ಕಲಬುರಗಿ: ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ(86) ಅವರು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಸಂತ ಕಷ್ಟಗಿ ಕಲಬುರಗಿಯ ನಿವಾಸದಲ್ಲಿ ನಿಧನರಾಗಿದ್ದಾರೆ.
1936ರ ಅಕ್ಟೋಬರ್ 10 ರಂದು ಬಾದಾಮಿಯಲ್ಲಿ ಜನಿಸಿದ್ದ ವಸಂತ ಕುಷ್ಟಗಿ ಅವರು ಎಂಎ ಪದವಿ ಪಡೆದ ಬಳಿಕ ಬೀದರಿನ ಟಿ.ವಿ. ಭೂಮರೆಡ್ಡಿ ಕಾಲೇಜು, ಶಹಾಬಾದಿನ ಎಸ್‌ಎಸ್‌ಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಬಳಿಕ ಕಲಬುರ್ಗಿಯ ಎಂಎಸ್‌ಐ ಕಾಲೇಜು ಮತ್ತು ಶಹಾಬಾದಿನ ಎಸ್‌ಎಸ್‌ಎಂ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ನಂತರವೂ ಸ್ವಾಮಿ ರಾಮಾನಂದ ತೀರ್ಥ ಸಂಶೋಧನ ಸಂಸ್ಥೆಯಲ್ಲಿ ಗೌರವ ನಿರ್ದೇಶಕರಾಗಿ, ಗುಲಬರ್ಗಾ ವಿ.ವಿ ಸ್ಥಾಪನೆಯಾದಾಗ(1980-82) ಉಪಕುಲಪತಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ವಸಂತ ಕುಷ್ಟಗಿ ಅವರಿಗೆ ತಾಯಿ ಸುಂದರಾಬಾಯಿ ಅಕ್ಷರಾಭ್ಯಾಸ ಮಾಡಿಸಿದರೆ, ತಂದೆ ರಾಘವೇಂದ್ರ ಕುಷ್ಟಗಿ ಅವರು ಸಾಹಿತ್ಯದತ್ತ ಒಲವು ಮೂಡಿಸಿದ್ದರು.
60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಪ್ರೊ.ವಸಂತ ಕುಷ್ಟಗಿ ಅವರು; ದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿ ಅಗಾಧವಾದುದು. ಪ್ರಾಧ್ಯಾಪಕ, ಸಾಹಿತಿ, ಲೇಖಕ, ಪತ್ರಕರ್ತ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ಹೋರಾಟಗಾರ… ಹೀಗೆ ವೈವಿಧ್ಯಮಯ ವ್ಯಕ್ತಿತ್ವ ಅವರದು. ಕತೆ, ಕವನ, ದಾಸ ಸಾಹಿತ್ಯ, ನಾಟಕ, ಲೇಖನ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಅವರು ಕಲ್ಯಾಣ ಕರ್ನಾಟಕ ಭಾಗದ ಭಾಷೆಗೆ ಗಟ್ಟಿ ನೆಲೆ ತಂದುಕೊಟ್ಟಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಲಬುರ್ಗಿಯಲ್ಲಿ ನಡೆದ ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಲು ಇವರ ಹೆಸರು ಮೂಂಚೂಣಿಯಲ್ಲಿತ್ತು. ಪ್ರೋ ವಸಂತ ಕುಷ್ಟಗಿಯವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.