯ ಶಿಕ್ಷಕರನ್ನು ಅಮಾನತ್ತು ಮಾಡಿ ಜಿಲ್ಲಾಡಳಿತ ಕೈ ತೊಳೆದುಕೊಂಡಿದೆ. ಆದರೆ ಕೇವಲ ಅವರ ಅಮಾನತ್ತು ಮಾಡಿರುವುದು ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ. ಬದಲಾಗಿ ರಾಜ್ಯ ಸರಕಾರ ಈ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಒದಗಿಸಿಕೊಡಬೇಕು. ಅದರಲ್ಲೂ ರಿಪಿಟರ್ಸ್ ಅಂತ ಪರಿಗಣಿಸದೆ ಪಸ್ಟ್ ಅಟೆಂಪ್ಟ್ ಆಗಿ ಪರಿಗಣಿಸಬೇಕು. ಹಾಗೂ ದುಡ್ಡಿನಾಸೆಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡಲು ಮುಂದಾದ ಶಾಲೆಯ ಮುಖ್ಯ ಶಿಕ್ಷಕ ಸೇರಿದಂತೆ ಮ್ಯಾನೇಜ್ಮೆಂಟ್ ಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕುರಿತು ಇಂದು ಜಿಲ್ಲಾಧಿಕಾರಿಗಳಾದ ಸಂಜಯ್ ಶೆಟ್ಟಣ್ಣವರಿಗೆ ಮನವರಿಕೆ ಮಾಡಿ ಮನವಿ ಸಲ್ಲಿಸಲಾಗಿದೆ. ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತೇವೆಂದು ಭರವಸೆ ನೀಡಿದ್ದಾರೆ ಕೂಡಲೇ ಅದನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಅವಕಾಶ ಸಿಗದೇ ಹೋದರೇ ಹೋರಾಟವೂ ಕೂಡ ತೀವ್ರವಾಗುತ್ತದೆ. ಶಿಕ್ಷಣ ಪ್ರೇಮಿಗಳೆಲ್ಲರೂ ಇದಕ್ಕೆ ಬೆಂಬಲಿಸಿ ಸಹಕರಿಸಬೇಕು. ಹಾಗೂ ಮುಖ್ಯವಾಗಿ ಪಾಲಕರು ಈ ಖಾಸಗೀ ಶಾಲೆಗಳ ಧನದಾಹಿ ನೀತಿಗೆ ಬಲಿಯಾಗದೇ ಎಚ್ಚರಗೊಳ್ಳಬೇಕಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೋಷಕರು ಆಗ್ರಹಿಸಿದ್ದಾರೆ.