ಬೆಂಗಳೂರು: ಬೆಂಗಳೂರಿನಲ್ಲಿ ಚಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಮೇಲೆ ಇಂದು ಬೆಳಗ್ಗೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂದು ಹಾಡಹಗಲೇ ನಡುರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚಾಕುವಿನಿಂದ ಕುತ್ತಿಗೆ ಸೀಳಿ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಕಾರ್ಪೋರೇಟರ್ ರೇಖಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಚಲವಾದಿಪಾಳ್ಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಇಂದು ಬೆಳಗ್ಗೆ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಲಾಂಗು, ಮಚ್ಚಿನಿಂದ ಹಲ್ಲೆ ನಡೆಸಲಾಗಿತ್ತು. ರೇಖಾ ಕದಿರೇಶ್ ಕಚೇರಿ ಮುಂದೆಯೇ ಹಲ್ಲೆ ಮಾಡಿದ ಆರೋಪಿಗಳು ಎಸ್ಕೇಪ್ ಆಗಿದ್ದರು. ರೇಖಾ ಅವರ ಸಂಬಂಧಿ ಪೀಟರ್ ಹಾಗೂ ಸುರೇಶ್ ಎಂಬಾತನಿಂದ ಹಲ್ಲೆ ನಡೆದಿತ್ತು. ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿದ್ದ ಅವರು ಬಳಿಕ ಪರಾರಿಯಾಗಿದ್ದರು.
ನಿರಂತರ ಸುದ್ದಿಗಳಿಗಾಗಿ : ನಮ್ಮ ವಾಟ್ಸಪ್ ಗುಂಪಿಗೆ ಸೇರಿ ಕೊಳ್ಳಿ
ಈ ಮೊದಲು ರೇಖಾ ಅವರ ಗಂಡ ಕದಿರೇಶ್ ಅವರನ್ನು ಕೂಡ 3 ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು. ಈ ಹಿಂದೆ 2018ರಲ್ಲಿ ಕದಿರೇಶ್ ಅವರನ್ನು ಶೋಬನ್ ಮತ್ತು ಗ್ಯಾಂಗ್ ಕೊಲೆ ಮಾಡಿತ್ತು. ಇದೀಗ ರೇಖಾ ಕೂಡ ನಡುರಸ್ತೆಯಲ್ಲೇ ಕೊಲೆಯಾಗಿದ್ದಾರೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ದೌಡಾಯಿಸಿ, ಮಾರಾಣಂತಿಕ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ರೇಖಾ ಕದಿರೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರೇಖಾ ಕದಿರೇಶ್ ಕೊಲೆ ಬಗ್ಗೆ ಕಮಿಷನರ್ ಜೊತೆ ಚರ್ಚೆ ಮಾಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮಗಳನ್ನು ತೆಗೆದು ಕೊಳ್ತೇವೆ. ಇನ್ನು 24 ಗಂಟೆಗಳಲ್ಲಿ ಅವರನ್ನು ಬಂಧಿಸುವ ಕೆಲಸ ಮಾಡುತ್ತೇವೆ. ಈ ಹಿಂದೆ ಅವರ ಪತಿಯನ್ನು ಕೂಡ ಹತ್ಯೆ ಮಾಡಲಾಗಿತ್ತು. ಈಗ ರೇಖಾ ಅವರನ್ನೂ ಹತ್ಯೆ ಮಾಡಿದ್ದಾರೆ.ಕೊಲೆಗಾರರನ್ನು 24 ಗಂಟೆಯೊಳಗೆ ಬಂಧಿಸುತ್ತೇವೆ, ಅವರ ವಿರುದ್ಧ ಏನೆಲ್ಲಾ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ತೆಗೆದು ಕೊಳ್ತೇವೆ ಎಂದಿದ್ದಾರೆ.