G20 ಕಾರಣದಿಂದ ದೆಹಲಿ ವ್ಯಾಪಾರಿಗಳಿಗೆ 400 ಕೋಟಿ ರೂ. ನಷ್ಟ!

ನವದೆಹಲಿ: G20 ಶೃಂಗಸಭೆಯ ಸಂದರ್ಭದಲ್ಲಿ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ವ್ಯವಹಾರ ಕೇಂದ್ರಗಳನ್ನು ಮುಚ್ಚಿದ್ದರಿಂದ, ರಾಷ್ಟ್ರ ರಾಜಧಾನಿಯ ವ್ಯಾಪಾರಿಗಳಿಗೆ ಸುಮಾರು 300 ರಿಂದ 400 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಜೊತೆಗೆ ಪ್ರದೇಶದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್‌ಗಳು ಮುಚ್ಚಲ್ಪಟ್ಟಿದ್ದರಿಂದ ಸುಮಾರು 9,000 ವಿತರಣಾ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ ಎಂದು ವರದಿ ಹೇಳಿದೆ.

G20 ಶೃಂಗಸಭೆಗಾಗಿ ಪ್ರದೇಶದ ಎಲ್ಲಾ ವಾಣಿಜ್ಯ ಮತ್ತು ಆರ್ಥಿಕ ಸಂಸ್ಥೆಗಳನ್ನು ಸೆಪ್ಟೆಂಬರ್ 8 ಮತ್ತು 10 ರ ನಡುವೆ ಮುಚ್ಚಲಾಗಿತ್ತು. ಟ್ರಾಫಿಕ್ ನಿರ್ಬಂಧಗಳಿಂದಾಗಿ ಜನರು ಮನೆಯೊಳಗೆ ಇದ್ದ ಕಾರಣ ನಿಯಂತ್ರಿತ ವಲಯದ ಹೊರಗಿರುವ ಅನೇಕ ವ್ಯಾಪಾರಿ ಕೇಂದ್ರಗಳಲ್ಲಿ ಕೂಡಾ ಈ ವೇಳೆ ವ್ಯಾಪಾರ ಅರ್ಧದಷ್ಟು ಕಡಿಮೆಯಾಗಿದ್ದವು ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ: ಬಿ.ಕೆ. ಹರಿಪ್ರಸಾದ್‌ಗೆ ನೋಟಿಸ್‌ ಕೊಟ್ಟ ಕಾಂಗ್ರೆಸ್‌ ಹೈಕಮಾಂಡ್‌

ನವದೆಹಲಿ ಟ್ರೇಡರ್ಸ್ ಅಸೋಸಿಯೇಷನ್ (ಎನ್‌ಡಿಟಿಎ) ಅಧ್ಯಕ್ಷ ಅತುಲ್ ಭಾರ್ಗವ ಮಾತನಾಡಿ, “G20 ಯ ಮೂರು ದಿನಗಳ ಮುಚ್ಚುವಿಕೆಯಿಂದ ನವದೆಹಲಿಯ ವ್ಯಾಪಾರಿಗಳು ಸುಮಾರು 300-400 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ” ಎಂದು ಹೇಳಿದ್ದಾರೆ. ಈ ವೇಳೆ ದೆಹಲಿಯಲ್ಲಿಆಹಾರ ಮತ್ತು ಡೆಲಿವರಿ ಸಂಖ್ಯೆಗಳು ಕನಿಷ್ಠ 50% ದಷ್ಟು ಕಡಿಮೆಯಾಗಿದೆ ಮತ್ತು ಮಾರಾಟವು 20% ದಷ್ಟು ಇಳಿಕೆ ಕಂಡಿದೆ ಎಂದು ವರದಿಗಳು ಹೇಳಿವೆ.

ರಾಜಧಾನಿಯ ಪ್ರಮುಖ ಮಾರುಕಟ್ಟೆಗಳಾದ ಖಾನ್ ಮಾರ್ಕೆಟ್, ಕನ್ನಾಟ್ ಪ್ಲೇಸ್ ಮತ್ತು ಜನಪಥ್ ಪ್ರದೇಶಗಳು ಶಾಪಿಂಗ್ ಮತ್ತು ಆಹಾರ ಸೇವನೆಯ ಪ್ರದೇಶಗಳಾಗಿವೆ. ಈ ಪ್ರದೇಶಗಳು ಹೆಚ್ಚಿನ ಸಂಖ್ಯೆಯ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತವೆ, ಆದರೆ ಜಿ20 ಕಾರಣಕ್ಕೆ ಪ್ರದೇಶದಲ್ಲಿ ವ್ಯಾಪಾರವು ಇಲ್ಲದಾಗಿತ್ತು.

ಇದನ್ನೂ ಓದಿ: ಗಂಡು ಮಗುವಿಗಾಗಿ ಮಂತ್ರವಾದಿಯ ಮಾತಿನಂತೆ ಸ್ವಂತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆ!

“ಮಧ್ಯ ದೆಹಲಿಯನ್ನು ಮುಚ್ಚಿದ ಕಾರಣಕ್ಕೆ ಇತರ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಗ್ರಾಹಕರು ಚಾಂದಿನಿ ಚೌಕ್, ಕರೋಲ್ ಬಾಗ್ ಮತ್ತು ಸೌತ್ ಎಕ್ಸ್‌ಟೆನ್ಶನ್‌ನಿಂದ ಈ ವೇಳೆ ದೂರ ಉಳಿದರು. ಜಿ20 ಪ್ರತಿನಿಧಿಗಳು ಬಂದು ಸ್ಥಳೀಯ ಮಾರುಕಟ್ಟೆಗಳ ಅನುಭವವನ್ನು ಹೊಂದುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ನಿರಾಶೆಗೊಂಡಿದ್ದೇವೆ” ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (ಸಿಟಿಐ) ಅಧ್ಯಕ್ಷ ಬ್ರಿಜೇಶ್ ಗೋಯಲ್ ಹೇಳಿದ್ದಾರೆ.

ನವದೆಹಲಿಯ ನಿಯಂತ್ರಿತ ವಲಯಗಳಲ್ಲಿನ ಸ್ಥಗಿತದ ಮಧ್ಯೆ ಸುಮಾರು 9,000 ಗಿಗ್ ಕೆಲಸಗಾರರು ತಮ್ಮ ದೈನಂದಿನ ಗಳಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಇಂಟರ್ನೆಟ್ ಚಿಲ್ಲರೆ ವ್ಯಾಪಾರಿಗಳು, ಮಾರಾಟಗಾರರು ಮತ್ತು ವ್ಯಾಪಾರಿಗಳ ವೇದಿಕೆಯ (FIRST) ವರದಿ ಹೇಳಿದೆ. ನಿರ್ಬಂಧಿತ ಪ್ರದೇಶಗಳಲ್ಲಿ ಕಿರಾಣಿ ಅಗತ್ಯ ವಸ್ತುಗಳು, ವೈದ್ಯಕೀಯ ಅಂಗಡಿಗಳು ಮತ್ತು ಎಟಿಎಂಗಳನ್ನು ತೆರೆದಿರಲು ಮಾತ್ರ ವಿನಾಯಿತಿ ನೀಡಲಾಗಿತ್ತು.

500,000 ರೆಸ್ಟೊರೆಂಟ್ ಕಂಪನಿಗಳನ್ನು ಪ್ರತಿನಿಧಿಸುವ ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI), ಶೃಂಗಸಭೆಯ ಮೊದಲು ಆಹಾರ ವಿತರಣೆಯನ್ನು ಅತ್ಯಗತ್ಯ ಸೇವೆ ಎಂದು ಪರಿಗಣಿಸಲು ಸರ್ಕಾರಕ್ಕೆ ಪತ್ರ ಬರೆದಿತ್ತು.

ವಿಡಿಯೊ ನೋಡಿ: ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯೋದು ಹೇಗೆ ? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ? ವಿಶ್ಲೇಷಣೆ ಎಸ್.ವರಲಕ್ಷ್ಮಿ

Donate Janashakthi Media

Leave a Reply

Your email address will not be published. Required fields are marked *