ಸಿಎಂ ರೇಸ್ನಲ್ಲಿದ್ದಾರೆ ಡಾ.ಅಶ್ವತ್ ನಾರಾಯಣ್, ಪ್ರಹ್ಲಾದ್ ಜೋಶಿ, ದೆಹಲಿಯಲ್ಲಿ 20 ಶಾಸಕರ ಟೆಂಟ್
ಬೆಂಗಳೂರು: ಕೋವಿಡ್ ಸಂಕಷ್ಟದ ಮಧ್ಯೆಯೇ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಿದೆ. ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ, ಸರ್ಕಾರದ ಕೆಲವು ನಿಲುವುಗಳು ಕಮಲ ಪಾಳಯದ ಒಂದಿಷ್ಟು ಶಾಸಕರಲ್ಲಿ ಅಸಮಾಧಾನ ಸೃಷ್ಟಿಸಿದ್ದು ಆಂತರಿಕವಾಗಿ ಚರ್ಚೆಗೆ ಗ್ರಾಸವಾಗಿದೆ
ನಾಯಕತ್ವ ಬದಲಾವಣೆಯ ಕೂಗು ಎದ್ದಿರುವ ಬೆನ್ನಲ್ಲೇ ಶಾಸಕರ ಬೇಡಿಕೆಯಂತೆ ಜೂನ್ ಮೊದಲ ವಾರದಲ್ಲಿ ಶಾಸಕರ ಸಭೆ ಕರೆಯಲು ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಶಾಸಕರ ಸಭೆ ನಡೆಸುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಿಜೆಪಿಯ ಕೆಲ ನಾಯಕರುಗಳಿಂದ ಲಭ್ಯವಾಗಿದೆ.
ಹಲವು ಶಾಸಕರು ದೆಹಲಿಗೆ ಹಾರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ರಾಜ್ಯದ ಸದ್ಯ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದ್ದು, ಈ ಭೇಟಿಯ ಬಳಿಕ ಈಗ ಶಾಸಕರ ಸಭೆಗೆ ಸಿಎಂಗೆ ಹೈಕಮಾಂಡ್ ಸೂಚನೆ ನೀಡಿದೆ ಎಂಬುದಾಗಿ ತಿಳಿದುಬಂದಿದೆ. ಈ ಮೂಲಕ ಬಿಜೆಪಿಯಲ್ಲಿನ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯದಲ್ಲೀಗ ನಾಯಕತ್ವ ಬದಲಾವಣೆಗೆ ಬಿಜೆಪಿ ಶಾಸಕರೇ ಪಟ್ಟು ಹಿಡಿದಿದ್ದು, 20 ಶಾಸಕರು ದೆಹಲಿಗೆ ಹಾರಿದ್ದಾರೆ.
ಕಳೆದ ಕೆಲ ತಿಂಗಳಿನಿಂದಲೂ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ಬಿಜೆಪಿ ಪಾಳಯದಲ್ಲಿಯೇ ಯತ್ನಗಳು ನಡೆಯುತ್ತಿದೆ. ಅದರ ಬಸನಗೌಡ ಪಾಟೀಲ ಯತ್ನಾಳ್ ಖುದ್ದು ಬಹಿರಂಗವಾಗಿಯೇ ಸಿಎಂ ಬದಲಾವಣೆಯ ಕುರಿತು ಹೇಳಿಕೆಯನ್ನು ನೀಡಿದ್ದರು. ಜೂನ್ 7ರಂದು ಪಕ್ಷದ ಶಾಸಕರ ಸಭೆಗೆ ಸಿಎಂ ಬಿಎಸ್ವೈ ನಿರ್ಧರಿಸಿದ್ದಾರೆ. ಹೈಕಮಾಂಡ್ ಆದೇಶ ಬಳಿಕ ಬಿಜೆಪಿ ಶಾಸಕರ ಸಭೆಗೆ ಸಿಎಂ ತೀರ್ಮಾನ ಮಾಡುತ್ತಾರೆ. ಹಾಗಾದ್ರೆ ಶಾಸಕರ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ : ಮುಖ್ಯಮಂತ್ರಿ ಖುರ್ಚಿ ಮತ್ತೆ ಅಲುಗಾಡುತ್ತಿದೆ
ಬದಲಾವಣೆಗೆ ಪ್ರಮುಖ ಕಾರಣಗಳೇನು? : ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಇಂದು ನಿನ್ನೆಯದಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಎಸ್ವೈ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆ ಶುರುವಾಗಿದೆ. ಇದಕ್ಕೆ ಕೊಡುತ್ತಿರುವ ಕಾರಣಗಳು ಹಲವು. ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರದಲ್ಲಿ ಹೆಚ್ಚಿನ ಆದ್ಯತೆ ಇಲ್ಲ. ಈ ಕಾರಣಕ್ಕಾಗಿ ವಯಸ್ಸು ಆಧಾರದಲ್ಲಿ ಬದಲಾವಣೆ ಅಗತ್ಯ ಎಂಬ ವಾದವಿದೆ. ಅದರ ಜೊತೆಗೆ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗಿದೆ.
ಮತ್ತೊಂದು ಕಡೆ ಪಕ್ಷದ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಕೂಡಾ ಕಾರಣ ಎಂಬ ವಿಚಾರ ಕೇಳಿಬರುತ್ತಿದೆ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ, ಬೆಡ್ ಬ್ಲ್ಯಾಕಿಂಗ್ ದಂಧೆ, ಜಿಂದಾಲ್ಗೆ 3,677 ಎಕರೆ ಭೂಮಿಯನ್ನು ನೀಡಿರುವುದು ಇವೆಲ್ಲವೂ ಇದೀಗ ಸಿಎಂ ಬಿಎಸ್ವೈ ವಿರುದ್ಧದ ಆರೋಪಪಟ್ಟಿಗೆ ದಾಖಲೆಗಳಾಗಿ ನಿಂತಿವೆ.
ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗುತ್ತದ ಎಂದು ಬಿಎಸ್ವೈ ವಿರೋಧಿ ಬಣ ಹೇಳುತ್ತಿದೆ. ಆದರೆ ಬಿಎಸ್ವೈ ಬಣ ಮಾತ್ರ ಕೋವಿಡ್ ನಿರ್ವಹಣೆ ಬಗ್ಗೆಯಷ್ಟೇ ಚರ್ಚೆ ಆಗುತ್ತೆ ಎನ್ನುತ್ತಿದೆ. ಕಳೆದ ಶನಿವಾರ ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಭೆಯೊಂದು ನಡೆದಿತ್ತು. ಕಾವೇರಿ ನಿವಾಸದಲ್ಲಿ 1 ಗಂಟೆಗೂ ಅಧಿಕ ಹೊತ್ತು ನಡೆದ ಮಾತುಕತೆಯಲ್ಲಿ ಆರ್ಎಸ್ಎಸ್ ನಾಯಕರು ಸಿಎಂ ಭೇಟಿ ಮಾಡಿದ್ದರು.
ಆರ್ಎಸ್ಎಸ್ ಮುಖಂಡ ಮುಕುಂದ್ ಸಿಎಂ ಭೇಟಿ ಮಾಡಿ ದೀರ್ಘ ಸಮಾಲೋಚನೆ ನಡೆಸಿದ್ದರು. ಭವಿಷ್ಯದ ನಾಯಕತ್ವ ಬಗ್ಗೆಯೇ ಪ್ರಮುಖವಾಗಿ ಚರ್ಚೆ ನಡೆದಿದೆ. ದೆಹಲಿಗೆ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್, ಶಾಸಕ ಅರವಿಂದ ಬೆಲ್ಲದ ಮತ್ತಿತರರು ಕರ್ನಾಟಕ ಭವನಕ್ಕೆ ಬಾರದೇ ಹೋಟೆಲ್ನಲ್ಲಿ ತಂಗಿದ್ದಾರೆ. ಪಕ್ಷದ ವರಿಷ್ಠರನ್ನು ಭೇಟಿ ಮಾಡಿರುವ ಅವರು, ರಾಜ್ಯದ ರಾಜಕೀಯ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರವಿಂದ ಬೆಲ್ಲದ ಮುಂದಿನ ನಾಯಕ : ಹುಬ್ಬಳ್ಳಿ-ಧಾರವಾಡ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅರವಿಂದ್ ಬೆಲ್ಲದ್ ಅವರನ್ನು ಮುಂದಿನ ಬಿಜೆಪಿ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ, ಸಚಿವ ಯೋಗೇಶ್ವರ್ ಜೊತೆ ದೆಹಲಿಗೆ ತೆರಳಿರುವ ಬೆಲ್ಲದ್ ಅಲ್ಲಿ ಯಾವುದೇ ಕೇಂದ್ರ ನಾಯಕರನ್ನು ಭೇಟಿ ಮಾಡಲಿಲ್ಲ, ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಬೆಲ್ಲದ್ ಒಂದು ವೇಳೆ ಸಿಎಂ ಹುದ್ದೆ ಖಾಲಿಯಾದರೇ ಅವರೇ ಮುಂದಿನ ಆಯ್ಕೆ ಎಂದು ಹೇಳಲಾಗುತ್ತಿದೆ. ಗಣಿ ಸಚಿವ ಮುರುಗೇಶ್ ನಿರಾಣಿ ಅವರು ದೆಹಲಿಗೆ ತೆರಳುತ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ಅಂತಿಮ ಕ್ಷಣದಲ್ಲಿ ಯೋಜನೆ ಬದಲಾಗಿದೆ ಎನ್ನಲಾಗಿದೆ. ಗುರುವಾರ ಸಂಪುಟ ಸಭೆ ನಡೆಯಲಿದ್ದು, ಬಿಜೆಪಿ ಪಾಳೇಯದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ನಡುವೆ ಸಿಎಂ ಹುದ್ದೆ ಪ್ರಮುಖ ಆಕಾಂಕ್ಷಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರನ್ನು ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಶಾಸಕರಾದ ರಮೇಶ್ ಜಾರಕಿಹೊಳಿ, ಸಚಿವರಾದ ಭೈರತಿ ಬಸವರಾಜ್ ಮತ್ತು ಸುಧಾಕರ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೊದಲಿಗೆ ತುಮಕೂರಿಗೆ ಭೇಟಿ ನೀಡಿದ್ದ ಸುಧಾಕರ್ ನಂತರ ಚಿತ್ರದುರ್ಗಕ್ಕೆ ತೆರಳಿದರು, ಅವರ ಜೊತೆ ಭೈರತಿ ಬಸವರಾಜ್ ಜೊತೆಯಾದರು. ಇಬ್ಬರು ಸೇರಿ ಶಿಗ್ಗಾವ್ ನಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಂಚರ ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಅವರನ್ನು ಭೇಟಿಯಾಗಿದ್ದಾರೆ.
ನಂತರ ನಾಲ್ವರು ರಾತ್ರಿ ಒಟ್ಟಿಗೆ ಭೋಜನ ಮಾಡಿದ್ದಾರೆ. ಅದಾದ ಮರುದಿನ ಬೆಳಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿರುವುದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ : ನನಗೆ ದಿಲ್ಲಿಯಿಂದ ಮಾಹಿತಿ ಸಿಕ್ಕಿದೆ; ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ: ಸಿದ್ದರಾಮಯ್ಯ
ಕಳೆದೆರಡು ದಿನಗಳಿಂದಲೂ ಬಿಜೆಪಿಯ 20 ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಶಾಸಕರು ಬೆಂಗಳೂರು – ಚೆನ್ನೈ ಮೂಲಕ ದೆಹಲಿಗೆ ತಲುಪಿದ್ದಾರೆ ಎಂಬ ಮಾತುಗಳು ಬಿಜೆಪಿ ಪಾಳಯದಲ್ಲಿ ಹಬ್ಬಿದೆ. ಪ್ರಮುಖವಾಗಿ ಶಾಸಕರು ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿದಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ.
ಇನ್ನೊಂದೆಡೆ ಬಿಜೆಪಿ ಪಾಳಯದಲ್ಲಿ ಸಿಎಂ ಗಾದಿಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಒಂದೆಡೆ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರ ಹೆಸರುಗಳು ಬಲವಾಗಿಯೇ ಕೇಳಿಬರುತ್ತಿದೆ.
ಕಳೆದೆರಡು ದಿನಗಳಿಂದಲೂ ಬಿಜೆಪಿ ವರಿಷ್ಠರ ಭೇಟಿಗಾಗಿ ಶಾಸಕರು ಕಾದು ಕುಳಿತಿದಿದ್ದಾರೆ. ಬಿಜೆಪಿಯ ರೆಬಲ್ ಶಾಸಕರ ನಾಯಕತ್ವವನ್ನು ಸಿಪಿ ಯೋಗೀಶ್ವರ್ ವಹಿಸಿಕೊಂಡಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ನಾಳೆ ಸಂಜೆಯೇ ಬಿಜೆಪಿ ವರಿಷ್ಠರ ಜೊತೆಗೆ ಬಿಜೆಪಿ ಶಾಸಕರು ಸಭೆ ನಡೆಸೋದು ಬಹುತೇಕ ಖಚಿತ. ಅಲ್ಲದೇ ರಾಜ್ಯದಲ್ಲಿ ಜೂನ್ 10ರ ಒಳಗಾಗಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಕೇವಲ 6 ತಿಂಗಳ ಅವಧಿಗೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಆದರೆ, ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಪ್ರವಾಹ, ಕೊರೊನಾ ಅಬ್ಬರದಿಂದಲಾಗಿ ಸಿಎಂ ಕುರ್ಚಿ ಭದ್ರವಾಗಿತ್ತು. ಆದರೆ ಈಗ ಕೊರೊನಾ ಸಂಕಷ್ಟದ ನಡುವಲ್ಲೇ ಬಿಜೆಪಿ ಶಾಸಕರೇ ನಾಯಕತ್ವ ಬದಲಾವಣೆಗೆ ಕಹಳೆ ಮೊಳಗಿಸಿದ್ದಾರೆ. ಬಿಜೆಪಿ ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರುತ್ತಿದೆ. ಜನ ಲಸಿಕೆ, ಬೆಡ್, ಆಕ್ಸಿಜನ್ ಎಂದು ಪರಿತಪಿಸುತ್ತಿದ್ದಾರೆ. ಲಾಕ್ಡೌನ್ ಕಾರಣದಿಂದ ಬಹಳಷ್ಟು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ. ಈ ಸಂದರ್ಭದಲ್ಲಿ ಜನರ ಜೊತೆಗಿದ್ದು ಅವರ ರಕ್ಷಣೆಗೆ ನಿಲ್ಲಬೇಕಾದ ಶಾಸಕರು ಪ್ರಮುಖ ಹುದ್ದೆಗಳ ಆಸೆಗಾಗಿ ಸುತ್ತಾಟ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸುತ್ತಿದ್ದಾರೆ.